ಮಂಗಳವಾರ, ಮೇ 18, 2021
28 °C

ಮಜಾರ್ ಮೇಲೆ ಹೊದಿಸಿದ ಗಲೀಫ್, ಚಾದರ್ ಕಂಪನ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮಖಂಡಿ: ಉಸಿರಾಟ ಕ್ರಿಯೆಯಿಂದ ಮಾನವನ ಶರೀರದ ಮೇಲೆ ಕಂಡು ಬರುವ ಏರಿಳಿತಗಳ ಮಾದರಿಯಲ್ಲಿ ಇಲ್ಲಿನ ಮೈಗೂರ ರಸ್ತೆಯಲ್ಲಿರುವ ಹಜರತ್ ಅಬೂಬಕರ್ ದರ್ಗಾದ ಮಜಾರ್ (ಗೋರಿ) ಮೇಲೆ ಹೊದಿಸಿದ ಗಲೀಫ್ (ಹೂವಿನ ಸರಗಳು) ಮತ್ತು ಚಾದರ್ (ಬಣ್ಣಬಣ್ಣದ ಬಟ್ಟೆಯ ಹೊದಿಕೆ) ಕಂಪಿಸುತ್ತಿದೆಂಬ ಸುದ್ದಿ ಹರಡಿದ್ದರಿಂದ ಜನರು ತಂಡೋಪತಂಡವಾಗಿ ದರ್ಗಾಕ್ಕೆ ಬರುತ್ತಿದ್ದಾರೆ.ಮಜಾರದ ಮೇಲ್ಭಾಗದಲ್ಲಿ ಗಲೀಫ್, ಚಾದರ್ ಕಂಪನಗಳು ಗುರುವಾರ ರಾತ್ರಿ ಆರಂಭವಾಗಿದ್ದವು. ಸಮಯ ಕಳೆದಂತೆ ಕಂಪನಗಳು ಗಲೀಫ್, ಚಾದರ್ ಕೆಳಭಾಗಕ್ಕೆ ಸರಿದಿವೆ ಎನ್ನಲಾಗುತ್ತಿದೆ. ಉಪ ವಿಭಾಗಾಧಿಕಾರಿ ಅಶೋಕ ದುಡಗುಂಟಿ, ತಹಶೀಲ್ದಾರ ಆರ್.ವಿ.ಕಟ್ಟಿ, ಡಿವೈಎಸ್ಪಿ ಪಾಟೀಲ ಸ್ಥಳಕ್ಕೆ ಭೇಟಿ ನೀಡಿದ್ದಾರೆ. `ದೇವರ ಅಸ್ತಿತ್ವದಲ್ಲಿ ನಂಬಿಕೆ ಕಳೆದುಕೊಂಡವರಿಗೆ ಹಾಗೂ ದೇವರ ಅಸ್ತಿತ್ವವನ್ನೇ ಪ್ರಶ್ನಿಸುವವರಿಗೆ ದೇವರು ಈ ರೀತಿ ತನ್ನ ಅಸ್ತಿತ್ವ ತೋರಿಸುತ್ತಾನೆ. ಅಧ್ಯಾತ್ಮದಿಂದ ದೂರ ಸರಿದವರಿಗೆ ದೇವರು ನೀಡಿದ ಎಚ್ಚರಿಕೆಯ ಗಂಟೆ ಇದಾಗಿದೆ' ಎಂದು  ಮೌಲನಾ ರಜ್ವಿ ಸುದ್ದಿಗಾರರಿಗೆ ಹೇಳಿದರು.ಇದೇ ದರ್ಗಾದ ಗಲೀಫ್, ಚಾದರದಿಂದ 1984 ರಲ್ಲಿ ನೀರು ಬಸಿದಿತ್ತು. ಇದನ್ನು ನೋಡಲು ಬಂದವರ ಪಾದ ಮುಳುಗುವಷ್ಟು ನೀರು ಬಸಿದು ಬರುತ್ತಿತ್ತು. ಆಗಲೂ ಸಹ ಸಾವಿರಾರು ಮಂದಿ ಸಾರ್ವಜನಿಕರು ಆ ಘಟನೆಗೆ ಸಾಕ್ಷಿಯಾಗಿದ್ದರು ಎಂದು ಆ ಘಟನೆಯ ಪ್ರತ್ಯಕ್ಷದರ್ಶಿಯೊಬ್ಬರು ವಿವರಿಸಿದರು.ದರ್ಗಾದಲ್ಲಿ ನೀರು ಬಸಿದ ಬಳಿಕ ಮೂರು ದಿನಗಳ ನಂತರ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆ ನಡೆದಿತ್ತು. ಹತ್ಯೆಯ ಹಿನ್ನೆಲೆಯಲ್ಲಿ ನಗರದಲ್ಲಿ ನಡೆದ ಗಲಭೆಯಿಂದಾಗಿ ಗೋಲಿಬಾರ್ ನಡೆದಿತ್ತು. ಅದೇ ಅವಧಿಯಲ್ಲಿ ಬಾಗವಾನ ಎಂಬುವವರು ಜಮಖಂಡಿ ತಾಲ್ಲೂಕು ತಹಶೀಲ್ದಾರರಾಗಿ ಸೇವೆ ಸಲ್ಲಿಸುತ್ತಿದ್ದರು.ದರ್ಗಾದಲ್ಲಿ ಬಸಿಯುತ್ತಿದ್ದ ನೀರು ನೋಡಲು ತಹಶೀಲ್ದಾರರ ಧರ್ಮಪತ್ನಿ ಆಗಮಿಸಿದಾಗ ಅವರ ಕುತ್ತಿಗೆಗೆ ಜೇನುಹುಳು ಕಚ್ಚಿತ್ತು. ಜೇನುಹುಳು ಹೊಡೆಯಲು ಕೈಬೀಸಿದಾಗ ಅವರ ಮಾಂಗಲ್ಯ ಕಳಚಿ ಕೆಳಗೆ ಬಿದ್ದಿತ್ತು. ನಂತರ ಅವರು ತಮ್ಮ ನಿವಾಸಕ್ಕೆ ಮರಳಿದಾಗ ತಹಶೀಲ್ದಾರರು ಹೃದಯಾಘಾತದಿಂದ ನಿಧನ ಹೊಂದಿದ್ದರು ಎಂದು ಅಲ್ತಾಫ್ ಐರಣಿ ನೆನಪಿಸಿಕೊಂಡರು.ಈ ಹಿನ್ನೆಲೆಯಲ್ಲಿ ಮೂರ‌್ನಾಲ್ಕು ದಿನಗಳಲ್ಲಿ ನಗರದಲ್ಲಿ ಏನಾದರೂ ಅಹಿತಕ ಘಟನೆ ಸಂಭವಿಸಬಹುದು ಎಂಬ ಆತಂಕ ಇಲ್ಲಿಯ ಜನರಲ್ಲಿ ಮೂಡಿದೆ. ಇದೇ ಚರ್ಚೆಯೂ ಆಗುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.