ಬುಧವಾರ, ನವೆಂಬರ್ 20, 2019
22 °C

ಮಗನ ಮನೆ ಸೇರಿದ ವೃದ್ಧೆ

Published:
Updated:

ಪಡುಬಿದ್ರಿ: ಇನ್ನಾ ಬಸ್ ನಿಲ್ದಾಣದಲ್ಲಿ ಎರಡು ದಿನಗಳಿಂದ ವಾಸ್ತವ್ಯ ಹೂಡಿದ್ದ ಕುಸುಮಾ ಉಗ್ಗಪ್ಪ (80) ಅವರನ್ನು ಪಡುಬಿದ್ರಿ ಪೊಲೀಸರು ಭಾನುವಾರ ಸಂಜೆ ಕಿಲ್ಪಾಡಿ ಕೆರೆಕಾಡಿನಲ್ಲಿರುವ ಹಿರಿಯ ಮಗನ ಮನೆಗೆ ಬಿಟ್ಟು ಬಂದಿದ್ದಾರೆ.ಐದು ಗಂಡು ಹಾಗೂ ಒಂದು ಹೆಣ್ಣು ಮಕ್ಕಳ ತಾಯಿ ಇನ್ನಾ ಬಸ್ ನಿಲ್ದಾಣದಲ್ಲಿ ಎರಡು ದಿನಗಳಿಂದ ವಾಸ್ತವ್ಯ ಹೂಡಿದ್ದು, ಈ ಬಗ್ಗೆ `ಪ್ರಜಾವಾಣಿ' ಭಾನುವಾರ ಸಚಿತ್ರ ವರದಿ ಪ್ರಕಟಿಸಿತ್ತು.ಪಡುಬಿದ್ರಿ ಪೊಲೀಸರು ಹಲವು ಅನಾಥಾಶ್ರಮಗಳನ್ನು ಸಂಪರ್ಕಿಸಿ ಕುಸುಮಾಳನ್ನು ಅಲ್ಲಿಗೆ ಸೇರಿಸಲು ವಿಫಲ ಪ್ರಯತ್ನ ನಡೆಸಿದ್ದರು.ಅಲ್ಲದೇ ಎಲ್ಲಾ ಐದು ಮಕ್ಕಳನ್ನೂ ದೂರವಾಣಿ ಮೂಲಕ ಸಂಪರ್ಕಿಸಿ ಹೆತ್ತ ತಾಯಿಯನ್ನು ಕರೆದೊಯ್ಯಲು ತಿಳಿಸಿದ್ದರು. ಆದರೆ ಭಾನುವಾರ ಸಂಜೆಯವರೆಗೂ ಯಾರೂ ಬಾರದ ಕಾರಣ ಪಡುಬಿದ್ರಿ ಪೊಲೀಸರು ಹಿರಿಯ ಮಗನ ಮನೆಗೆ ಬಿಟ್ಟು ಬಂದಿದ್ದಾರೆ. ಈ ಸಂದರ್ಭ ಹಿರಿಯ ಮಗನ ಕಿರಿಯ ಮಗ ದಿನೇಶ್ ಎಂಬಾತ ತನ್ನನ್ನು ಎಳವೆಯಲ್ಲಿ ಸಾಕಿ ಸಲಹಿದ ಅಜ್ಜಿ ಕುಸುಮಾಳನ್ನು ತಾನು ಸಲಹುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಇನ್ನು ಕೆಲವು ಗಂಡು ಮಕ್ಕಳು ತಾನು ಅವರನ್ನು ಸಾಕುವುದಿಲ್ಲ ಎಂದು ಪೊಲೀಸರಿಗೆ ಹೇಳುವ ಮೂಲಕ ಅಚ್ಚರಿ ಮೂಡಿಸಿದರು. ಹೆತ್ತು, ಹೊತ್ತು, ಸಲಹಿ ಸಾಕಿದ ಈ ತಾಯಿಗೆ ಕೊನೆಗೂ ವಾಸ್ತವ್ಯದ ವ್ಯವಸ್ಥೆ ಕಲ್ಪಿಸಲಾಯಿತು.

ಪ್ರತಿಕ್ರಿಯಿಸಿ (+)