ಸೋಮವಾರ, ನವೆಂಬರ್ 18, 2019
20 °C

`ಮಗು ಮನಸಿನ' ಅಮೀರ್‌ಗೆ ಅಭಿಷೇಕ್ ಮೆಚ್ಚುಗೆ

Published:
Updated:

ಅಭಿಷೇಕ್ ಬಚ್ಚನ್ ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ ಜತೆಗೆ `ಧೂಮ್ 3' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಮೀರ್  ಖಾನ್ ಅವರನ್ನು ಸೆಟ್‌ನಲ್ಲಿ ಹತ್ತಿರದಿಂದ ನೋಡಿರುವ ಅಭಿಗೆ `ಅಮೀರ್ ಪುಟ್ಟ ಮಗು' ಅಂತ ಅನಿಸಿದೆಯಂತೆ.`ಧೂಮ್ 3' ಚಿತ್ರದಲ್ಲಿ ಅಮೀರ್ ಖಳನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರೆ, ಅಭಿಷೇಕ್ ಎಸಿಪಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರೀಕರಣದ ವೇಳೆ ಅಮೀರ್ ಜತೆಗೆ ಕಳೆದ ಕ್ಷಣಗಳನ್ನು ಅಭಿ ನೆನಪಿಸಿಕೊಂಡಿದ್ದಾರೆ: `ಅಮೀರ್ ಅವರೊಟ್ಟಿಗೆ ಕೆಲಸ ಮಾಡಿದಾಗ ಆಗುವ ಅನುಭವವೇ ಬೇರೆ. ಅವರಿಂದ ಕಲಿಯುವಂಥದ್ದು ಸಾಕಷ್ಟಿದೆ. ಸೆಟ್‌ನಲ್ಲಿ ಎಲ್ಲರನ್ನೂ ನಗಿಸುವ ಅಮೀರ್ ಪುಟ್ಟ ಮಗುವಿನ ಹಾಗೆ ಲವಲವಿಕೆಯಿಂದ ಇರುತ್ತಾರೆ. ಎಲ್ಲ ವಿಷಯಗಳಲ್ಲೂ ತನ್ಮಯತೆಯಿಂದ ತೊಡಗಿಸಿಕೊಳ್ಳುವ ವ್ಯಕ್ತಿತ್ವ ಅವರದ್ದು'.`ಪ್ರತಿಯೊಬ್ಬ ನಟನೂ ಇನ್ನೊಬ್ಬ ನಟನಿಂದ ಕಲಿಯುವ ಸಾಕಷ್ಟು ಸಂಗತಿಗಳು ಇದ್ದೇ ಇರುತ್ತವೆ. ನಾನೊಬ್ಬ ನಟನಾಗಿ ಎಲ್ಲರಿಂದಲೂ ಕಲಿಯುವ ಪ್ರವೃತ್ತಿ ಅಳವಡಿಸಿಕೊಂಡಿದ್ದೇನೆ. ನನ್ನ ತಂದೆ ಸಹ ಕಿರಿಯ ಕಲಾವಿದರಿಂದ ಕೆಲವು ಗುಣಗಳನ್ನು ಕಲಿತು ತಮ್ಮ ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡಿರುವುದನ್ನು ನಾನೇ ಕಂಡಿದ್ದೇನೆ' ಎಂದಿದ್ದಾರೆ ಅಭಿ.`ಧೂಮ್' ಸರಣಿ ಚಿತ್ರಗಳಲ್ಲಿ ಅಭಿ ಸತತ ಮೂರನೇ ಬಾರಿಯೂ ಎಸಿಪಿ ಪಾತ್ರ ನಿರ್ವಹಿಸುತ್ತಿರುವುದು ಅವರಿಗೆ ಬೇಸರ ತರಿಸಿಲ್ಲವಂತೆ. ಎಸಿಪಿ ಜೈದೀಕ್ಷಿತ್ ಪಾತ್ರವನ್ನು ತುಂಬಾ ಖುಷಿಯಿಂದಲೇ ನಿರ್ವಹಿಸಿದ್ದಾರಂತೆ. “ಒಂದೇ ಪಾತ್ರವನ್ನು ಸತತ ಮೂರನೇ ಬಾರಿ ನಿರ್ವಹಿಸುವುದು ಸವಾಲಿನ ಸಂಗತಿ. ಧೂಮ್ ಸರಣಿ ಚಿತ್ರಗಳಲ್ಲಿ ಒಂದೇ ಪಾತ್ರವನ್ನು ಪ್ರೇಕ್ಷಕರ ಆಸಕ್ತಿ ಕೆರಳಿಸುವ ರೀತಿಯಲ್ಲಿ ಪರಿಣಾಮಕಾರಿಯಾಗಿ ನಿರ್ವಹಿಸುವುದು ನನ್ನ ಮುಂದಿದ್ದ ಸವಾಲು. ಧೂಮ್ 3 ಚಿತ್ರದಲ್ಲಿ ಜೈದೀಕ್ಷಿತ್ ಪಾತ್ರ ವೀಕ್ಷಿಸಿದ ವೀಕ್ಷಕರು `ಓಹ್! ನಾವು ಎಸಿಪಿ ಜೈದೀಕ್ಷಿತ್‌ರ ಈ ನಟನೆಯನ್ನು ಹಿಂದಿನ ಸಿನಿಮಾದಲ್ಲಿ ನೋಡಿದ್ದೆವು' ಎಂದು ಉದ್ಗರಿಸುವಂತೆ ಹೊಸ ರೀತಿಯಲ್ಲಿ ಅಭಿನಯಿಸಬೇಕು” ಎಂದಿದ್ದಾರೆ ಅವರು.

 

ಪ್ರತಿಕ್ರಿಯಿಸಿ (+)