ಮಂಗಳವಾರ, ನವೆಂಬರ್ 12, 2019
27 °C

ಮಜ್ಜಿಗೆ ಕಾಯಕದ ಆಧುನಿಕ ಶರಣ!

Published:
Updated:

ಗುಲ್ಬರ್ಗ: `ಕಾಯಕದ ಕಳವಳಕ್ಕಂಜಿ ಕಾಯಯ್ಯ ಎನ್ನೆನು ಜೀವನೋಪಾಯಕ್ಕೆ ಈಯಯ್ಯಾ ಎನ್ನೆನು

ಉರಿ ಬರಲಿ ಸಿರಿ ಬರಲಿ, ಬೇಕು ಬೇಡೆನ್ನೆನಯ್ಯಾ.....'ಬಸವಣ್ಣನವರ ಮೇಲಿನ ಮಾತಿಗೆ ಉದಾಹರಣೆ ಎನ್ನುವಂತೆ, ಸಿರಿ ಇದ್ದರೂ ಬೀಗದೆ, ಕಾಯಕ ಪ್ರೀತಿ ಹಾಗೂ ನಿಷ್ಠೆಯಿಂದ 42 ಡಿಗ್ರಿ ಸೆಲ್ಸಿಯಸ್‌ನ ಉರಿಬಿಸಿಲಲ್ಲೂ ತನ್ನ `ಮಜ್ಜಿಗೆ ಕಾಯಕ'ದ ಮೂಲಕ ಸಾವಿರಾರು ಜನರಿಗೆ ತಂಪಾದ ಮಜ್ಜಿಗೆ ಕುಡಿಸುವ ಆಧುನಿಕ ಶರಣನೊಬ್ಬ ಚಿತ್ತಾಪುರ ತಾಲ್ಲೂಕು ಮತಕ್ಷೇತ್ರ ವ್ಯಾಪ್ತಿಯ ಭಂಕೂರ ಗ್ರಾಮದಲ್ಲಿನ ಶಾಂತನಗರದ (ಅಶಾಂತ ವಾತಾವರಣದ)ಲ್ಲಿ ನೆಲಸಿದ್ದಾನೆ. ಈ ಆಧುನಿಕ ಶರಣನ ಹೆಸರು ಖಂಡು ಗೌಳಿ! ಹನ್ನೆರಡನೆ ಶತಮಾನದಲ್ಲಿ ದುಡಿಯುವ ವರ್ಗದ ಸಾಮಾನ್ಯ ಜನರ ಕಾಯಕ ಬದುಕಿಗೆ ಮಹತ್ವದ ಸ್ಥಾನವನ್ನು ಕೊಟ್ಟು ಕಾಯಕದ ವಿಸ್ತಾರ, ಅರ್ಥವನ್ನು ತೋರಿಸಿದವರು ಬಸವಾದಿ ಶರಣರು. ಅಂತೆಯೆ ಇಂದಿನ ದಿನಗಳಲ್ಲೂ ಬೇಸಿಗೆಯ ಸುಮಾರು ಮೂರು ನಾಲ್ಕು ತಿಂಗಳ ಕಾಲ ದಿನಕ್ಕೆ ಹಲವು ಲೀಟರ್‌ನಷ್ಟು ತಂಪಾದ ಮಜ್ಜಿಗೆ ಮಾರಾಟ ಮಾಡುವ ಮೂಲಕ, ಮನೆಯಲ್ಲಿ ಅನುಕೂಲಗಳಿದ್ದರೂ ಸುಮ್ಮನೆ ಕೂತು ಉಣ್ಣುವುದನ್ನು ವಿರೋಧಿಸುವ ಖಂಡು, ಗೌಳಿ ಮನೆತನಕ್ಕೆ ಸೇರಿದವರು.`ಬೇಕಾದಷ್ಟು ಆಸ್ತಿ ಇದೆ. ಹಣ ಹಾಗೂ ಅನುಕೂಲಗಳಿವೆ, ಉಂಡು ಬೆಚ್ಚಗೆ ಮನೆಯಲ್ಲಿರದೆ ಏಕೆ ಬಿಸಿಲಲ್ಲಿ ತಿರುಗಾಡುವ ಕೆಲಸ?' ಎಂಬ ಪ್ರಶ್ನೆಗೆ ನಗುತ್ತಲೆ ಉತ್ತರಿಸುವ ಖಂಡು `ಕೂತು ಉಂಡರೆ ಕುಡುಕೆ ಹೊನ್ನು ಸಾಲದು....' ಎನ್ನುತ್ತಲೆ ಮಾತಿಗಿಳಿಯುತ್ತಾರೆ.

`ನನ್ನ ತಂದೆ ಮಾರುತಿ ಗೌಳಿ ನನ್ನೆಲ್ಲ ಕೆಲಸಗಳಿಗೆ ಪ್ರೇರಣೆ. ಸುಮಾರು ಮೂರು ದಶಕಗಳ ಹಿಂದೆ ಭಂಕೂರ ಗ್ರಾಮದ ಶಾಂತನಗರದಲ್ಲಿ ಸಾವಿರಾರು ರೂ. ಸ್ವಂತ ಖರ್ಚು ಮಾಡಿ ಕೊಳವೆ ಬಾವಿ ಹಾಕಿಸಿ, ನೀರಿನ ತೊಟ್ಟಿ ನಿರ್ಮಿಸಿ ಆ ಮೂಲಕ ಸಾರ್ವಜನಿಕರಿಗೆ ಕುಡಿಯುವ ನೀರು ಹಂಚುವ ಕೆಲಸ ಮಾಡಿದ್ದರು. ಈ ಘಟನೆ ನನ್ನ ತಂದೆ ಎಂತಹ ತೃಪ್ತಿ ತಂದಿತ್ತೊ ಗೊತ್ತಿಲ್ಲ. ಆದರೆ ನನಗೆ ಮಾತ್ರ ಸಾರ್ವಜನಿಕ ಸೇವೆ ಮಾಡುವಲ್ಲಿ ಪ್ರೇರಣೆ ನೀಡಿತು' ಎನ್ನುತ್ತಾ ತಂದೆಯನ್ನು ನೆನಪಿಸಿಕೊಳ್ಳುತ್ತಾರೆ.ದೇಶಿ ಮಜ್ಜಿಗೆ: ದಿನವೊಂದಕ್ಕೆ ಸುಮಾರು 40 ಲೀಟರ್‌ನಷ್ಟು ಮಜ್ಜಿಗೆ ಮನೆಯಲ್ಲೆ ತಯಾರಾಗುತ್ತದೆ. ಅದಕ್ಕೆ ಉಪ್ಪು, ಮತ್ತಿತರ ಎಲ್ಲ ರುಚಿಕರ ಮಸಾಲಾ ಹಾಕಿ ಬೆಳಗ್ಗೆ `ಫ್ರೇಶ್' ಮಜ್ಜಿಗೆ ಸವಿಯಲು ಸಿದ್ಧವಾಗುತ್ತದೆ. ಸುಮಾರು 20 ಲೀಟರ್‌ನ ಎರಡು ಬ್ಯಾರಲ್‌ಗಳಲ್ಲಿ ಮಜ್ಜಿಗೆ ತುಂಬಿಸಿ, ಹೊಟ್ಟೆಗೆ ಒಂದಿಷ್ಟು ಆಹಾರ ಇಳಿಸಿ, ದೊಡ್ಡದಾದ ಛತ್ರಿ, ತಲೆಗೆ ಟೋಪಿ, ಕಣ್ಣಿಗೆ `ಗಾಗಲ್ಸ್' ಹಾಕಿ ತಮ್ಮ ದ್ವಿಚಕ್ರ ವಾಹನದಲ್ಲಿ ಖಂಡು ಹೊರಟರೆ ಮುಗಿಯಿತು, ವಾಪಸ್ ಆಗುವುದು `ಮಾಲ್' ಖರ್ಚಾದ ನಂತರವೆ.`ದನ ಕಾಯುವುದು, ಹಾಲು ಕರೆಯುವುದು, ಹೆಂಡಿ ಎತ್ತುವುದು, ಮನೆಯ ಮತ್ತಿತರ ಕೆಲಸ ಮಾಡುತ್ತ, ತಾಯಿ ಸುಂದರಾಬಾಯಿ ಅವರಿಗೆ ನೆರವಾಗುತ್ತಿದ್ದೆ. ನಂತರ ನನ್ನ ಅಮ್ಮ ಹಾಲು, ಮೊಸರು, ಬೆಣ್ಣೆ, ತುಪ್ಪ ಮಾರಾಟ ಮಾಡಲು ಆರಂಭಿಸಿದರು. ಬೇಸಗೆಯಲ್ಲಿ ಮೊಸರನ್ನು ಬಳಸಿ, ಮಜ್ಜಿಗೆ ಮಾಡಿ, ತಂಪಾದ ಮಜ್ಜಿಗೆಯನ್ನು ಮಾರಾಟ ಮಾಡಿದರೆ ಹೇಗೆ? ಎನ್ನುವ ಉಪಾಯ ಹೊಳದದ್ದೆ ಖಂಡು ತಮ್ಮ ಯೋಚನೆಗೆ ಆಧುನಿಕತೆ `ಟಚ್' ನೀಡಿದರು. ಕಳೆದ 2-3 ವರ್ಷದಿಂದ ಶಹಾಬಾದ ಪಟ್ಟಣ, ಭಂಕೂರ ಗ್ರಾಮ, ಶಾಂತನಗರದಲ್ಲಿ ಬೇಸಿಗೆ ಬಿರುಬಿಸಿಲಿನಲ್ಲಿ ಅತ್ತಿತ್ತ ಅಲೆದಾಡುವ ಸಾವಿರಾರು ಜನ ಖಂಡು ಅವರ `ತಂಪು ಮಜ್ಜಿಗೆ'ಯ ರುಚಿ ಸವಿದಿದ್ದಾರೆ. ಆರೋಗ್ಯ ಕೆಡಿಸುವ ಬಣ್ಣದ ತಂಪು ಪಾನೀಯಗಳು, ದುಬಾರಿ ವೆಚ್ಚದ ಎಳೆನೀರು ಜನರಿಗೆ ಭಾರ ಎನಿಸಿದಲ್ಲಿ ಖಂಡಿತ ಈ `ದೇಸಿ ತಂಪು ಮಜ್ಜಿಗೆ' ಜನಸಾಮಾನ್ಯಾರಿಗೆ ವರದಾನವಾಗಿದೆ.

