ಮಗುವಿನ ತಲೆಯಿಂದ ಬೇರ್ಪಟ್ಟ ಗಡ್ಡೆ

ಭಾನುವಾರ, ಜೂಲೈ 21, 2019
26 °C
ಕೆಎಲ್‌ಇ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ

ಮಗುವಿನ ತಲೆಯಿಂದ ಬೇರ್ಪಟ್ಟ ಗಡ್ಡೆ

Published:
Updated:

ಬೆಳಗಾವಿ: ಮಗು ಜನಿಸಿದಾಗ ತಲೆಬುರಡೆ ಬೆಳೆಯದೇ,  ತಲೆಯ ಹಿಂಭಾಗದಲ್ಲಿ ಒಂದು ಗಡ್ಡೆ ಬೆಳೆಯುತ್ತಿತ್ತು. ಸ್ಥಳೀಯ ವೈದ್ಯರಿಗೆ ತೋರಿಸಿದಾಗ ಮಗುವಿನ ಶಸ್ತ್ರಚಿಕಿತ್ಸೆ ಅಸಾಧ್ಯ ಎಂದು ಕೈಚೆಲ್ಲಿದ್ದರು. ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬ ದಿಕ್ಕು ತೋಚದೇ ಇರುವ ಬಗ್ಗೆ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡಿತ್ತು.22 ತಿಂಗಳ ಹೆಣ್ಣು ಮಗುವಿನ ಕುರಿತ ಹೃದಯವಿದ್ರಾವಕ ವರದಿಯನ್ನು ಗಮನಿಸಿದ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರ ಸೂಚನೆ ಮೇರೆಗೆ ಕೆಎಲ್‌ಇ ಆಸ್ಪತ್ರೆಯ ವೈದ್ಯರ ತಂಡವು ಅತ್ಯಂತ ವಿರಳವಾಗಿರುವ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದೆ.ರಾಯಬಾಗ ತಾಲ್ಲೂಕಿನ ಆನೇಬೀಕುಡಿ ಗ್ರಾಮದ ವೇದಗಂಗಾ (ಹೆಸರು ಬದಲಾಯಿಸಲಾಗಿದೆ) ಎಂಬ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಪರೀಕ್ಷೆ ನಡೆಸಿದಾಗ, 22 ತಿಂಗಳಾಗಿದ್ದರೂ, ಅದರ ತಲೆಬುರಡೆ ಸರಿಯಾಗಿ ಬೆಳೆದಿರಲಿಲ್ಲ.ಹಿಂಬದಿಯಲ್ಲಿ ಗಡ್ಡೆ ಬೆಳೆಯುತ್ತಿತ್ತು. ಮೆದುಳು ಕೂಡ ಅದಕ್ಕೆ ಅಂಟಿಕೊಂಡಿತ್ತು. ಇದನ್ನು ಗಮನಿಸಿದ ನರಶಸ್ತ್ರಚಿಕಿತ್ಸಾ ವಿಭಾಗ ತಜ್ಞವೈದ್ಯರಾದ ಡಾ. ಎಸ್.ಎಸ್. ಮಹಾಂತಶೆಟ್ಟಿ, ಡಾ. ರಾಜೇಶ ಶೆಣೈ ಹಾಗೂ ಡಾ. ತನಯ ಶಹಾಪುರಕರ ನೇತತ್ವದ ತಂಡವು ಸತತ 6 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನೆರವೇರಿಸಿ ಬೆಳೆದ ಗಡ್ಡೆಯನ್ನು ಮೆದುಳಿನಿಂದ ಯಶಸ್ವಿಯಾಗಿ ಬೇರ್ಪಡಿಸಿ, ಹೊರತೆಗೆದು, ಮಗುವಿಗೆ ಮರು ಜನ್ಮ ನೀಡಿದ್ದಾರೆ. ಮಗುವಿನ ಶಸ್ತ್ರಚಿಕಿತ್ಸೆಯನ್ನು ಆಸ್ಪತ್ರೆಯು ಸಂಪೂರ್ಣ ಉಚಿತವಾಗಿ ನೆರವೇರಿಸಿದೆ.ಜನ್ಮದಿಂದಲೇ ಈ ಗಡ್ಡೆ ಬೆಳೆಯುತ್ತಿದ್ದರಿಂದ ಮಗು ನಡೆಯುವದಾಗಲೀ, ಮಾತನಾಡುವಾಗಲೀ ಮಾಡುತ್ತಿರಲಿಲ್ಲ. ಬೆಳವಣಿಗೆ ಆಗದೇ ಇರುವುದರಿಂದ ಹುಟ್ಟಿನಿಂದ ಸಂಪೂರ್ಣವಾಗಿ ದ್ರವ ಪದಾರ್ಥದ ಆಹಾರವನ್ನು ನೀಡಲಾಗುತ್ತಿತ್ತು.ಈ ಮಗುವಿಗೆ ಜ್ವರ, ಮೂರ್ಛೆರೋಗ ಇರಲಿಲ್ಲ. ಬಿದ್ದು ತಲೆಗೆ ಪೆಟ್ಟಾಗಿರಲಿಲ್ಲ. ಅತ್ಯಂತ ಕ್ಲಿಷ್ಟಕರವಾದ ಈ ಶಸ್ತ್ರಚಿಕಿತ್ಸೆಯನ್ನು ವೈದ್ಯರ ತಂಡವು ಅರವಳಿಕೆ ವೈದ್ಯರಾದ ಡಾ. ವಿಜಯ ಉಮರಾಣಿ ಸಹಕಾರದೊಂದಿಗೆ ಯಶಸ್ವಿಯಾಗಿ ನೆರವೇರಿಸಿದೆ.`ತಲೆಬುರಡೆ ಸಂಪೂರ್ಣವಾಗಿ ಬೆಳೆಯದೇ ಇದ್ದ ಕಾರಣ ಮೆದುಳು ವಯಸ್ಸಿಗೆ ತಕ್ಕಂತೆ ಅಭಿವೃದ್ಧಿ ಹೊಂದಿರುವುದಿಲ್ಲ. ಇದು ಜೀವ ಉಳಿಸುವ ಮತ್ತು ಅತ್ಯಂತ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಯಾಗಿದೆ. ಮಗುವಿಗೆ ಮುಂದೆ ಬರಬಹುದಾದ ಆರೋಗ್ಯ ಸಮಸ್ಯೆಗಳನ್ನು ಸರಿದೂಗಿಸುವಲ್ಲಿ ಯಶಸ್ವಿಯಾಗಿದ್ದೇವೆ. ತಲೆಬುರಡೆಯ ಹೊರಹೋಗುತ್ತಿರುವ ಮೆದುಳನ್ನು ಬುರಡೆಯಲ್ಲಿಯೇ ಬೆಳೆಯುವಂತೆ ಸರಿಪಡಿಸಲಾಗಿದೆ.ಈ ಮಗುವಿಗೆ ಮುಂಬರುವ ದಿನಗಳಲ್ಲಿ ಇನ್ನೂ ಒಂದು ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇದೆ. 10 ಲಕ್ಷದಲ್ಲಿ ಒಂದು ಮಗು ಈ ರೀತಿ ಜನ್ಮತಃ ಸಮಸ್ಯೆ ಎದುರಿಸುತ್ತದೆ' ಎಂದು ಡಾ. ಎಸ್. ಎಸ್. ಮಹಾಂತಶೆಟ್ಟಿ ತಿಳಿಸಿದರು.ಮಗುವಿನ ಜೀವ ಉಳಿಸಿದ ಹಾಗೂ ಸಂಪೂರ್ಣವಾಗಿ ಉಚಿತ ಚಿಕಿತ್ಸೆ ನೀಡಿದ ವೈದ್ಯರ ತಂಡವನ್ನು ಡಾ. ಪ್ರಭಾಕರ ಕೋರೆ ಹಾಗೂ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಂ.ವಿ. ಜಾಲಿ ಅಭಿನಂದಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry