ಬುಧವಾರ, ಆಗಸ್ಟ್ 21, 2019
22 °C

ಮಗು ಎದುರೇ ತಾಯಿಯ ಬರ್ಬರ ಕೊಲೆ

Published:
Updated:
ಮಗು ಎದುರೇ ತಾಯಿಯ ಬರ್ಬರ ಕೊಲೆ

ಬೆಂಗಳೂರು

: ಮಹಿಳೆಯೊಬ್ಬರನ್ನು ಅವರ ಐದು ವರ್ಷದ ಮಗುವಿನ ಎದುರೇ ಬರ್ಬರವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಜೆ.ಪಿ.ನಗರ ಸಮೀಪದ ವೆಂಕಟಾದ್ರಿ ಲೇಔಟ್‌ನಲ್ಲಿ ಗುರುವಾರ ರಾತ್ರಿ ನಡೆದಿದೆ.ವೆಂಕಟಾದ್ರಿ ಲೇಔಟ್ ಎರಡನೇ ಅಡ್ಡರಸ್ತೆ ನಿವಾಸಿ ಜ್ಯೋತಿಲಕ್ಷ್ಮಿ (33) ಕೊಲೆಯಾದವರು. ಪತಿ ಹೇಮಚಂದ್ರ ಅವರಿಂದ ಎರಡು ವರ್ಷಗಳ ಹಿಂದೆ ವಿಚ್ಛೇದನ ಪಡೆದುಕೊಂಡಿದ್ದ ಅವರು ಮಗಳು ಜಾಗೃತಿ ಜತೆ ಪ್ರತ್ಯೇಕವಾಗಿ ವಾಸವಾಗಿದ್ದರು.ರಾತ್ರಿ ಅವರ ಮನೆಗೆ ಬಂದಿರುವ ದುಷ್ಕರ್ಮಿ, ಕೊಠಡಿಯೊಂದರಲ್ಲಿ ಜ್ಯೋತಿಲಕ್ಷ್ಮಿಯ ಕತ್ತು ಮತ್ತು ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ. ಆಗ ಅವರು ನೆರವಿಗಾಗಿ ಕೂಗಿಕೊಂಡಿದ್ದಾರೆ. ಈ ವೇಳೆ ನಡುಮನೆಯಲ್ಲಿ (ಹಾಲ್) ಟಿ.ವಿ ನೋಡುತ್ತಾ ಕುಳಿತಿದ್ದ ಜಾಗೃತಿ, ತಾಯಿಯ ಚೀರಾಟ ಕೇಳಿ ಕೊಠಡಿಯೊಳಗೆ ಹೋಗಿದ್ದಾಳೆ. ಈ ಸಂದರ್ಭದಲ್ಲಿ ದುಷ್ಕರ್ಮಿ ಆಕೆಯನ್ನು ತಳ್ಳಿ ಪರಾರಿಯಾಗಿದ್ದಾನೆ. ಈ ಸಂಗತಿ ಜಾಗೃತಿಯ ವಿಚಾರಣೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಆರೋಪಿಯು ತಳ್ಳಿದ ರಭಸಕ್ಕೆ ಕೆಳಗೆ ಬಿದ್ದು ಗಾಯಗೊಂಡ ಜಾಗೃತಿ, ಪ್ರಜ್ಞೆ ತಪ್ಪಿದ್ದಾಳೆ. ತೀವ್ರ ರಕ್ತಸ್ರಾವವಾಗಿ ಅಸ್ವಸ್ಥಗೊಂಡ ಜ್ಯೋತಿಲಕ್ಷ್ಮಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ರಾಜಾಜಿನಗರ ಬಳಿಯ ಮರಿಯಪ್ಪನಪಾಳ್ಯದಲ್ಲಿ ವಾಸವಿರುವ ಜ್ಯೋತಿಲಕ್ಷ್ಮಿ ಪೋಷಕರು ರಾತ್ರಿ 9.30ರ ಸುಮಾರಿಗೆ ಮಗಳ ಮೊಬೈಲ್‌ಗೆ ಏಳೆಂಟು ಬಾರಿ ಕರೆ ಮಾಡಿದ್ದಾರೆ. ಆದರೆ, ಅವರು ಕರೆ ಸ್ವೀಕರಿಸಿಲ್ಲ. ಇದರಿಂದ ಅನುಮಾನಗೊಂಡ ಪೋಷಕರು ವೆಂಕಟಾದ್ರಿ ಲೇಔಟ್‌ನಲ್ಲಿರುವ ಸುಶೀಲಮ್ಮ ಎಂಬ ಸಂಬಂಧಿಕರಿಗೆ ಕರೆ ಮಾಡಿ ಮಗಳ ಮನೆಯ ಬಳಿ ಹೋಗಿ ನೋಡುವಂತೆ ತಿಳಿಸಿದ್ದಾರೆ. ಅದೇ ರೀತಿ ಸುಶೀಲಮ್ಮ ಅವರು ಶುಕ್ರವಾರ ಬೆಳಿಗ್ಗೆ ಜ್ಯೋತಿಲಕ್ಷ್ಮಿಯ ಮನೆಗೆ ಹೋದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಜಾಗೃತಿ, ಹುಳಿಮಾವು ಸಮೀಪದ ಖಾಸಗಿ ಶಾಲೆಯಲ್ಲಿ ಯು.ಕೆ.ಜಿ ಓದುತ್ತಿದ್ದಾಳೆ. ಜ್ಯೋತಿಲಕ್ಷ್ಮಿ, ಮಗಳನ್ನು ಪ್ರತಿನಿತ್ಯ ಬೆಳಿಗ್ಗೆ ಒಂಬತ್ತು ಗಂಟೆಗೆ ಶಾಲಾ ವಾಹನದಲ್ಲಿ ಶಾಲೆಗೆ ಕಳುಹಿಸಿ ಬಳಿಕ ಕೆಲಸಕ್ಕೆ ಹೋಗುತ್ತಿದ್ದರು. ಸಂಜೆ ನಾಲ್ಕು ಗಂಟೆಗೆ ಶಾಲೆಯಿಂದ ವಾಪಸ್ ಬರುತ್ತಿದ್ದ ಜಾಗೃತಿ, ಮನೆಯ ಸಮೀಪದ ಡೇ-ಕೇರ್‌ನಲ್ಲಿ (ಹಗಲು ಆರೈಕೆ ಕೇಂದ್ರ) ಇರುತ್ತಿದ್ದಳು. ಜ್ಯೋತಿಲಕ್ಷ್ಮಿ, ಸಂಜೆ ಆರು ಗಂಟೆಗೆ ಕಚೇರಿಯಿಂದ ಹಿಂದಿರುಗಿದ ನಂತರ ಮಗಳನ್ನು ಮನೆಗೆ ಕರೆದುಕೊಂಡು ಬರುತ್ತಿದ್ದರು. ಆದರೆ, ಅವರು ಗುರುವಾರ ಮಗಳನ್ನು ಶಾಲೆಗೆ ಕಳುಹಿಸಿದ ಬಳಿಕ ಕಚೇರಿಗೆ ಹೋಗಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.ಎಂಬಿಎ ಪದವೀಧರೆಯಾದ ಜ್ಯೋತಿಲಕ್ಷ್ಮಿ, ಜೆ.ಪಿ.ನಗರ ಐದನೇ ಹಂತದಲ್ಲಿನ ಸಾಫ್ಟ್‌ವೇರ್ ಕಂಪೆನಿಯೊಂದರ ಮಾನವ ಸಂಪನ್ಮೂಲ ವಿಭಾಗದಲ್ಲಿ ಉದ್ಯೋಗಿಯಾಗಿದ್ದರು. ಅವರಿಂದ ವಿಚ್ಛೇದನ ಪಡೆದುಕೊಂಡ ಬಳಿಕ ಹೇಮಚಂದ್ರ ಅವರು ಮತ್ತೊಂದು ಮದುವೆಯಾಗಿ ಜೆ.ಪಿ.ನಗರ ಬಳಿಯ ಆರ್‌ಬಿಐ ಲೇಔಟ್‌ನಲ್ಲಿ ಎರಡನೇ ಪತ್ನಿಯೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದಾರೆ.`ವಿಚ್ಛೇದನದ ನಂತರ ಜ್ಯೋತಿಲಕ್ಷ್ಮಿಗೂ ಮತ್ತು ನನಗೂ ಯಾವುದೇ ಸಂಪರ್ಕವಿರಲಿಲ್ಲ. ಘಟನೆ ಬಗ್ಗೆ ನನಗೆ ಏನೂ ಗೊತ್ತಿಲ್ಲ' ಎಂದು ಹೇಮಚಂದ್ರ ಸುದ್ದಿಗಾರರಿಗೆ ತಿಳಿಸಿದರು.

`ಮಗಳ ಮೊಬೈಲ್‌ಗೆ ರಾತ್ರಿ ಹಲವು ಬಾರಿ ಮಾಡಿದರೂ ಆಕೆ ಕರೆ ಸ್ವೀಕರಿಸಲಿಲ್ಲ. ಅವಳನ್ನು ಯಾರು ಕೊಲೆ ಮಾಡಿದರು ಮತ್ತು ಕೊಲೆಗೆ ಕಾರಣವೇನು ಎಂಬುದು ಗೊತ್ತಿಲ್ಲ. ಮಗಳು ವಾರಾಂತ್ಯದಲ್ಲಿ ಮಗುವಿನ ಜತೆ ಮನೆಗೆ ಬರುತ್ತಿದ್ದಳು' ಎಂದು ಮೃತರ ತಂದೆ ನರಸಯ್ಯ ಹೇಳಿದರು. ಜೆ.ಪಿ.ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.ಶವದ ಜತೆ ರಾತ್ರಿ ಕಳೆದ ಕಂದಮ್ಮ

`ಪರಾರಿಯಾಗುವ ಯತ್ನದಲ್ಲಿ ಆರೋಪಿಯು ತಳ್ಳಿದ ರಭಸಕ್ಕೆ ಜಾಗೃತಿಯ ತಲೆಗೆ ತೀವ್ರ ಪೆಟ್ಟಾಗಿದೆ. ಇದರಿಂದ ಪ್ರಜ್ಞೆ ತಪ್ಪಿದ ಆಕೆ ರಾತ್ರಿಯಿಡೀ ತಾಯಿಯ ಶವದ ಪಕ್ಕದಲ್ಲೇ ಮಲಗಿದ್ದಳು. ಕೊಲೆಯ ಸುದ್ದಿ ತಿಳಿದು ಶುಕ್ರವಾರ ಬೆಳಿಗ್ಗೆ ಸ್ಥಳಕ್ಕೆ ಹೋದ ಸಿಬ್ಬಂದಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರು' ಎಂದು  ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

`ಘಟನೆಯಿಂದ ಆಘಾತಗೊಂಡಿರುವ ಜಾಗೃತಿ ಸ್ಪಷ್ಟವಾಗಿ ಏನನ್ನೂ ಹೇಳುತ್ತಿಲ್ಲ. ಸಾಕಷ್ಟು ಭಯಭೀತಳಾಗಿರುವ ಆಕೆ ತೊದಲುತ್ತಾ ಮಾತನಾಡುತ್ತಿದ್ದಾಳೆ. ಮಗು ಚೇತರಿಸಿಕೊಂಡು ಹೇಳಿಕೆ ನೀಡಿದ ನಂತರ ಆರೋಪಿ ಹಾಗೂ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ' ಎಂದಿದ್ದಾರೆ.ವಿಶೇಷ ತಂಡ

ಪ್ರಕರಣದ ತನಿಖೆಗೆ ಜಯನಗರ, ಜೆ.ಪಿ.ನಗರ, ಚನ್ನಮ್ಮನಕೆರೆ ಅಚ್ಚುಕಟ್ಟು, ಆಡುಗೋಡಿ ಮತ್ತು ಬಸವನಗುಡಿ ಠಾಣೆಯ ಇನ್‌ಸ್ಪೆಕ್ಟರ್‌ಗಳನ್ನು ಒಳಗೊಂಡ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ. ಆರೋಪಿ ಬಗ್ಗೆ ಸುಳಿವು ಸಿಕ್ಕಿದ್ದು, ಸದ್ಯದಲ್ಲೇ ಆತನನ್ನು ಬಂಧಿಸಲಾಗುತ್ತದೆ' ಎಂದು ದಕ್ಷಿಣ ವಿಭಾಗದ ಡಿಸಿಪಿ ಎಚ್.ಎಸ್.ರೇವಣ್ಣ `ಪ್ರಜಾವಾಣಿ'ಗೆ ತಿಳಿಸಿದರು.

`ಜ್ಯೋತಿಲಕ್ಷ್ಮಿ ಅವರ ಚಿನ್ನಾಭರಣ ಅಥವಾ ಹಣ ದೋಚುವ ಉದ್ದೇಶಕ್ಕಾಗಿ ಈ ಕೊಲೆ ನಡೆದಿಲ್ಲ' ಎಂದು ಅವರು ಹೇಳಿದ್ದಾರೆ.ಪರಿಚಿತನಿಂದಲೇ ಕೃತ್ಯ

`ಆರೋಪಿಯು ಬಲವಂತವಾಗಿ ಬಾಗಿಲು ಒಡೆದು ಮನೆಯೊಳಗೆ ಹೋಗಿಲ್ಲ. ಅಲ್ಲದೇ, ಆ ವ್ಯಕ್ತಿಗೆ ಜ್ಯೋತಿಲಕ್ಷ್ಮಿ ಅವರು ಘಟನೆಗೂ ಮುನ್ನ ಟೀ ಮತ್ತು ಪಾಪ್‌ಕಾರ್ನ್ ಕೊಟ್ಟಿದ್ದಾರೆ. ಟೀ ಕುಡಿದ ಆತ ಲೋಟವನ್ನು ಘಟನೆ ನಡೆದಿರುವ ಕೊಠಡಿಯಲ್ಲಿನ ಮೇಜಿನ ಮೇಲೆ ಇಟ್ಟಿದ್ದಾನೆ. ಪಾಪ್‌ಕಾರ್ನ್ ಚೂರುಗಳು ಸಹ ಆ ಮೇಜಿನ ಮೇಲೆ ಬಿದ್ದಿವೆ. ಈ ಅಂಶಗಳಿಂದ ಪರಿಚಿತ ವ್ಯಕ್ತಿಯೇ ಅವರನ್ನು ಕೊಲೆ ಮಾಡಿದ್ದಾನೆ ಎಂದು ಗೊತ್ತಾಗುತ್ತದೆ' ಎಂದು ತನಿಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

Post Comments (+)