`ಮಗು ಸಾವಿಗೆ ನ್ಯುಮೋನಿಯಾ ಕೂಡ ಕಾರಣ'

ಭಾನುವಾರ, ಜೂಲೈ 21, 2019
22 °C

`ಮಗು ಸಾವಿಗೆ ನ್ಯುಮೋನಿಯಾ ಕೂಡ ಕಾರಣ'

Published:
Updated:

ಬೆಂಗಳೂರು: ದೇವರಜೀವನಹಳ್ಳಿಯಲ್ಲಿ ಅಪೌಷ್ಟಕತೆಯಿಂದ ಬಳಲುತ್ತಿದ್ದ ಮೇಘಲಾ ಎಂಬ ಬಾಲಕಿ ನ್ಯುಮೋನಿಯಾ ಸೋಂಕಿನಿಂದ ಸಾವಿಗೀಡಾಗಿರುವುದು ಖಚಿತವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸುವ ಪ್ರಸ್ತಾವ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ ಅವರು ಸೋಮವಾರ ವಿಧಾನಸಭೆಗೆ ತಿಳಿಸಿದರು.ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ನಾಯಕ ಜಗದೀಶ ಶೆಟ್ಟರ್ ಅವರು, ಸರ್ಕಾರದ ನಿರ್ಲಕ್ಷ್ಯದಿಂದ ಬಾಲಕಿ ಸಾವಿಗೀಡಾಗಿದ್ದಾಳೆ ಎಂದು ದೂರಿದರು. ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿದರು.

ಈ ಕುರಿತು ಉತ್ತರಿಸಿದ ಸಚಿವೆ, ಬಾಲಕಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದಳು. ಇತ್ತೀಚೆಗೆ ಆಕೆಗೆ ನ್ಯುಮೋನಿಯಾ ಸೋಂಕು ತಗುಲಿತ್ತು. ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೂ ಆಕೆ ಬದುಕಿ ಉಳಿದಿಲ್ಲ. ಅಪೌಷ್ಟಿಕತೆ ಮತ್ತು ನ್ಯುಮೋನಿಯಾ ಎರಡೂ ಬಾಲಕಿಯ ಸಾವಿಗೆ ಕಾರಣ ಎಂಬುದು ತಿಳಿದಿದೆ. ಆದ್ದರಿಂದ ತನಿಖೆಯ ಅಗತ್ಯ ಇಲ್ಲ, ಎಂದು ಪ್ರತಿಪಕ್ಷದ ಸದಸ್ಯರ ಬೇಡಿಕೆಯನ್ನು ತಳ್ಳಿಹಾಕಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧು ಇಲಾಖೆಯು ಡಿಸೆಂಬರ್ ತಿಂಗಳಲ್ಲಿ ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದ ಸಮೀಕ್ಷೆ ನಡೆಸಿತ್ತು. ರಾಜ್ಯದಲ್ಲಿ 3,549 ಮಕ್ಕಳು ನಿಗದಿಗಿಂತ ಕಡಿಮೆ ತೂಕ ಹೊಂದಿರುವುದು ಪತ್ತೆಯಾಗಿತ್ತು. ಈ ಮಕ್ಕಳಿಗೆ ಇಲಾಖೆಯ ವತಿಯಿಂದ ಪೌಷ್ಟಿಕ ಆಹಾರ ಮತ್ತು ಔಷಧಿಗಳನ್ನು ಪೂರೈಕೆ ಮಾಡಲಾಗುತ್ತಿದೆ. ಅವರಲ್ಲಿ ಮೇಘಲಾ ಕೂಡ ಒಬ್ಬಳಾಗಿದ್ದಳು ಎಂದು ವಿವರಿಸಿದರು.ಎಂಟು ತಿಂಗಳ ಅವಧಿಯಲ್ಲಿ ಬಾಲಕಿಯ ತೂಕದಲ್ಲಿ ತುಸು ಏರಿಕೆ ಕಂಡುಬಂದಿತ್ತು. ಆದರೆ, ಇತ್ತೀಚೆಗೆ ಆಕೆಗೆ ನ್ಯುಮೋನಿಯಾ ಸೋಂಕು ತಗುಲಿತ್ತು. ಅದಕ್ಕೆ ಚಿಕಿತ್ಸೆ ನೀಡಿದರೂ ಫಲಕಾರಿಯಾಗಿಲ್ಲ. ಈ ಪ್ರಕರಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಯಾವುದೇ ಲೋಪ ಆಗಿಲ್ಲ. ಬಾಲಕಿಯ ರಕ್ಷಣೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನೂ ಕೈಗೊಳ್ಳಲಾಗಿತ್ತು ಎಂದರು.`ಆರೋಗ್ಯ ಸಚಿವ ಯು.ಟಿ.ಖಾದರ್ ಅವರೊಂದಿಗೆ ಬಾಲಕಿಯ ಮನೆಗೆ ನಾನು ಖುದ್ದಾಗಿ ಭೇಟಿ ನೀಡಿದ್ದೇನೆ. ಬಾಲಕಿಯ ತಾಯಿ ಅಂಧರು. ದುಶ್ಚಟಗಳನ್ನು ಅಂಟಿಸಿಕೊಂಡಿದ್ದ ತಂದೆ ಎರಡು ತಿಂಗಳ ಹಿಂದೆ ಮೃತಪಟ್ಟಿದ್ದರು. ಬಾಲಕಿಯ ಅಜ್ಜಿ ಆಕೆಯನ್ನು ಸಲಹುತ್ತಿದ್ದರು. ಅಜ್ಜಿ ಎರಡು ವರ್ಷದ ಹಿಂದೆ ಮೃತಪಟ್ಟಿದ್ದಾರೆ. ಅವರು ವಾಸಿಸುತ್ತಿರುವ ಮನೆಯ ವಾತಾವರಣ ಕೂಡ ಆರೋಗ್ಯಕರವಾಗಿಲ್ಲ' ಎಂದು ಹೇಳಿದರು.ಗರಂ ಆದ ಸ್ಪೀಕರ್

