ಮಗಳನ್ನು ಅಮಾನುಷವಾಗಿ ಕೊಂದರು

7
ಮದುವೆಗೆ ಒಪ್ಪದ ಪೋಷಕರು: ಮರ್ಯಾದೆಗೆೇಡಿ ಹತ್ಯೆ

ಮಗಳನ್ನು ಅಮಾನುಷವಾಗಿ ಕೊಂದರು

Published:
Updated:

ಚಂಡೀಗಡ: ಮಗಳು ಒಪ್ಪಿದ ಯುವಕನ ಜತೆ ಮದುವೆಗೆ ಒಲ್ಲದ ಮನೆಯವರು, ಮಗಳನ್ನು ಸಾರ್ವಜನಿಕವಾಗಿ ಕೊಚ್ಚಿ ಕೊಲೆ ಮಾಡಿ ಹುಡುಗನ ರುಂಡವನ್ನು ಚೆಂಡಾಡಿದ ಬೀಭತ್ಸ ಘಟನೆ ಹರಿ­ಯಾಣದ ರೋಹ್ತಕ್‌ ಜಿಲ್ಲೆಯಲ್ಲಿ ಬುಧ­ವಾರ ಸಂಜೆ ನಡೆದಿದೆ.ಈ  ಘಟನೆಯಿಂದ ಇಡೀ ರಾಷ ಆಘಾತದಿಂದ ಬೆಚ್ಚಿಬಿದ್ದಿದೆ. ರೋಹ್ತಕ್‌ ರಾಷ್ಟ್ರದ ರಾಜಧಾನಿ ದೆಹಲಿಯಿಂದ ಕೇವಲ 80 ಕಿ.ಮೀ. ದೂರದಲ್ಲಿದೆ. ರೋಹ್ತಕ್‌, ಹರಿಯಾಣ ಮುಖ್ಯಮಂತ್ರಿ ಭೂಪಿಂದರ್‌ ಸಿಂಗ್‌ ಅವರ ಊರೂ ಹೌದು.ರುಂಡ ಬಿಸಾಕಿದರು: ರೋಹ್ತಕ್‌ ಜಿಲ್ಲೆಯ ಘರ್ನವತಿ ಗ್ರಾಮದ ಒಂದೇ ಗೋತ್ರಕ್ಕೆ ಸೇರಿದ (ಸಗೋತ್ರ) 20 ವರ್ಷದ ನಿಧಿ ಬಾರಕ್‌ ಮತ್ತು 23 ವರ್ಷದ ಧರ್ಮೇಂದ್ರ ಮದುವೆ­ಯಾಗಲು ನಿರ್ಧರಿಸಿದ್ದರು. ಆದರೆ ಯುವತಿಯ ತಂದೆ–ತಾಯಿಗೆ ಇದು ಇಷ್ಟವಿರಲಿಲ್ಲ. ಹೀಗಾಗಿ ಯುವತಿ ನಿಧಿ ಬಾರಕ್‌ ಮತ್ತು ಧರ್ಮೇಂದ್ರ (23) ದೆಹಲಿಗೆ ಹೋಗಿ ಮದುವೆಯಾಗಲು ತೀರ್ಮಾನಿಸಿದ್ದರು.ಯುವಕನ ರುಂಡವನ್ನು ಕಡಿದು­ಹಾಕುವ ಮುನ್ನ ಆತನ ಕೈ ಮತ್ತು ಕಾಲುಗಳನ್ನು ಮುರಿಯಲಾಯಿತು. ಆತನ ದೇಹದ ಹಲವೆಡೆ ಮೂಳೆಗಳು ಮುರಿದಿದ್ದವು. ಏನಿಲ್ಲವೆಂದರೂ ಅರ್ಧ­ಗಂಟೆ ಕಾಲ ಆತನನ್ನು ಅಮಾನುಷವಾಗಿ ಥಳಿಸಲಾಗಿದೆ. ನಂತರ ಆತನ ತಲೆಯನ್ನು ಕಡಿದು ಅದನ್ನು ಆತನ ಮನೆಯ ಮುಂದೆ ಬಿಸಾಕಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.ಇದಕ್ಕೆ ಮುನ್ನ ಆರೋಪಿಗಳು ನಿಧಿಯನ್ನು ಜನರ ಮುಂದೆಯೇ ಕೊಚ್ಚಿ ಕೊಲೆ ಮಾಡಿದರು. ಈ ಭೀಕರ ಘಟನೆ­ಯನ್ನು ಗ್ರಾಮದ ಹಿರಿಯರು ಮೂಕ­ಪ್ರೇಕ್ಷಕರಂತೆ ನೋಡುತ್ತಾ ನಿಂತಿದ್ದರು.ಯುವತಿ ನಿಧಿ ಲಲಿತ ಕಲೆ ಓದಿದ್ದರೆ, ಧರ್ಮೇಂದ್ರ ತಾಂತ್ರಿಕ ಕೋರ್ಸ್‌ ಓದುತ್ತಿದ್ದ. ರೋಹ್ತಕ್‌ನಲ್ಲಿ ಒಂದೇ ಕಾಲೇಜಿನಲ್ಲಿ ಓದುತ್ತಿದ್ದ ಇವರಿಬ್ಬರೂ ಮೊದಲಿಗೆ ಒಳ್ಳೆಯ ಗೆಳೆಯರಾಗಿದ್ದರು. ನಂತರ ಇವರ ಸ್ನೇಹವು ಪ್ರೇಮಕ್ಕೆ ತಿರುಗಿತ್ತು.ಮದುವೆಗೆ ವಿರೋಧವಿದ್ದುದರಿಂದ ಮಂಗಳವಾರ ಇಬ್ಬರೂ ದೆಹಲಿಗೆ ಪರಾರಿಯಾಗಿದ್ದರು. ಆದರೆ ನಿಧಿಯನ್ನು ಫೋನ್‌ ಮೂಲಕ ಸಂಪರ್ಕಿಸಿದ ಯುವ­ತಿಯ ಕುಟುಂಬದವರು, ‘ಯಾರಿಗೂ ಏನನ್ನೂ ಮಾಡುವುದಿಲ್ಲ’ ಎಂದು ಹೇಳಿ ಗ್ರಾಮಕ್ಕೆ ವಾಪಸ್ಸಾಗುವಂತೆ ಮನವಿ ಮಾಡಿದರು. ಅದನ್ನು ನಂಬಿ ಹಿಂದಿರು­ಗಿದವರನ್ನು ಬರ್ಬರವಾಗಿ ಕೊಲೆ ಮಾಡಿ­ದರು ಎಂದು ಪೊಲೀಸರು ತಿಳಿಸಿದ್ದಾರೆ.ಅರೆಬೆಂದ ಶವ ವಶ: ಪೊಲೀಸರಿಗೆ ಈ ವಿಷಯ ಗೊತ್ತಾಗುವ ವೇಳೆಗಾಗಲೇ ಯುವತಿಯ ಅಗ್ನಿಸಂಸ್ಕಾರ ನಡೆಯುತ್ತಿತ್ತು. ನಂತರ ಪೊಲೀಸರು ಸ್ಥಳಕ್ಕೆ ತೆರಳಿ ಅರೆಬೆಂದಿದ್ದ ಯುವತಿಯ ಶವವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.ಈ ಸಂಬಂಧ ಪೊಲೀಸರು ಯುವತಿ­ಯ ತಂದೆ ಬಿಲ್ಲು, ತಾಯಿ, ಮಾವ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry