ಮಗನನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ

7
ಅಪಘಾತದಿಂದ ಗಾಯಗೊಂಡು ಪತಿಯ ಸಾವು: ನೊಂದ ಪತ್ನಿ

ಮಗನನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ

Published:
Updated:

ಬೆಂಗಳೂರು: ಅಪಘಾತದಲ್ಲಿ ಪತಿ ಸಾವನ್ನಪ್ಪಿದ್ದರಿಂದ ಬೇಸರಗೊಂಡ ಮಹಿಳೆ 11 ವರ್ಷದ ಮಗನನ್ನು ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಚಂದ್ರಾ ಲೇಔಟ್‌ ಸಮೀಪದ ಶಕ್ತಿಗಾರ್ಡನ್‌ನಲ್ಲಿ ಬುಧವಾರ ನಡೆದಿದೆ.ಶಕ್ತಿಗಾರ್ಡನ್‌ ಮೂರನೇ ಅಡ್ಡರಸ್ತೆ ನಿವಾಸಿ ಚಿತ್ರಾ ಶೇಖರ್‌ (33) ಅವರು ಮಗ ಜೀವನ್‌ ಶೇಖರ್‌ಗೆ ತಂಪು ಪಾನೀಯದಲ್ಲಿ ಕ್ರಿಮಿನಾಶಕ ಬೆರೆಸಿ ಕುಡಿಸಿ ಕೊಲೆ ಮಾಡಿದ್ದಾರೆ. ಬಳಿಕ ಅವರು ಅದೇ ತಂಪುಪಾನೀಯ ಕುಡಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.

