ಬುಧವಾರ, ನವೆಂಬರ್ 13, 2019
23 °C

ಮಗಳ ಕನಸು, ಅಪ್ಪನ ಕಾಸು!

Published:
Updated:

`ನನ್ನ ಮಗಳು ಆಯೇಷಾ ಮಾಸ್ ಜನರಿಗೆ ಇಷ್ಟವಾದ ನಟಿ. ವಿಭಿನ್ನ ಪಾತ್ರ ಮಾಡಬೇಕು ಎನ್ನುವುದು ಅವಳ ಆಸೆ. ಮಗಳ ಆಸೆ ಪೂರೈಸಲಿಕ್ಕಾಗಿ ಈ ಸಿನಿಮಾ ಮಾಡಿರುವೆ. ಇದುವರೆಗೂ ಅವಳಿಂದ ಯಾವ ನಿರ್ಮಾಪಕರಿಗೂ ನಷ್ಟವಾಗಿಲ್ಲ. ನನಗೂ ಆಗುವುದಿಲ್ಲ ಎಂಬ ಭರವಸೆ ಇದೆ'. ಇದು `ಸಿಡಿಲಮರಿ' ಚಿತ್ರದ ನಿರ್ಮಾಪಕ ಹಬೀಬ್ ಅವರ ವಿಶ್ವಾಸದ ಮಾತು. ಅಂದಹಾಗೆ, ಅವರು ನಟಿ ಆಯೇಷಾ ಅವರ ತಂದೆ. ಪುತ್ರಿಗೆ ಕರಾಟೆ ಕಲಿಸಿದ ಗುರು ಕೂಡ ಅವರೇ.`ಸಿಡಿಲಮರಿ' ಚಿತ್ರ ಶುರುವಾಗಿ ಎರಡು ವರ್ಷಗಳಾದವು. ಥ್ರಿಲ್ಲರ್ ಮಂಜು ಅವರೇ ಸಾಹಸ ನಿರ್ದೇಶನ ಮಾಡಬೇಕು ಎಂದು ಕಾದಿದ್ದರಿಂದ ಚಿತ್ರ ತಡವಾಯಿತಂತೆ. ಈಗ ಸಿನಿಮಾ ತೆರೆಗೆ ಸಿದ್ಧವಾಗಿದ್ದು, ಅದಕ್ಕೆ ಪೂರ್ವಭಾವಿಯಾಗಿ ಕಳೆದ ವಾರ `ಸಿಡಿಲ ಮರಿ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ನಡೆಯಿತು.ಸಂಗೀತ ನಿರ್ದೇಶಕ ಕೃಪಾಕರ್ ಅವರಂತೂ ಪುಳಕದ ಹೊಳೆಯಲ್ಲಿ ಮೀಯುತ್ತಿದ್ದಂತೆ ಕಾಣಿಸುತ್ತಿದ್ದರು. ತಾವು ಸಂಗೀತ ನೀಡಿರುವ ಚಿತ್ರಗಳಲ್ಲೇ `ಸಿಡಿಲಮರಿ' ಹಾಡುಗಳು ವಿಶಿಷ್ಟ ಎನ್ನುವುದು ಅವರ ಪುಳಕಕ್ಕೆ ಕಾರಣ. `ನಿರ್ದೇಶಕ ರಘುರಾಜ್ ಅವರ ತಾಳ್ಮೆಯಿಂದ ನನಗೆ ಉತ್ತಮವಾಗಿ ರಾಗ ಸಂಯೋಜಿಸಲು ಸಾಧ್ಯವಾಯಿತು' ಎಂದರು.ನಟಿ ಆಯೇಷಾಗೆ ನೃತ್ಯ, ಅಭಿನಯಕ್ಕೆ ಅವಕಾಶ ಇರುವ ಚಿತ್ರದಲ್ಲಿ ನಟಿಸಬೇಕೆಂಬಾಸೆ ಇತ್ತಂತೆ. ಅದು ಈ ಚಿತ್ರದಲ್ಲಿ ನೆರವೇರಿದೆಯಂತೆ. `ಇದು ನನ್ನ ಆರನೇ ಸಿನಿಮಾ. ಆಕ್ಷನ್ ಸಿನಿಮಾಗಳನ್ನೇ ಹೆಚ್ಚಾಗಿ ಮಾಡಿರುವೆ. ಆದರೆ ಇದರಲ್ಲಿ ಕಾಮಿಡಿ, ಸೆಂಟಿಮೆಂಟ್, ಆಕ್ಷನ್ ಬೆರೆತ ಪಾತ್ರ ನಿರ್ವಹಿಸಿರುವೆ. ಇದು ನನ್ನ ಕನಸಿನ ಪಾತ್ರವಾಗಿತ್ತು. ನನ್ನ ಆಸೆ ಈ ಪಾತ್ರದ ಮೂಲಕ ಈಡೇರಿದೆ' ಎಂದರು ಆಯೇಷಾ.`ಶಬ್ದ', `ಜಯಹೇ', `ಲೇಡಿ ಬಾಸ್' ಚಿತ್ರಗಳ ನಂತರ ಆಯೇಷಾ ಅವರೊಂದಿಗೆ ಥ್ರಿಲ್ಲರ್ ಮಂಜು ಕೆಲಸ ಮಾಡುತ್ತಿರುವ ಚಿತ್ರ ಇದಂತೆ. ಆಯೇಷಾ ಅವರ ದೇಹಭಾಷೆಗೆ ಹೊಂದುವಂಥ ಸನ್ನಿವೇಶಗಳನ್ನು ಪೋಣಿಸಿರುವುದಾಗಿ ಮಂಜು ಹೇಳಿದರು. ಚಿತ್ರದಲ್ಲಿ ಆರು ಸಾಹಸ ಸನ್ನಿವೇಶಗಳಿದ್ದು, ಅವುಗಳಲ್ಲಿ ಮೂರು ತುಂಬಾ ವೇಗವಾಗಿವೆಯಂತೆ.ನಿರ್ದೇಶಕ ರಘುರಾಜ್, ಆಯೇಷಾ ನಟನೆಯನ್ನು ಪ್ರಶಂಸಿಸಿದರು. `ಒಂದು ಕಡೆ ಆಕ್ಷನ್‌ನಲ್ಲಿ ಮಿಂಚುವ ಆಯೇಷಾ, ಮತ್ತೊಂದು ಕಡೆ ಹೋಮ್ಲಿ ಹುಡುಗಿಯಾಗಿಯೂ ಮನಸೆಳೆಯುತ್ತಾರೆ' ಎಂದರು.ಚಿತ್ರದಲ್ಲಿ ನಟಿಸಿರುವ ಪೆಟ್ರೋಲ್ ಪ್ರಸನ್ನ ಎರಡು ಐಟಂ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರಂತೆ. ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗ ಮಾಡಿಕೊಂಡಿದ್ದಾಗಿ ಹೇಳಿದ ಅವರು ನೃತ್ಯ ಮಾಡಿದ ನಂತರ ವಾರಾನುಗಟ್ಟಲೆ ವಿಶ್ರಾಂತಿ ತೆಗೆದುಕೊಂಡರಂತೆ.

`ಲಹರಿ' ಸಂಸ್ಥೆ `ಸಿಡಿಲ ಮರಿ'ಯ ಗೀತೆಗಳ ಧ್ವನಿಸುರುಳಿಯನ್ನು ಹೊರತಂದಿದೆ. ಕಾರ್ಯಕ್ರಮದಲ್ಲಿ ಹಾಜರಿದ್ದ ಲಹರಿಯ ವೇಲು- `ಇತ್ತೀಚೆಗೆ ನಿಧನರಾದ ಹಿನ್ನೆಲೆ ಗಾಯಕ ಪಿ.ಬಿ. ಶ್ರೀನಿವಾಸ್ ಅವರ ಹೆಸರಿನಲ್ಲಿ ಸರ್ಕಾರ ಸ್ಟುಡಿಯೋ ಕಟ್ಟಿಸಬೇಕು' ಎಂದು ಒತ್ತಾಯಿಸಿದರು.

ಪ್ರತಿಕ್ರಿಯಿಸಿ (+)