`ಮಕ್ಕಳ ಹಕ್ಕುಗಳ ರಕ್ಷಣೆ ಎಲ್ಲರ ಕರ್ತವ್ಯ'

7

`ಮಕ್ಕಳ ಹಕ್ಕುಗಳ ರಕ್ಷಣೆ ಎಲ್ಲರ ಕರ್ತವ್ಯ'

Published:
Updated:

ಯಾದಗಿರಿ: ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡುವ ಮೂಲಕ ಮಕ್ಕಳ ಪೋಷಣೆ ಹಾಗೂ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಜಿ.ಎಸ್. ದೇಶಪಾಂಡೆ ಹೇಳಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲ ನ್ಯಾಯಮಂಡಳಿ ಆಶ್ರಯದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಕ್ಕಳ ಪೋಷಣೆ ಮತ್ತು ರಕ್ಷಣೆ ಎರಡು ದಿನಗಳ ಜಿಲ್ಲಾಮಟ್ಟದ ಕಾರ್ಯಾಗಾರ ಉದ್ಫಾಟಿಸಿ ಮಾತನಾಡಿದರು.  18 ವರ್ಷದ ಕೆಳಗಿರುವ ಮಕ್ಕಳು ಬಾಲಾಪರಾಧ ವ್ಯಾಪ್ತಿಗೆ ಒಳಪಡುತ್ತಿದ್ದು, ಮಕ್ಕಳಲ್ಲಿ ಒಳ್ಳೆಯ ಗುಣಗಳನ್ನು ಬೆಳೆಸುವ ಮೂಲಕ ಮಕ್ಕಳನ್ನು ಪಾಲನೆ ಪೋಷಣೆ ಮಾಡಿ ಸಮಾಜದ ಮುಖ್ಯವಾಹಿನಿಗೆ ತರುವುದು ಪಾಲಕರ ಕರ್ತವ್ಯವಾಗಿದೆ ಎಂದು ಹೇಳಿದರು.14 ವರ್ಷದ ಮಕ್ಕಳು ತಿಳಿಯದೇ ತಪ್ಪು ಮಾಡಿರುತ್ತಾರೆ. ಅವರಿಗೆ ಸಲಹೆ ಸೂಚನೆ ನೀಡಿ ಒಳ್ಳೆಯ ದಾರಿಗೆ ತರಲು ಎನ್‌ಜಿಒ ಸದಸ್ಯರು, ಅಧಿಕಾರಿಗಳು, ಪಾಲಕರು ಹೆಚ್ಚು ಒತ್ತು ಕೊಡಬೇಕು ಎಂದು ಹೇಳಿದರು. ಅತಿಥಿಗಳಾಗಿ ಆಗಮಿಸಿದ್ದ ಸರ್ಕಲ್ ಇನ್ಸ್‌ಪೆಕ್ಟರ್ ರಾಮಣ್ಣ ಮಾತನಾಡಿ, ಮಕ್ಕಳ ಹಕ್ಕುಗಳ ಬಗ್ಗೆ ರಕ್ಷಣೆ ಸಿಗಬೇಕು. 14 ವರ್ಷದ ಮಕ್ಕಳು ಶಾಲೆಯಿಂದ ಹೊರಗೆ ಉಳಿಯಬಾರದು ಎಂಬುದನ್ನು ಮಕ್ಕಳ ಹಕ್ಕು ರಕ್ಷಣೆ ಕಾಯ್ದೆ ಹೇಳುತ್ತದೆ ಎಂದು ತಿಳಿಸಿದರು.ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಸ್.ಬಿ. ನಾಯಕ ಮಾತನಾಡಿ, ಶಾಲೆ ಬಿಟ್ಟ ಮಕ್ಕಳು ಅನೇಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದು, ಇಂತಹ ಪರಿಸ್ಥಿತಿ ನಿಭಾಯಿಸುವಲ್ಲಿ ಸಮಾಜದ ಜವಾಬ್ದಾರಿ ಹೆಚ್ಚಿದೆ. ಅಂತಹ ಮಕ್ಕಳಿಗೆ ಪುನರ್ವಸತಿ ಕಲ್ಪಿಸಲು, ಅವರಿಗೆ ತರಬೇತಿ ನೀಡಿ ಇಲಾಖೆ ವತಿಯಿಂದ ಸಮಾಜದ ಮುಖ್ಯ ವಾಹಿನಿಗೆ ತರಲಾಗುತ್ತಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ  ಹೆಚ್ಚುವರಿ ಜಿಲ್ಲಾಧಿಕಾರಿ ಜಹೀರಾ ನಸೀಮ್ ಮಾತನಾಡಿ, ಇಂದಿನ ಸಮಾಜದಲ್ಲಿ ಮಕ್ಕಳು ಶೋಷಣೆಗೆ ಒಳಪಡುತ್ತಿದ್ದು, ವಿಶೇಷವಾಗಿ ಪಟ್ಟಣ ಮತ್ತು ಗ್ರಾಮೀಣ ಪ್ರದೇಶ ಸಣ್ಣ ಮಕ್ಕಳು ಹೊಟೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಮತ್ತು ಪೊಲೀಸ್ ಇಲಾಖೆ ಹೆಚ್ಚು ಜಾಗೃತಿ ವಹಿಸಬೇಕು ಎಂದು ತಿಳಿಸಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ  ಗರ್ಟ್ರೂಜ್ ವೇಗಾಸ್ ಮಾತನಾಡಿ, ಇಲ್ಲಿಯವರಿಗೆ ಬಾಲ ನ್ಯಾಯಮಂಡಳಿ ಕಾಯ್ದೆಯಡಿ 59 ಪ್ರಕರಣಗಳು ಸಮಿತಿಗೆ ಬಂದಿದ್ದು, ಇದರಲ್ಲಿ 25 ವಿಚಾರಣೆಗೊಳಪಡಿಸಲಾಗಿದೆ. ಒಂದು ಪ್ರಕರಣ ಇತ್ಯರ್ಥವಾಗಿದ್ದು, 24 ವಿಚಾರಣೆ ಹಂತದಲ್ಲಿವೆ ಎಂದು ತಿಳಿಸಿದರು. ಪೊಲೀಸ್ ಅಧಿಕಾರಿಗಳು, ಎನ್‌ಜಿಒ ಪದಾಧಿಕಾರಿಗಳು, ಮಹಿಳೆಯರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry