ಮಕ್ಕಳ ಹಕ್ಕು: ಅರಿವು ಮೂಡಿಸಿ

7

ಮಕ್ಕಳ ಹಕ್ಕು: ಅರಿವು ಮೂಡಿಸಿ

Published:
Updated:

ಹಾಸನ: ‘ಮಕ್ಕಳ ಹಕ್ಕುಗಳು, ಮತ್ತು ಅವರ ರಕ್ಷಣೆಗೆ ಇರುವ ಕಾಯ್ದೆಗಳ ಬಗ್ಗೆ ಸರ್ಕಾರಿ ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳು ಜಿಲ್ಲೆಯಲ್ಲಿ ಅರಿವು ಮೂಡಿಸುವ ಮೂಲಕ ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಸಹಕರಿಸಬೇಕು’ ಎಂದು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಮನವಿ ಮಾಡಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಮಗ್ರ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.‘ಎಲ್ಲ ತಾಲ್ಲೂಕುಗಳಲ್ಲಿ ಪ್ರತಿ ತಿಂಗಳು ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ಏರ್ಪಡಿಸಿ ವರದಿ ಸಲ್ಲಿಸಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆಯೂ ಶಾಲಾ ಹಂತದಲ್ಲೇ ಬಾಲ್ಯ ವಿವಾಹ ನಿರ್ಬಂಧ ಕಾಯ್ದೆ, ಬಾಲ ಕಾರ್ಮಿಕ ಪದ್ಧತಿ, ಮಕ್ಕಳ ಮೇಲಿನ ದೌರ್ಜನ್ಯ ತಡೆ ಕಾನೂನುಗಳ ಬಗ್ಗೆ ಜಾಗೃತಿ ಮೂಡಿಸಿ ಸಮಸ್ಯೆಯಾದಾಗ ಯಾರನ್ನು ಸಂಪರ್ಕಿಸಬೇಕು ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಬೇಕು’ ಎಂದರು.‘ಶೋಷಣೆಗೊಳಗಾದ ಮಹಿಳೆ, ಮಕ್ಕಳು ಹಾಗೂ ಬಾಲಾಪರಾಧಿಗಳ ದೃಶ್ಯ ಹಾಗೂ ಇತರ ಕೆಲವು ವಿವರಗಳನ್ನು ಸುದ್ದಿ ಮಧ್ಯಮಗಳಲ್ಲಿ ಯಥಾವತ್ತಾಗಿ ಬಿತ್ತರಿಸುವಂತಿಲ್ಲ. ಈ ಬಗ್ಗೆ ಇರುವ ನಿಯಾಮಾವಳಿಗಳ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡಬೇಕು ಎಂದರು.ಮಕ್ಕಳ ಗ್ರಾಮ ಸಭೆ, ಶಾಲೆ ಬಿಟ್ಟ ಮಕ್ಕಳ ರಕ್ಷಣೆ, ಬಾಲ್ಯ ವಿವಾಹ ತಡೆಗೆ ಈ ವರೆಗೆ ಕೈಗೊಂಡಿರುವ ಕ್ರಮಗಳು,  ಮಾದಕ ವಸ್ತು ವ್ಯಸನಕ್ಕೆ ಬಿದ್ದ ಮಕ್ಕಳ ರಕ್ಷಣೆ, ಪುನರ್ವಸತಿ, ಏಡ್ಸ್ ಪೀಡಿತ ಹಾಗೂ ಬಾಧಿತ ಮಕ್ಕಳ ರಕ್ಷಣೆ ಹಾಗೂ ಶಿಕ್ಷಣಕ್ಕೆ  ಕೈಗೊಂಡಿರುವ ಕ್ರಮಗಳ ಬಗ್ಗೆ ಸಭೆಯಲ್ಲಿ ಜಿಲ್ಲಾಧಿಕಾರಿಯವರು ಮಾಹಿತಿ ಪಡೆದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಚಿದಾನಂದ್, ಮಕ್ಕಳ ರಕ್ಷಣಾ ಘಟಕದ ಮೇಲ್ವಿಚಾರಕಿ ಗೀತಾ ಅವರು ಈವರೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.ಲೇಖಕಿ ರೂಪ ಹಾಸನ, ‘ಜಿಲ್ಲೆಯಲ್ಲಿ ಅಲೆಮಾರಿ ಮಕ್ಕಳ ಸಂಖ್ಯೆ ಹೆಚ್ಚುತ್ತಿರುವುದರ ಜತೆಗೆ ಶಿಕ್ಷಣವೂ ಅರ್ಧಕ್ಕೆ ನಿಲ್ಲುತ್ತಿದೆ. ಇಂಥವರಿಗೆ ಪ್ರತ್ಯೇಕ ಶಾಲೆ ತೆರೆಯುವ ಅಗತ್ಯವಿದೆ’ ಎಂದರು.ಡಾ. ಪೂರ್ಣಿಮಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ಯಾಮಲಾದೇವಿ, ಪ್ರೊಬೇಷನರಿ ಐ.ಎ.ಎಸ್. ಅಧಿಕಾರಿ ರಾಮಚಂದ್ರನ್ ವಿವಿಧ ಇಲಾಖಾ ಅಧಿಕಾರಿಗಳು, ಸರ್ಕಾರೇತರ ಸಂಘಗಳ ಪ್ರತಿನಿಧಿಗಳು, ಸಭೆಯಲ್ಲಿ ಹಾಜರಿದ್ದರು.ಇದೇ ಸಂದರ್ಭದಲ್ಲಿ ಜಿಲ್ಲಾ ಸಮಗ್ರ ಮಕ್ಕಳ ರಕ್ಷಣಾ ಘಟಕದವರು ಸಿದ್ಧಪಡಿಸಿದ ತ್ರೈಮಾಸಿಕ ‘ಕಲರವ’ವನ್ನು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಬಿಡುಗಡೆ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry