ಮಂಗಳವಾರ, ಮೇ 11, 2021
25 °C
ಹಿರಿಯ ಸಾಹಿತಿ ದೇವನೂರ ಮಹದೇವ ಅಭಿಮತ

ಮಕ್ಕಳ ಹೆಸರಿನೊಂದಿಗೆ ತಾಯಿಯ ಹೆಸರು ಇರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮಕ್ಕಳನ್ನು ಶಾಲೆಗೆ ಸೇರಿಸುವಾಗ ತಂದೆಯ ಹೆಸರು ಕೊಡುವುದು ರೂಢಿ. ಆದರೆ, ಅದಕ್ಕಿಂತ ಮೊದಲು ತಾಯಿಯ ಹೆಸರು ನೋಂದಾಯಿಸಬೇಕು. ಇದರಿಂದ ಹಲವು ಶೋಷಣೆಗಳಿಗೆ ಅಂತ್ಯ ಹಾಡಲು ಸಾಧ್ಯ ಎಂದು ಹಿರಿಯ ಸಾಹಿತಿ ದೇವನೂರ ಮಹದೇವ ಹೇಳಿದರು.ಒಡನಾಡಿ ಸಂಸ್ಥೆಯು ಶುಕ್ರವಾರ ಆಯೋಜಿಸಿದ್ದ `ನ್ಯಾಟ್-ಕೆ ಸಾದರಪಡಿಸುವ ಲೈಂಗಿಕ ಶೋಷಿತರಿಗೆ ಮೀಸಲಾತಿ ಕ್ರಿಯಾ ಯೋಜನೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.`ಅಭ್ಯರ್ಥಿಗಳು, ವಿದ್ಯಾರ್ಥಿಗಳ ಎಲ್ಲ ಅರ್ಜಿ, ಪ್ರಮಾಣಪತ್ರಗಳಲ್ಲಿ ತಾಯಿಯ ಹೆಸರು ಇರುವಂತೆ ಆದ್ಯತೆ ನೀಡಬೇಕು. ಜನ್ಮ ಕೊಡುವ ತಾಯಿಗೆ ಆದ್ಯತೆ ಕೊಡುವುದೇ ಸರಿ. ಇದರಿಂದ ಮಕ್ಕಳಿಗೆ ಶಾಲೆಗಳಲ್ಲಿ ನಡೆಯುವ ಶೋಷಣೆಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ' ಎಂದರು.`ಮೀಸಲಾತಿಯನ್ನು ಕೇಳುವಾಗ ಕಟ್ಟುನಿಟ್ಟಾಗಿ ಸಾಧಕ-ಬಾಧಕಗಳನ್ನು ಪರಿಶೀಲಿಸಬೇಕು. ಮೀಸಲಾತಿಯು ದುರುಪಯೋಗವಾಗದಂತೆ ನೋಡಿಕೊಳ್ಳಬೇಕು. ಮೀಸಲಾತಿಯ ಉದ್ದೇಶ ಸ್ಪಷ್ಟವಾಗಬೇಕು. ಅದರಿಂದ ನೊಂದವರ ಬಾಳು ಹಸನಾಗಬೇಕು' ಎಂದರು.ಶೋಷಿತರ ಬಗ್ಗೆ ಪಠ್ಯದಲ್ಲಿ ಸೇರಿಸಿ