ಚಿತ್ರಾ ಅವರ ಪತಿ ಜ್ಞಾನಶೇಖರ್‌ ಅವರು ಸೆ. 7ರಂದು ಬೈಕ್‌ನಲ್ಲಿ ಹೋಗುತ್ತಿದ್ದಾಗ ಸುಮನಹಳ್ಳಿ ಜಂಕ್ಷನ್‌ ಬಳಿ ಮತ್ತೊಂದು ಬೈಕ್‌ ಅವರಿಗೆ ಡಿಕ್ಕಿ ಹೊಡೆದಿತ್ತು.ಘಟನೆಯಲ್ಲಿ ತೀವ್ರವಾಗಿ ಗಾಯ ಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಅವರು ಬುಧವಾರ ನಸುಕಿನಲ್ಲಿ ಸಾವನ್ನಪ್ಪಿದರು. ಇದರಿಂದ ಆಘಾತಗೊಂಡ  ಚಿತ್ರಾ, ಮಗನನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಉದ್ಯಮಿಯಾದ ಜ್ಞಾನಶೇಖರ್‌, ಕೈಗಾರಿಕೆಗಳಿಗೆ ಕಬ್ಬಿಣದ ಸಲಕರಣೆ ಗಳನ್ನು ಸರಬರಾಜು ಮಾಡುತ್ತಿದ್ದರು. ಅವರ ಮೊದಲ ಪತ್ನಿ ಸುಮಾರು 15 ವರ್ಷಗಳ ಹಿಂದೆ ಮೃತಪಟ್ಟಿದ್ದರು.ಆ ನಂತರ ಜ್ಞಾನಶೇಖರ್‌, ಚಿತ್ರಾ ಅವರನ್ನು ಎರಡನೇ ಮದುವೆ ಯಾಗಿದ್ದರು.ಜ್ಞಾನಶೇಖರ್‌, ಅವರ ಮೊದಲ ಪತ್ನಿಯ ಮಕ್ಕಳಾದ ಪ್ರವೀಣ್‌, ಪ್ರಭು, ಎರಡನೇ ಪತ್ನಿ ಚಿತ್ರಾ ಹಾಗೂ ಜೀವನ್‌ ಎಲ್ಲರೂ ಒಟ್ಟಿಗೆ ವಾಸವಾಗಿದ್ದರು. ಜೀವನ್‌, ರಾಜರಾಜೇಶ್ವರಿನಗರದ ಖಾಸಗಿ  ಶಾಲೆಯಲ್ಲಿ ಐದನೇ ತರಗತಿ   ಓದುತ್ತಿದ್ದ.ಗದ್ಗದಿತರಾದರು: ‘ಅಪಘಾತದಲ್ಲಿ ಗಾಯಗೊಂಡಿದ್ದ ತಂದೆ ಬೆಳಗಿನ ಜಾವ 4 ಗಂಟೆ ಸುಮಾರಿಗೆ  ಮೃತಪಟ್ಟರು. ಆಸ್ಪತ್ರೆಯಲ್ಲಿದ್ದ ನಾನು ಮನೆಗೆ ಕರೆ ಮಾಡಿ ತಂದೆಯ ಸಾವಿನ ಸುದ್ದಿ ಯನ್ನು ಕುಟುಂಬ ಸದಸ್ಯರಿಗೆ ತಿಳಿಸಿದೆ. ಸ್ವಲ್ಪ ಸಮಯದ ಬಳಿಕ ನನ್ನ ಮೊಬೈಲ್‌ಗೆ ಕರೆ ಮಾಡಿದ ಚಿಕ್ಕಮ್ಮ ಚಿತ್ರಾ, ಆಸ್ತಿ ಮತ್ತು ನಿವೇಶನದ ದಾಖಲೆಪತ್ರಗಳನ್ನು ಅಲ್ಮೇರಾದಲ್ಲಿ ಇಟ್ಟಿರುವುದಾಗಿ ಹೇಳಿ ಕರೆ ಸ್ಥಗಿತ ಗೊಳಿಸಿದರು’ ಎಂದು ಪ್ರವೀಣ್‌ ‘ಪ್ರಜಾವಾಣಿ’ಗೆ ತಿಳಿಸಿದರು.‘ಚಿಕ್ಕಮ್ಮ ಮೊಬೈಲ್‌ನಲ್ಲಿ ಗದ್ಗದಿತ ರಾಗಿ ಮಾತನಾಡಿದ್ದರಿಂದ ಅನುಮಾನ ಬಂದು, ಮನೆಯಲ್ಲಿದ್ದ ತಮ್ಮ ಪ್ರಭುಗೆ ಕರೆ ಮಾಡಿ ಚಿಕ್ಕಮ್ಮನನ್ನು ಸಮಾಧಾನ ಪಡಿಸುವಂತೆ ಹೇಳಿದೆ. ಪ್ರಭು ಚಿಕ್ಕಮ್ಮನ ಕೊಠಡಿಗೆ ಹೋಗಿ ನೋಡಿದಾಗ ಅವರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವುದು ಗೊತ್ತಾಗಿದೆ’ ಎಂದು ಪ್ರವೀಣ್‌ ಹೇಳಿದರು.‘ನಂತರ ಆತ ಚಿಕ್ಕಮ್ಮ ಮತ್ತು ಜೀವನ್‌ನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ. ಆದರೆ, ಚಿಕಿತ್ಸೆಗೆ ಸ್ಪಂದಿಸದ ಅವರಿಬ್ಬರೂ ಸ್ವಲ್ಪ ಸಮಯ ದಲ್ಲೇ ಮೃತಪಟ್ಟರು’ ಎಂದರು.‘ತಮ್ಮ ಜ್ಞಾನಶೇಖರ್‌ಗೆ ಅಪಘಾತ ವಾದ ನಂತರ ನಾದಿನಿ ಚಿತ್ರಾ ಸಾಕಷ್ಟು ನೊಂದಿದ್ದಳು. ಪತಿಯನ್ನು ತುಂಬಾ ಹಚ್ಚಿಕೊಂಡಿದ್ದ ಆಕೆ, ಆತನಿಗೆ ಏನಾದರೂ ಹೆಚ್ಚು ಕಡಿಮೆಯಾದರೆ ತಾನೂ ಬದುಕುವುದಿಲ್ಲ ಎಂದು ಹೇಳುತ್ತಿದ್ದಳು’ ಎಂದು ಜ್ಞಾನಶೇಖರ್‌ ಅವರ ಅಣ್ಣ ರಾಮಶೇಖರ್‌ ತಿಳಿಸಿದರು. ಘಟನೆ ಸಂಬಂಧ ಚಂದ್ರಾ ಲೇಔಟ್‌ ಠಾಣೆಯಲ್ಲಿ ಕೊಲೆ ಮತ್ತು ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry