ಭಾನುವಾರ, ಡಿಸೆಂಬರ್ 15, 2019
24 °C

ಮಗಳು ಮನುಕುಲದ ತೊಟ್ಟಿಲು

–ರಶ್ಮಿ ಎಸ್. Updated:

ಅಕ್ಷರ ಗಾತ್ರ : | |

ಮಗಳು ಮನುಕುಲದ ತೊಟ್ಟಿಲು

1994ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯ ಅಂತಿಮ ಸುತ್ತು. ವಿಶ್ವದ ಮೂವರು ಸುಂದರಿಯರು ವೇದಿಕೆಯ ಮೇಲೆ. ಭಾರತದಿಂದ ಸುಷ್ಮಿತಾ ಸೇನ್‌ ವಿಶ್ವಸುಂದರಿ ಕಿರೀಟದಿಂದ ಕೆಲವೇ ಹೆಜ್ಜೆ ದೂರದಲ್ಲಿದ್ದರು. ತೀರ್ಪುಗಾರರ ಕಡೆಯಿಂದ ಪ್ರಶ್ನೆಯ ಬಾಣ ತೂರಿ ಬಂದಿತ್ತು: ಹೆಣ್ತನದ ಜೀವಾಳವೇನು? ಹತ್ತೊಂಬತ್ತರ ಹರೆಯದ ಸುಷ್ಮಿತಾ ಮೆಲುದನಿಯಲ್ಲಿ ‘ಹೆಣ್ಣಾಗಿ ಹುಟ್ಟಿರುವುದೇ ದೇವರು ನೀಡಿರುವ ಒಲುಮೆಯ ಕೊಡುಗೆ. ಒಂದು ಮಗುವಿನ ಮೂಲ ಅಮ್ಮ. ಅವಳು ಹೆಣ್ಣು. ಪುರುಷನಿಗೆ ಪ್ರೀತಿ, ಪ್ರೇಮ, ಮಮತೆ, ವಾತ್ಸಲ್ಯ, ಸ್ನೇಹ ಬದುಕಿನ ಎಲ್ಲ ಭಾವಗಳನ್ನೂ ಹೇಳಿಕೊಡುವವಳೇ ಹೆಣ್ಣುಮಗಳಲ್ಲವೇ?’. ಅಲ್ಲಿ ನೆರೆದವರಿಂದ ಚಪ್ಪಾಳೆಯಷ್ಟೇ ಅಲ್ಲ, ವಿಶ್ವಸುಂದರಿಯ ಪಟ್ಟವನ್ನೂ ಗೆಲ್ಲಿಸಿಕೊಟ್ಟಿತ್ತು.ಅದಾದ ನಂತರ ಸುಷ್ಮಿತಾ ಮತ್ತೊಮ್ಮೆ ಸುದ್ದಿಯಾಗಿದ್ದು ಹೆಣ್ಣುಮಗುವೊಂದನ್ನು ದತ್ತು ಪಡೆದು, ‘ಸಿಂಗಲ್‌ ಪೇರೆಂಟ್‌’ನತ್ತ ತಮ್ಮ ಒಲವು ತೋರಿದಾಗ. ಅದಕ್ಕಾಗಿ ನ್ಯಾಯಾಲಯದಿಂದ ಒಪ್ಪಿಗೆ ಪಡೆದು, ಮುದ್ದು ಮಗು ‘ರೆನೆ’ಯನ್ನು ಬೆಳೆಸುತ್ತಲೇ ಮೂರು ತಿಂಗಳ ಇನ್ನೊಂದು ಮಗು ‘ಅಲಿಶಾ‘ಳನ್ನು ಮತ್ತೆ ದತ್ತು ಪಡೆದರು. ಹೆಣ್ಣುಮಕ್ಕಳ ಈ ಮೋಹ ಅವರಿಗೆ ಹೆಣ್ತನದ ಬಗೆಗಿರುವ ಗೌರವವನ್ನು ಎತ್ತಿ ತೋರಿಸುವಂತಿದೆ.2009ರಲ್ಲಿ ಫೆಮಿನಾ ಮಿಸ್‌ ಇಂಡಿಯಾ ವರ್ಲ್ಡ್‌ ಪಟ್ಟ ಅಲಂಕರಿಸಿದ ಪೂಜಾ ಚೋಪ್ರಾ ಅವರದ್ದು ವಿಭಿನ್ನ ಕತೆ. ಹೆಣ್ಣು ಮಗು ಬೇಡವೆಂದ ಅಪ್ಪನಿಂದ ಬೇರ್ಪಟ್ಟು, ಅಮ್ಮ ಮತ್ತು ಅಜ್ಜಿಯ ನೆರಳಿನಲ್ಲಿಯೇ ಬೆಳೆದರು. ಅಮ್ಮನ ಹೆಸರು ಬೆಳಗಿದರು.ಇವರಿಬ್ಬರೂ ತಮ್ಮ ಬದುಕಿನಿಂದಲೇ ಭಾರತಕ್ಕೆ ಒಂದು ಸಂದೇಶವನ್ನು ನೀಡಿದ್ದರು– ಮಗಳು ಮನುಕುಲದ ತೊಟ್ಟಿಲು ಅಂತ.

ನೀನಾ ಗುಪ್ತಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು– ಅವರು  ಗರ್ಭಿಣಿಯಾಗಿದ್ದಾಗ, ‘ದೇವರೇ ಹೆಣ್ಣುಮಗುವೇ ಹುಟ್ಟಲಿ. ನನ್ನೆಲ್ಲ ಭಾವನಾತ್ಮಕ ನಿರ್ಣಯಗಳನ್ನೂ ಗೌರವಿಸುವುದು ಮಗಳು ಮಾತ್ರ. ಮಗ ಹುಟ್ಟಿದರೆ ಪ್ರಶ್ನಿಸುತ್ತಾನೆ’ ಎಂದು ಪ್ರಾರ್ಥಿಸಿದ್ದರಂತೆ.ಮಗಳು ಮಸಾಬಾ ರಿಚರ್ಡ್ಸ್ ಜೊತೆಗೆ ಈ ಮಾತನ್ನು ಹೇಳುವಾಗ ನೀನಾ ಕಣ್ಣಲ್ಲಿ ಪ್ರೀತಿಯ ಪಸೆ. ನೀನಾ ದಶಕಗಳವರೆಗೂ ಸಿಂಗಲ್‌ ಪೇರೆಂಟ್‌ ಆಗಿಯೇ ಬದುಕು ಕಳೆದಿದ್ದರು. ಇದೀಗ ಮಗಳನ್ನು ಅಪ್ಪಿ ಮುತ್ತಿಡುವ ಹೊಸ ಪೀಳಿಗೆ ಬಂದಿದೆ. ಮಗಳೊಬ್ಬಳೇ ಸಾಕು ಎಂಬ ನಿರ್ಧಾರ ತೆಗೆದುಕೊಳ್ಳುವವರ ಸಮೂಹವೂ ದೊಡ್ಡದಾಗಿದೆ.ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಮಗಳು ಜನರಿಗೆ ಈಗ ಭಾರ ಎನಿಸುವುದಿಲ್ಲ. ಬದಲಿಗೆ ಭಾವನಾತ್ಮಕವಾಗಿ ಭದ್ರತೆ ನೀಡುವ ಜೀವ ಎಂದು ಅರಿತಿದ್ದಾರೆ. ಯಾರು ಹೆಚ್ಚು ಎಂಬ ವಾದಕ್ಕಿಂತ ಮಗಳೂ ಕಡಿಮೆಯೇನಲ್ಲ ಎಂಬ ಸಮರ್ಥನೆ ಬೆಳೆಯುತ್ತಿದೆ.ಆದರೆ ಕೆಲವೊಮ್ಮೆ ಅಂಗೈಯೊಳಗಣ ಹೂವಿನಂತೆ, ಕಣ್ರೆಪ್ಪೆಯಂತೆ ಮುಚ್ಚಟೆಯಿಂದ ಬೆಳೆಸಿದ ಮಗಳು ಶೋಷಣೆಗೊಳಗಾದಾಗ ಜೀವ ಹಿಂಡಿದಂತೆ ಆಗುತ್ತದೆ. ಇತ್ತೀಚೆಗೆ ನವದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಯುವತಿಯ ತಂದೆ ನ್ಯಾಯಾಲಯದಲ್ಲಿ, ‘ಹೆಣ್ಣುಭ್ರೂಣ ಹತ್ಯೆ ಮಾಡುವವರನ್ನು ಕಂಡಾಗ ಅವರ ತೀರ್ಮಾನ ಸರಿಯೇನೋ ಎನ್ನಿಸುವಷ್ಟು ನನ್ನ ಸಂಕಟ ಹೆಚ್ಚಿದೆ’ ಎಂದು ಹೇಳಿಕೊಂಡಿದ್ದರು.ಇಂಥ ಸುದ್ದಿ ಓದಿದಾಗ ನಮ್ಮ ಮಗಳು ಎಷ್ಟು ಸುರಕ್ಷಿತ ಎನ್ನುವ ಭಾವ ಕಾಡದೇ ಇರದು. ಮಗಳು ಬೆಳೆಯಲಿ, ಮನುಕುಲವ ಬೆಳಗಲಿ ಎಂಬ ಆಶಯದಿಂದಲೇ ಸೆ.4ಅನ್ನು ಅಂತರರಾಷ್ಟ್ರೀಯ ಮಗಳ ದಿನ ಎಂದು ಆಚರಿಸಲಾಗುತ್ತದೆ. ಸೆಪ್ಟೆಂಬರ್‌ ತಿಂಗಳ ನಾಲ್ಕನೆಯ ಭಾನುವಾರವನ್ನು ರಾಷ್ಟ್ರೀಯ ಮಗಳ ದಿನವೆಂದು ಆಚರಿಸಲಾಗುತ್ತಿದೆ. ಮಗಳಿಗೆ ಕೊಡುವ ಕೊಡುಗೆಗಳ ಬಗ್ಗೆ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಭಾರೀ ಪ್ರಚಾರವಂತೂ ಆರಂಭವಾಗಿದೆ.ನಾವು ಮಗಳಿಗೆ ಕೊಡಬೇಕಿರುವುದು ಸ್ವಾಸ್ಥ್ಯಮಯ ಹುಟ್ಟು, ಸುರಕ್ಷಿತ ಜೀವನ. ಮಗಳ ದಿನ ಆಚರಿಸುವುದು ಹಾಗೆಯೇ ಅಲ್ಲವೇ?

 

ಪ್ರತಿಕ್ರಿಯಿಸಿ (+)