`ಲೈಂಗಿಕ ಶೋಷಿತರು ಮತ್ತು ಮಾನವ ಕಳ್ಳಸಾಗಣೆಯಲ್ಲಿ ಬಲಿಯಾದವರ ಕುರಿತು ಶಾಲೆ ಮತ್ತು ಕಾಲೇಜುಗಳ ಪಠ್ಯದಲ್ಲಿ ಪಾಠಗಳನ್ನಾಗಿ ಸೇರಿಸಬೇಕು' ಎಂದು ಕನ್ನಡ ಪ್ರಾಧ್ಯಾಪಕ ಅರವಿಂದ ಮಾಲಗತ್ತಿ ಹೇಳಿದರು.`ಲೈಂಗಿಕ ಶೋಷಣೆ ಮತ್ತು ಮಾನವ ಕಳ್ಳಸಾಗಣೆಯಲ್ಲಿ ನೊಂದವರಿಗೆ ಘಟನೆ ಆದ ಸಂದರ್ಭದಲ್ಲಿ ಪರಿಹಾರಧನ ಕೊಡುವ ಬದಲು, ಅವರ ಶ್ರೇಯೋಭಿವೃದ್ಧಿ ಮತ್ತು ಜೀವನಭದ್ರತೆ ಒಂದು ನಿರ್ದಿಷ್ಟವಾದ ನಿಧಿಯನ್ನು ಪ್ರತಿಯೊಂದು ಬಜೆಟ್‌ನಲ್ಲಿಯೂ ಮೀಸಲಿಡಬೇಕು' ಎಂದು ಸಲಹೆ ನೀಡಿದರು.  `ಅನಾಥ ಮಕ್ಕಳಿಗೆ ಮೈಸೂರು ವಿವಿಯಲ್ಲಿ ಪ್ರವೇಶ ಕಲ್ಪಿಸಬೇಕು ಎಂದು ತೀರ್ಮಾನಿಸಲಾಗು ತ್ತಿದೆ. ಮೀಸಲಾತಿಯು ಸರ್ಕಾರಿ ಕ್ಷೇತ್ರಗಳ ಜೊತೆಗೆ ಖಾಸಗಿ ಕ್ಷೇತ್ರದಲ್ಲಿಯೂ ಸಿಗುವಂತಾಗಬೇಕು' ಎಂದು ಹೇಳಿದರು.`ಮಹಿಳೆಯರು ಮತ್ತು ಲೈಂಗಿಕ ಅಲ್ಪಸಂಖ್ಯಾತರು ಹಲವಾರು ವರ್ಷಗಳಿಂದಲೂ ಶೋಷಣೆಗೆ ಒಳಗಾಗುತ್ತಿದ್ದಾರೆ. ನಮ್ಮ ಸಂಕೀರ್ಣ ಸಮಾಜದಲ್ಲಿ ಇಂದಿಗೂ ದೌರ್ಜನ್ಯಗಳು ಮುಂದು ವರಿದಿವೆ.  ಸಂಪ್ರದಾಯದ ಮನೋಭಾವ ಬದಲಾಗಬೇಕು. ಶೋಷಿತರಿಗೆ ಕೇವಲ ಮೀಸಲಾತಿ ನೀಡುವುದಷ್ಟೇ ಸಾಲದು. ಆರ್ಥಿಕ ಮತ್ತು ಶೈಕ್ಷಣಿಕವಾಗಿ ಪರ್ಯಾಯ ಅವಕಾಶಗಳನ್ನು ನೀಡುವ ಯೋಜನೆಗಳನ್ನು ರೂಪಿಸಬೇಕು. ಅವರ ಸಮಗ್ರ ಅಭಿವೃದ್ಧಿ ಮತ್ತು ಜೀವನ ನಿರ್ವಹಣೆ ಯನ್ನು ಲಕ್ಷ್ಯದಲ್ಲಿಟ್ಟುಕೊಂಡು ಕಾರ್ಯ ಯೋಜನೆ ಯಾಗಬೇಕು' ಎಂದು ಅಭಿಪ್ರಾಯಪಟ್ಟರು.ಈ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ಚಿಂತಕ ಪ. ಮಲ್ಲೇಶ್, `ಲೈಂಗಿಕ ದೌರ್ಜನ್ಯಗಳು ಹೊಸದಲ್ಲ. ಲೈಂಗಿಕ ಶೋಷಣೆ ಮತ್ತು ಮಾನವ ಕಳ್ಳಸಾಗಾಣಿಕೆ ತಡೆಯುವುದು ಅಗತ್ಯ' ಎಂದರು.ಪತ್ರಕರ್ತ ಶಿವಕುಮಾರ್, ರೈತ ಮುಖಂಡ ಬಡಗಲಪುರ ನಾಗೇಂದ್ರ, ವಕೀಲ ಬಿ.ಎಲ್. ಪಾಟೀಲ, ಸುಮನಾ, ಒಡನಾಡಿ ಸಂಸ್ಥೆಯ ನಿರ್ದೇಶಕ ಸ್ಟ್ಯಾನ್ಲಿ ಮತ್ತು ಪರಶುರಾಮ್ ಮತ್ತಿತರರು ಹಾಜರಿದ್ದರು.

ಮೀಸಲಾತಿ ಅವಶ್ಯಕ: ನಾಗವಾರ

ಶೋಷಿತರಿಗೆ ಮತ್ತು ಅಸಮಾನತೆಯಿಂದ ನೊಂದವರಿಗೆ ಸಾಮಾಜಿಕ ನ್ಯಾಯ ಸಿಗಬೇಕಾದರೆ ಮೀಸಲಾತಿಯು ಅವಶ್ಯಕ ಎಂದು ಪ್ರೊ. ಕಾಳೇಗೌಡ ನಾಗವಾರ ಹೇಳಿದರು.`ಸಮಾಜದಲ್ಲಿ ಮೀಸಲಾತಿಯು ಅಪ್ರಸ್ತುತವಲ್ಲ. ಸಮಾನತೆ ಮತ್ತು ಸ್ವಾತಂತ್ರ್ಯವನ್ನು ರೂಢಿಸಲು ಅವಶ್ಯಕವಾಗಿದೆ. ಇವತ್ತು ವಿದ್ಯಾವಂತರೇ ಸಮಾಜಕ್ಕೆ ಖಳನಾಯಕರಾಗಿದ್ದಾರೆ. ಪುರುಷಪ್ರಧಾನ ಸಮಾಜದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಮೌಲ್ಯಗಳ ಮೂಲಕ ಈ ವ್ಯವಸ್ಥೆಯನ್ನು ಬದಲಿಸಬೇಕಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.