ಬಾಲಕಿ ಸಾವಿನ ಪ್ರಕರಣ ಕುರಿತು ಪ್ರಸ್ತಾಪಿಸುತ್ತಿದ್ದ ವೇಳೆ ವಿಧಾನಸಭೆಯ ಅಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಬಿಜೆಪಿ ನಾಯಕ ಜಗದೀಶ ಶೆಟ್ಟರ್ ವಿರುದ್ಧ ಗರಂ ಆದ ಪ್ರಸಂಗವೂ ನಡೆಯಿತು.ಶೆಟ್ಟರ್ ವಿಷಯ ಪ್ರಸ್ತಾಪಿಸುತ್ತಿದ್ದಾಗಲೇ ಮಧ್ಯ ಪ್ರವೇಶಿಸಿದ ಸ್ಪೀಕರ್, `ಸಾಕು ಬಿಡಿ. ಸಚಿವರು ಉತ್ತರ ಕೊಡುತ್ತಾರೆ' ಎಂದರು. `ವಿಷಯ ಚರ್ಚೆ ಮಾಡೋದು ಬೇಡ ಅಂದ್ರೆ ಹೇಗೆ? ಪ್ರಶ್ನೆ ಕೇಳ್ಬೇಡಿ ಅಂದ್ರೆ ಹೇಗೆ?' ಎಂದು ಶೆಟ್ಟರ್ ಪ್ರಶ್ನಿಸಿದರು. ಆಗ ಪ್ರತಿಕ್ರಿಯಿಸಿದ ಸ್ಪೀಕರ್, `ನೇರವಾಗಿ ವಿಷಯಕ್ಕೆ ಬರಬೇಕು' ಎಂದರು.ಆದರೂ ಶೆಟ್ಟರ್ ಹಟ ಬಿಡಲಿಲ್ಲ. ಇದರಿಂದ ಸಿಟ್ಟಾದ ಸಭಾಧ್ಯಕ್ಷರು, `ನೀವು ಬರೆದಿರುವ ಪತ್ರ ನೋಡಿ. ಹಿರಿಯ ಸದಸ್ಯರು ವಿಷಯ ಪ್ರಸ್ತಾಪಿಸೋದು ಹೀಗಾ?' ಎಂದರು. ಆಗ ಕೋಪಗೊಂಡ ಶೆಟ್ಟರ್, `ಹೇಗೆ ಬರೆಯಬೇಕು' ಎಂದು ಜೋರು ದನಿಯಲ್ಲಿ ಪ್ರಶ್ನಿಸಿದರು. `ಆಯ್ತು ಬಿಡಿ ನಿಮ್ಮಿಂದ ಕಲಿಯೋಣ' ಎಂದು ಕಾಗೋಡು ತಿಮ್ಮಪ್ಪ ಸಿಟ್ಟಿನಿಂದಲೇ ಪ್ರತಿಕ್ರಿಯಿಸಿದರು.ಅಷ್ಟರಲ್ಲಿ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, `ಶೆಟ್ಟರ್ ಅವರೇ ನೀವು ಯಾವಾಗಲೂ ತಾಳ್ಮೆಯಿಂದ ಇರುವವರು. ಇವತ್ತು ಏಕೆ ತಾಳ್ಮೆ ಕಳೆದುಕೊಂಡಿದ್ದೀರಿ' ಎಂದರು. `ಅವರು ಯಾರ ಹತ್ತಿರವೋ ಜಗಳ ಆಡಿಕೊಂಡು ಬಂದಿರುವಂತೆ ಕಾಣಿಸುತ್ತಿದೆ' ಎಂದು ಉನ್ನತ ಶಿಕ್ಷಣ ಸಚಿವ ದೇಶಪಾಂಡೆ ದನಿಗೂಡಿಸಿದರು.ಬಳಿಕ ಸಚಿವರು ಉತ್ತರ ನೀಡಿದರು. ಮತ್ತೆ ಶೆಟ್ಟರ್ ಮಾತಿಗೆ ನಿಂತರು. ಸ್ಪೀಕರ್ ಅವಕಾಶ ನಿರಾಕರಿಸಿದರು. ಆದರೂ ಮಾತನಾಡುತ್ತಲೇ ಇದ್ದರು. `ಮಾತು ನಿಲ್ಲಿಸಿ' ಎಂದು ಗದರಿದ ಸ್ಪೀಕರ್, ಜೆಡಿಎಸ್‌ನ ವೈ.ಎಸ್.ವಿ.ದತ್ತ ಅವರಿಗೆ ವಿಷಯ ಪ್ರಸ್ತಾಪಕ್ಕೆ ಅವಕಾಶ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry