ಸೋಮವಾರ, ಏಪ್ರಿಲ್ 19, 2021
32 °C

ಮಕ್ಕಳ ಹಕ್ಕುಗಳ ರಕ್ಷಣೆಗೆ ರಾಷ್ಟ್ರೀಯ ವಿಚಾರ ಸಂಕಿರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ನಗರದ ಸೇಠ್ ಶಂಕರಲಾಲ ಲಾಹೋಟಿ ಕಾನೂನು ವಿದ್ಯಾಲಯದಲ್ಲಿ ಇದೇ 12-13ರಂದು ‘ಮಕ್ಕಳ ಹಕ್ಕುಗಳ ರಕ್ಷಣೆಗೆ ಸಮಗ್ರ ಕಾನೂನು-ಇಂದಿನ ಅಗತ್ಯ’ ವಿಷಯದ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ವಿದ್ಯಾಲಯದ ಪ್ರಾಚಾರ್ಯ ಲಿಂಗರಾಜ ಎಂ.ಕೋಣಿನ್ ಬುಧವಾರ ತಿಳಿಸಿದರು. ಮಕ್ಕಳ ಹಕ್ಕುಗಳ ವಿವಿಧ ಆಯಾಮಗಳನ್ನು ಈ ವಿಚಾರ ಸಂಕಿರಣದಲ್ಲಿ ಚರ್ಚಿಸಲಾಗುವುದು. ಮಕ್ಕಳ ಹಕ್ಕುಗಳ ವಿಷಯದಲ್ಲಿ ಅವರ ವಯೋಮಾನಕ್ಕೆ ಸಂಬಂಧಿಸಿದಂತೆ ಹಲವಾರು ಗೊಂದಲಗಳಿವೆ.ಬಾಲ ಕಾರ್ಮಿಕರಿಗೆ ವಯೋಮಾನವನ್ನು 14ಕ್ಕೆ ಸೀಮಿತಗೊಳಿಸಲಾಗಿದೆ. ಬಾಲ್ಯ ವಿವಾಹಕ್ಕೆ 18ರ ಒಳಗೆ ಎಂದು ಹೇಳಲಾಗುತ್ತದೆ. ಬಾಲಾಪರಾಧಿಗಳಿಗೆ ಸಂಬಂಧಿಸಿದಂತೆ 16 ಎಂದು ತೀರ್ಮಾನಿಸಲಾಗಿದೆ. ಈ ಗೊಂದಲಗಳು ಮಕ್ಕಳ ಹಕ್ಕುಗಳ ಸಂರಕ್ಷಣೆಗೆ ಅಡೆತಡೆ ಉಂಟು ಮಾಡುತ್ತವೆ. ಇವನ್ನು ನಿವಾರಿಸಲು ಪರಿಹಾರೋಪಾಯಗಳ ಬಗ್ಗೆ ಚರ್ಚಿಸಲಾಗುವುದು ಎಂದು ವಿವರಿಸಿದರು.ಕಾನೂನು ಮಹಾವಿದ್ಯಾಲಯಗಳ ಉಪನ್ಯಾಸಕರು, ವಿದ್ಯಾರ್ಥಿಗಳು ಮಾತ್ರವಲ್ಲದೇ ಎನ್‌ಜಿಒಗಳು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿ ಸಹ ಈ ಕಾರ್ಯಾಗಾರದಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ. ಮಕ್ಕಳ ಹಕ್ಕುಗಳ ಸಂರಕ್ಷಣೆಗೆ ಸಮಗ್ರ ಕಾನೂನು ಅಳವಡಿಸುವುದು ಇಂದಿನ ಅಗತ್ಯವಾಗಿದೆ ಎಂದು ಸಂಕಿರಣದ ಆಯೋಜಕಿ ಮಹೇಶ್ವರಿ ಹಿರೇಮಠ ತಿಳಿಸಿದರು.ಈ ಸಂಕಿರಣವನ್ನು ಹೈಕೋರ್ಟ್ ನ್ಯಾಯಮೂರ್ತಿ ಅರಳಿ ನಾಗರಾಜ ಉದ್ಘಾಟಿಸುವರು, ಬೆಂಗಳೂರಿನ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷೆ ನೀನಾ ಪಿ.ನಾಯಕ್ ಉಪಸ್ಥಿತ ಇರುವರು. ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಶಿಲ್ ಜಿ.ನಮೋಶಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆವಹಿಸುವರು.  ಡಾ.ಸೂರ್ಯಕಾಂತ್ ಜಿ. ಪಾಟೀಲ, ಶಿವರಾಜ ನಿಗ್ಗುಡಗಿ, ಎನ್ ಗಿರಿಜಾ ಶಂಖರ, ರಾಜಶೇಖರ ಆರ್.ಕಣಕಿ, ಆರ್.ಎಸ್.ಹೊಸಗೌಡ ಮುಂತಾದವರು ಹಾಜರಿರುವರು ಎಂದು ತಿಳಿಸಿದರು.12ರಂದು ಕಾಲೇಜಿನ ಅವರಣದಲ್ಲಿ ಆರಂಭವಾಗುವ ಇ ಸಂಕಿರಣಕ್ಕೆ ಇತರ ರಾಜ್ಯಗಳಿಂದಲೂ  ಪ್ರತಿನಿಧಿಗಳು ಬರುವುದಾಗಿ ಮಾಹಿತಿ ನೀಡಿದ್ದಾರೆ. ಪ್ರತಿನಿಧಿ ಶುಲ್ಕವನ್ನು ಇರಿಸಿಲ್ಲ. ಸರ್ವರಿಗೂ ಉಚಿತ ಪ್ರವೇಶವಿದೆ. ಭಾಗವಹಿಸಿದ ಅಭ್ಯರ್ಥಿಗಳಿಗೆ ಕಿರುಹೊತ್ತಿಗೆ, ಮಾಹಿತಿ ಹಾಗೂ ಕೈಪಿಡಿಗಳ ಕಿಟ್ ಸಹ ನೀಡಲಾಗುವುದು ಎಂದು ಹೇಳಿದರು.

ಬಾಲ ಕಾರ್ಮಿಕರು, ಬಾಲ ಅಪರಾಧ, ಬಾಲ್ಯ ವಿವಾಹ ಮುಂತಾದ ವಿಷಯಗಳ ಬಗ್ಗೆ ಸಮಗ್ರ ಚರ್ಚೆಯನ್ನು ಮಾಡಲಾಗುವುದು. ಕೊನೆಯ ದಿನ 13ರಂದು ಸಾರ್ವಜನಿಕ ಚರ್ಚೆ ಸಭೆಯನ್ನು ಸಹ ಏರ್ಪಡಿಸಲಾಗಿದೆ. ಇದರಲ್ಲಿ ಮಕ್ಕಳ ಹಕ್ಕುಗಳಿಗಾಗಿ ಶ್ರಮಿಸುವ ಎಲ್ಲ ಸಂಘಟನೆಗಳೂ ಸಾರ್ವಜನಿಕರೂ ಭಾಗವಹಿಸಬಹುದಾಗಿದೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸುಧೀಂದ್ರ ಪಾಟೀಲ ಮತ್ತಿರರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.