`ಊರೆಲ್ಲ ಸುತ್ತಾಡಿ ಕಷ್ಟಪಟ್ಟು ದಿನವೊಂದಕ್ಕೆ ನಲವತ್ತು ಲೀಟರ್‌ನಷ್ಟು ಮಜ್ಜಿಗೆ ಮಾರಾಟ ಮಾಡಿದ ನಂತರ 5-6 ನೂರು ರೂ. ಗಳ ಉಳಿತಾಯವಿದೆ. ಆರಂಭದಲ್ಲಿ ಕೇವಲ 2 ರೂ.ಗೆ ಒಂದು ಲೋಟ ಮಜ್ಜಿಗೆ ಮಾರಾಟವಾಗುತ್ತಿತ್ತು. ಇಂದು 10 ರೂ. ಗೆ ಒಂದು ಲೋಟವಾಗಿದೆ. ಆದರೂ ಇದು ಸಾಮಾನ್ಯ ಜನರ ಕೈಗೆಟುಕುವ ಬೆಲೆ' ಎಂದು ಹೇಳುವ ಖಂಡು ಗೌಳಿ ಕಾಯಕವಿಲ್ಲದೆ ಕುಹಕದ ಮಾತನಾಡುತ್ತಾ ಕೂಡುವವರಿಗೆ ಒಂದು ಮಾದರಿ!

 

ಪ್ರತಿಕ್ರಿಯಿಸಿ (+)