ಶುಕ್ರವಾರ, ನವೆಂಬರ್ 22, 2019
25 °C

ಮಚ್ಚಿನಿಂದ ಹಲ್ಲೆ: ಎಳನೀರ ಮಂಜ ಬರ್ಬರ ಕೊಲೆ

Published:
Updated:

ಬೆಂಗಳೂರು: ದುಷ್ಕರ್ಮಿಗಳು ಚಾಮರಾಜಪೇಟೆಯಲ್ಲಿ ಸೋಮವಾರ ಸಂಜೆ ಮಂಜುನಾಥ್ ಉರುಫ್ ಎಳನೀರು ಮಂಜ (30) ಎಂಬುವರನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದು, ಘಟನೆ ನಡೆದ ಕೆಲವೇ ತಾಸುಗಳಲ್ಲಿ ಪೊಲೀಸರು ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ವಿಠ್ಠಲನಗರ ಐದನೇ ಅಡ್ಡರಸ್ತೆ ನಿವಾಸಿಯಾದ ಮಂಜುನಾಥ್, ಬೈಕ್‌ನಲ್ಲಿ ಸಂಜೆ ಜಿಮ್ ಸೆಂಟರ್‌ಗೆ ಹೋಗುತ್ತಿದ್ದಾಗ ನಾಲ್ಕೈದು ಮಂದಿ ದುಷ್ಕರ್ಮಿಗಳು ಆಟೊದಲ್ಲಿ ಹಿಂಬಾಲಿಸಿ ಬಂದು ಈ ಕೃತ್ಯ ಎಸಗಿದ್ದಾರೆ. ಚಾಮರಾಜಪೇಟೆ ಒಂಬತ್ತನೇ ಅಡ್ಡರಸ್ತೆಯಲ್ಲಿ ಆತನನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಮಚ್ಚು ಲಾಂಗ್‌ಗಳಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ತೀವ್ರ ರಕ್ತಸ್ರಾವವಾಗಿ ಅಸ್ವಸ್ಥಗೊಂಡ ಆತನನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟ ಎಂದು ಪೊಲೀಸರು ಹೇಳಿದ್ದಾರೆ.ಮಂಜುನಾಥ್ ಮತ್ತು ಬೋರೇಗೌಡ ಎಂಬಾತನ ನಡುವೆ ಹಣಕಾಸು ವಿಷಯವಾಗಿ ಭಿನ್ನಾಭಿಪ್ರಾಯ ಉಂಟಾಗಿತ್ತು. ಈ ಕಾರಣಕ್ಕಾಗಿ ಬೋರೇಗೌಡ ತನ್ನ ಸಹಚರರ ಜತೆ ಸೇರಿಕೊಂಡು ಈ ಕೃತ್ಯ ಎಸಗಿದ್ದಾನೆ. ಆಟೊ ಇಟ್ಟುಕೊಂಡಿದ್ದ ಮಂಜುನಾಥ್, ರಿಯಲ್ ಎಸ್ಟೇಟ್ ವ್ಯವಹಾರ ಸಹ ಮಾಡುತ್ತಿದ್ದ. ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಯಾದ ಆತನ ವಿರುದ್ಧ ಈ ಹಿಂದೆ ಕೊಲೆ ಯತ್ನ ಪ್ರಕರಣವೊಂದು ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆ ನಡೆದ ಕೆಲ ಸಮಯದಲ್ಲೇ ಆರೋಪಿಗಳಾದ ಬಾಪೂಜಿನಗರದ ರವಿ ಮತ್ತು ವಿಜಯನಗರದ ಶಿವರಾಜ್ ಎಂಬುವರನ್ನು ಬಂಧಿಸಲಾಗಿದೆ. ಕೊಲೆ ನಂತರ ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ಪೊಲೀಸರ ಸಮಯಪ್ರಜ್ಞೆ ಪಾತ್ರ ವಹಿಸಿದೆ.ಆರೋಪಿಗಳ ಬಂಧನದ ಬಗ್ಗೆ ಮಾಹಿತಿ ನೀಡಿದ ಚಾಮರಾಜಪೇಟೆ ನಾಲ್ಕನೇ ಮುಖ್ಯರಸ್ತೆಯ ಗಸ್ತಿನ ಕಾನ್‌ಸ್ಟೆಬಲ್ ಮಂಜುನಾಥ್, `ಟಿ.ಆರ್.ಮಿಲ್ ಸಮೀಪ ಗಲಾಟೆಯಾಗುತ್ತಿದೆ ಎಂಬ ಮಾಹಿತಿ ಬಂತು. ಅಲ್ಲಿಗೆ ಹೋದಾಗ ಗಲ್ಲಿಯಿಂದ ನಾಲ್ವರು ಮಾರಕಾಸ್ತ್ರಗಳನ್ನು ಕೈಯಲ್ಲಿ ಹಿಡಿದುಕೊಂಡು ಹೋಗುತ್ತಿದ್ದುದನ್ನು ಕಂಡೆ. ಕೂಡಲೇ ಹೊಯ್ಸಳ ವಾಹನದಲ್ಲಿ ಗಸ್ತಿನಲ್ಲಿದ್ದ ಎಎಸ್‌ಐ ನಾಗರಾಜು ಅವರಿಗೆ ವಿಷಯ ತಿಳಿಸಿ, ಆರೋಪಿಗಳ ಬೆನ್ನತ್ತಿದೆ' ಎಂದು ತಿಳಿಸಿದರು.`ನನ್ನನ್ನು ಕಂಡ ದುಷ್ಕರ್ಮಿಗಳು ಓಡತೊಡಗಿದರು. ಇಬ್ಬರು ದುಷ್ಕರ್ಮಿಗಳು ಚಲಿಸುತ್ತಿದ್ದ ಬಿಎಂಟಿಸಿ ಬಸ್ ಏರಿದರು. ಆ ವೇಳೆಗೆ ಹೊಯ್ಸಳ ವಾಹನದಲ್ಲಿ ಎಎಸ್‌ಐ ನಾಗರಾಜ್ ಕೂಡಾ ಅಲ್ಲಿಗೆ ಬಂದರು. ಬಸ್ ಹಿಂಬಾಲಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಯಿತು. ಆದರೆ, ಇನ್ನಿಬ್ಬರು ದುಷ್ಕರ್ಮಿಗಳು ಪರಾರಿಯಾದರು' ಎಂದು ಮಾಹಿತಿ ನೀಡಿದರು.`ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಸಿಬ್ಬಂದಿ ಕಾರ್ಯಶ್ಲಾಘನೀಯ' ಎಂದು ದಕ್ಷಿಣ ವಿಭಾಗದ ಡಿಸಿಪಿ ಎಚ್. ಎಸ್.ರೇವಣ್ಣ ತಿಳಿಸಿದರು.

ಪ್ರತಿಕ್ರಿಯಿಸಿ (+)