ಮಂಗಳವಾರ, ನವೆಂಬರ್ 19, 2019
28 °C
ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

`ಮಚ್ಚಿನ-ಬದನೋಡಿ ಸೇತುವೆ ನಿರ್ಮಿಸಿ ಕೊಡಿ, ಆಮೇಲೆ ಮತ ಕೇಳಿ'

Published:
Updated:

ಕುಪ್ಪೆಟ್ಟಿ (ಉಪ್ಪಿನಂಗಡಿ): ಕಳೆದ 20 ವರ್ಷಗಳಿಂದ ಮಚ್ಚಿನ ಗ್ರಾಮದ ಬದನೋಡಿಯಲ್ಲಿ ಹರಿಯುವ ತೋಡಿಗೆ ಸೇತುವೆ ನಿರ್ಮಿಸಿಕೊಡಿ ಎಂದು ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ, ಬೇಡಿಕೆ ಸಲ್ಲಿಸುತ್ತಿದ್ದೇವೆ.  ಆದರೆ ಪ್ರತೀ ಚುನಾವಣೆಗಳಲ್ಲಿ ಅಭ್ಯರ್ಥಿಗಳ, ರಾಜಕೀಯ ಪಕ್ಷಗಳ ಪೊಳ್ಳು ಭರವಸೆಗಳನ್ನು ನಂಬಿ ಮತ ನೀಡಿ ಮೋಸ ಹೋಗಿದ್ದೇವೆ. ಆದರೆ, ಈ ಬಾರಿ ನಮಗೆ ಮೊದಲು `ಸೇತುವೆ ನಿರ್ಮಿಸಿ ಕೊಡಿ, ಆಮೇಲೆ ಮತ ಕೇಳಿ' ಎಂಬ ಎಚ್ಚರಿಕೆಯ ಘೋಷಣೆ ಗ್ರಾಮದ ಎಲ್ಲೆಡೆ ಮೊಳಗತೊಡಗಿದೆ.`ನಮ್ಮ ಬೇಡಿಕೆ ಈಡೇರುವುದಾದರೆ ಮಾತ್ರ ಮತದಾನ ಮಾಡುತ್ತೇವೆ. ಇಲ್ಲವಾದರೆ ಸಾರ್ವಜನಿಕವಾಗಿ ಮತದಾನ ಬಹಿಷ್ಕರಿಸುತ್ತೇವೆ'- ಇದು ಬೆಳ್ತಂಗಡಿ ತಾಲ್ಲೂಕು ಮಚ್ಚಿನ-ಕಣಿಯೂರು ಗ್ರಾಮಸ್ಥರು ಬದನೋಡಿ ಎಂಬಲ್ಲಿ ಶಾಶ್ವತ ಸೇತುವೆ ನಿರ್ಮಾಣವಾಗಬೇಕೆಂಬ ಬೇಡಿಕೆ ಮುಂದಿಟ್ಟು ಜನಪ್ರತಿನಿಧಿಗಳ ಗಮನ ಸೆಳೆಯಲು ಸೋಮವಾರ ನಡೆದ ಪ್ರತಿಭಟನೆಯಲ್ಲಿ ವ್ಯಕ್ತವಾದ ಒಕ್ಕೊರಲಿನ ಒತ್ತಾಯ.ಮಚ್ಚಿನ ಹಾಗೂ ಕಣಿಯೂರು ಗ್ರಾಮಗಳನ್ನು ಸಂಪರ್ಕಿಸುವ ಬದನೋಡಿ ಎಂಬಲ್ಲಿ ಹರಿಯುವ ತೋಡು ಇದ್ದು, ಮಳೆಗಾಲದಲ್ಲಿ ಎರಡೂ ಗ್ರಾಮಗಳ ಸಂಪರ್ಕವೇ ಕಡಿತವಾಗುತ್ತದೆ. ತುಂಬಿ ಹರಿಯುವ ತೋಡಿನಲ್ಲಿ ಮರದ ಅಪಾಯಕಾರಿ ಪಾಲವನ್ನೇ ಅವಲಂಬಿಸಿ ಬದನೋಡಿ, ಕಲಾಯಿ,ಪೇರೂರು, ಮಡೆಕ್ಕಿಲ, ಅಟ್ಟತ್ತೋಡಿ, ಲಾವುದಪಲ್ಕೆ, ಬಂಗಲಾಯಿ, ನೇರೊಲ್ದಪಲ್ಕೆ, ಕುಕ್ಕಿಲ ಪ್ರದೇಶದ ಸುಮಾರು 100 ಕುಟುಂಬಗಳ ಮನೆಯವರು, ಶಾಲಾ ಮಕ್ಕಳು, ಹಾಲು ಉತ್ಪಾದಕರ ಸಂಘದ ಮಹಿಳೆಯರು, ಬೀಡಿ ಕಟ್ಟುವ ಮಹಿಳೆಯರು ಸಂಕಷ್ಟ ಅನುಭವಿಸುವಂತಾಗಿದೆ ಎನ್ನುತ್ತಾರೆ ಗ್ರಾಮಸ್ಥರು.ಮಳೆಗಾಲದಲ್ಲಿ ನೆರೆ ನೀರು ಬಂದಾಗ ಈ ಪ್ರದೇಶದ ಮಂದಿ ಅನಿವಾರ್ಯವಾಗಿ 7 ಕಿ.ಮೀ. ದೂರದಲ್ಲಿರುವ ಪಿಲಿಗೂಡು-ಕಲ್ಲೇರಿ ಮೂಲಕ ಬಳ್ಳಮಂಜ ಕಡೆಗೆ ಸುಮಾರು 12 ಕಿ.ಮೀ. ದೂರ ಸುತ್ತುವರಿದು ಪ್ರಯಾಣಿಸಬೇಕಾಗಿದೆ. ಮಳೆಗಾಲದಲ್ಲಿ ಮಕ್ಕಳನ್ನು ಬೆಳಿಗ್ಗೆ ಕಳುಹಿಸಿ ಸಂಜೆಯವರೆಗೂ ಆತಂಕದಿಂದ ಕಾಯುವಂತಾಗಿದೆ. `ಹಲವು ಬಾರಿ ಶಾಲಾ ಮಕ್ಕಳು, ಮಹಿಳೆಯರು ಪಾಲದಿಂದ ಜಾರಿ ನದಿ ನೀರಿಗೆ ಬಿದ್ದು ಅದೃಷ್ಟವಶಾತ್ ಅಪಾಯದಿಂದ ಪಾರಾದ ಘಟನೆಗಳು ನಡೆದಿದೆ. ಆದರೂ ನಮ್ಮನ್ನು ಕೇಳುವವರೇ ಇಲ್ಲವಾಗಿದ್ದಾರೆ' ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.ವಾರ್ಡ್ ಸಭೆ, ಗ್ರಾಮ ಸಭೆ, ಗ್ರಾಮ ಪಂಚಾಯಿತಿ ಆಡಳಿತದಿಂದ ಹಿಡಿದು ಮುಖ್ಯಮಂತಿಗಳವರೆಗೆ ಎಲ್ಲಾ ಜನಪ್ರತಿನಿಧಿಗಳಿಗೂ ಮನವಿಗಳನ್ನು ನೀಡಿ ಬೇಡಿಕೆ ಸಲ್ಲಿಸುತ್ತಲೇ ಬಂದಿದ್ದೇವೆ. ಆದರೆ ಎಲ್ಲಾ ಪಕ್ಷಗಳ ಶಾಸಕರು, ಸಂಸದರು, ಸಚಿವರು ನಮ್ಮ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಲೇ ಬಂದಿದ್ದಾರೆ.ಈ ಬಾರಿ ಬೇಡಿಕೆ ಈಡೇರುವ ಬಗ್ಗೆ ಸ್ಪಷ್ಟ ಭರವಸೆ ಸಿಗುವವರೆಗೂ ಚುನಾವಣಾ ಬಹಿಷ್ಕಾರ ನಿರ್ಧಾರದಿಂದ ಹಿಂಜರಿಯುವ ಪ್ರಶ್ನೆಯೇ ಇಲ್ಲ ಎಂದು ಹೋರಾಟ ಸಮಿತಿ ಪದಾಧಿಕಾರಿಗಳಾದ ಜಯಸೇನ, ಮೋನಪ್ಪ ಗೌಡ, ಆನಂದ ಗೌಡ ಸ್ಥಳಕ್ಕೆ ಭೇಟಿ ನೀಡಿದ `ಪ್ರಜಾವಾಣಿ' ತಿಳಿಸಿದರು.

 

ಪ್ರತಿಕ್ರಿಯಿಸಿ (+)