`ಮಖನ' ಸೆರೆಗೆ ಹೈಕೋರ್ಟ್ ಅಸ್ತು

ಶನಿವಾರ, ಜೂಲೈ 20, 2019
22 °C

`ಮಖನ' ಸೆರೆಗೆ ಹೈಕೋರ್ಟ್ ಅಸ್ತು

Published:
Updated:

ಸಕಲೇಶಪುರ: ತಾಲ್ಲೂಕಿನ ಹೆತ್ತೂರು ಹಾಗೂ ಯಸಳೂರು ಹೋಬಳಿ ವ್ಯಾಪ್ತಿಯಲ್ಲಿ ಎರಡು ವರ್ಷಗಳಿಂದ ಐವರನ್ನು ಹತ್ಯೆ ಮಾಡಿ ದಾಂಧಲೆ ನಡೆಸುತ್ತಿರುವ ಮಖನ (ಗಂಡೂ ಅಲ್ಲ, ಹೆಣ್ಣು ಅಲ್ಲ) ಆನೆಯನ್ನು ಸೆರೆ ಹಿಡಿದು ಸ್ಥಳಾಂತರಿಸುವಂತೆ ಹೈಕೊರ್ಟ್  ಮಂಗಳವಾರ ಅನುಮತಿ ನೀಡಿದೆ ಎಂದು ಶಾಸಕ ಎಚ್.ಕೆ.ಕುಮಾರಸ್ವಾಮಿ ಹೇಳಿದರು.ಈ ಆನೆಯನ್ನು ಹಿಡಿದು ಸ್ಥಳಾಂತರಿಸಲು ಅನುಮತಿ ನೀಡಬೇಕು ಎಂದು ಸರ್ಕಾರದ ಪರವಾಗಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋಮವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಸರ್ಕಾರದ ಮನವಿಯನ್ನು ಮಾನ್ಯ ಮಾಡಿದ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ, `ಆನೆಗಳನ್ನು ಒಂಟಿಯಾಗಲು ಅವಕಾಶ ನೀಡಬೇಡಿ. ಅವು ಗುಂಪಿನಲ್ಲಿ ಇರುವಂತೆ ಕಾಳಜಿ ವಹಿಸಿ' ಎಂದು ಮೌಖಿಕವಾಗಿ ನಿರ್ದೇಶನ ನೀಡಿದೆ.`ಮನುಷ್ಯನ ಪ್ರಾಣಕ್ಕೆ ಎರವಾಗಿರುವ ಪ್ರಾಣಿಗಳನ್ನು ಸ್ಥಳಾಂತರ ಮಾಡಲು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 11 ಮತ್ತು 12 ಅವಕಾಶ ಕಲ್ಪಿಸುತ್ತವೆ' ಎಂದು ಸರ್ಕಾರದ ಪರ ವಕೀಲರು ವಿವರಿಸಿದರು. `ಆನೆಯನ್ನು ಸೆರೆ ಹಿಡಿಯುವ ಮುನ್ನ ಹೈಕೋರ್ಟ್ ನೇಮಕ ಮಾಡಿದ್ದ ಆನೆ ಕಾರ್ಯಪಡೆ ಮತ್ತು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸಲಹೆ ಪಡೆಯಿರಿ. ಆನೆಗೆ ಯಾವುದೇ ರೀತಿಯಲ್ಲೂ ತೊಂದರೆ ಆಗದಂತೆ ನೋಡಿಕೊಳ್ಳಿ' ಎಂದು ಪೀಠ ಹೇಳಿತು. ವಿಚಾರಣೆಯನ್ನು ಮುಂದೂಡಲಾಗಿದೆ.ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಲ್ಲೂರಿನಲ್ಲಿ  ಜುಲೈ 5 ರಂದು ರೈತ ಲಕ್ಷ್ಮಣಗೌಡ ಅವರನ್ನು ಈ ಆನೆ ಹತ್ಯೆ ಮಾಡಿತ್ತು. ಮನುಷ್ಯರನ್ನು ಕೊಲ್ಲುತ್ತಿರುವ ಆನೆಗಳನ್ನು ಕೂಡಲೇ ಹಿಡಿದು ಸ್ಥಳಾಂತರಿಸಬೇಕು, ಇಲ್ಲವಾದರೆ ನಾವುಗಳೇ ಗುಂಡಿಕ್ಕಿ ಕೊಲ್ಲುತ್ತೇವೆ' ಎಂದು ಗ್ರಾಮಸ್ಥರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಶಾಸಕ ಎಚ್.ಕೆ. ಕುಮಾರಸ್ವಾಮಿ ಸಮ್ಮುಖದಲ್ಲಿ ಪ್ರತಿಭಟನೆ ನಡೆಸಿದ್ದರು. `ಆನೆಗಳನ್ನು ಗುಂಡಿಕ್ಕಿ ಕೊಂದರೆ ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಕಾನೂನು ಅಡಿಯಲ್ಲಿ ಆನೆಗಳನ್ನು ಸ್ಥಳಾಂತರ ಮಾಡುವುದಕ್ಕೆ ಸರ್ಕಾರದ ಮೇಲೆ ಒತ್ತಡ ತಂದು ಶೀಘ್ರದಲ್ಲಿ ಆ ಕೆಲಸ ಮಾಡಿಸುವುದಾಗಿ ಎಚ್.ಡಿ. ದೇವೇಗೌಡರು ಪ್ರತಿಭಟನಾಕಾರರಿಗೆ ಭರವಸೆ ನೀಡಿದ್ದರು.ಉಪ ಅರಣ್ಯಸಂರಕ್ಷಣಾಧಿಕಾರಿ ಲಕ್ಷ್ಮಣ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಆರ್‌ಎಫ್‌ಒ ಹಾಗೂ ಸಿಬ್ಬಂದಿಗೆ ದಿಗ್ಬಂಧನ

ವಿಧಿಸಿ ಸತತ 16 ಗಂಟೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಕಾಡಾನೆಗಳಿಂದ ರೈತರ ಸರಣಿ ಹತ್ಯೆ, ಬೆಳೆ ಆಸ್ತಿ ಹಾನಿಗಳಿಂದ ಜನರು ರೊಚ್ಚಿಗೆದ್ದಿರುವುದು, ಸಮಸ್ಯೆಯ ಗಂಭೀರತೆಯನ್ನು ಮುಂದಿಟ್ಟುಕೊಂಡು ಆನೆಯನ್ನು ಹಿಡಿಯಲು ಅನುಮತಿ ನೀಡುವಂತೆ ಮನವಿ ಮಾಡಲಾಗಿತ್ತು ಎಂದು ತಿಳಿದುಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry