ಸೋಮವಾರ, ಮೇ 23, 2022
30 °C

ಮಟ್ಟೆಣ್ಣವರಿಂದ ಮಿಂಚಿನ ಪಾದಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಳಗಿ: ಬೆಣ್ಣೆತೊರಾ ನೀರಾವರಿ ಯೋಜನೆಯ ಕಾರ್ಯ ಚಟುವಟಿಕೆಗಳನ್ನು ಕೂಲಂಕುಶವಾಗಿ ಅರಿಯಲು ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ನೀರಾವರಿ ಯೋಜನೆಗಳ ವಲಯ (ಕಾಡಾ) ಅಧ್ಯಕ್ಷ ಗಿರೀಶ ಮಟ್ಟೆಣ್ಣವರ ಕಳೆದ ಸೋಮವಾರದಿಂದ ಕಾಳಗಿ ಸುತ್ತಮುತ್ತಲು ಮಿಂಚಿನ ಸಂಚಾರ ಕೈಗೊಂಡರು.ಮತ್ತು ಈ ಭಾಗದ ರೈತರ ಸಮಸ್ಯೆಗಳನ್ನು ತಿಳಿದುಕೊಳ್ಳಲು ಬುಧವಾರ ಕಾಲುವೆಗಳ ಬದಿಯಲ್ಲಿ ಪಾದಯಾತ್ರೆ ಹಮ್ಮಿಕೊಂಡಿರುವುದು ಸ್ಥಳೀಯ ರೈತರಿಗೆ ಹರ್ಷವನ್ನುಂಟು ಮಾಡಿದೆ.ಚಿತ್ತಾಪುರ ತಾಲ್ಲೂಕಿನ ತೆಂಗಳಿ ಗ್ರಾಮದ ಕಾಲುವೆಯಿಂದ ಆರಂಭಿಸಿದ ಮಟ್ಟೆಣ್ಣವರ ಪಾದಯಾತ್ರೆ ಕಲಗುರ್ತಿ ಗ್ರಾಮದವರೆಗೆ (9ಕಿ.ಮೀ) ಮತ್ತು ಇಲ್ಲಿಂದ ಮಲಘಾಣ ಗ್ರಾಮದವರೆಗೆ (4ಕಿ.ಮೀ) ಸಂಜೆಯ ತನಕ ಯಶಸ್ವಿಯಾಗಿ ನಡೆಯಿತು. ಪಾದಯಾತ್ರೆಗೆ ರೈತರು ಮತ್ತು ಯುವಕರು ಸಾಥ್ ನೀಡಿದರು. ಮಧ್ಯದಲ್ಲಿ ಕಲಗುರ್ತಿಯಲ್ಲಿ ಏರ್ಪಡಿಸಿದ ಸಮಾರಂಭದಲ್ಲಿ ಮಟ್ಟೆಣ್ಣವರ ಮಾತನಾಡಿ, ಕಳೆದ ಮೂರು ದಿನಗಳಿಂದ ಈ ಭಾಗದಲ್ಲಿ ಸಂಚರಿಸಿದಾಗ ಹೆಜ್ಜೆ ಹೆಜ್ಜೆಗೂ ಮೂಲ ಸಮಸ್ಯೆಗಳಿರುವುದು ಕಂಡುಬಂದಿದೆ. ಬರುವ ದಿನಗಳಲ್ಲಿ ಇಂಥಹ ಸಮಸ್ಯೆಗಳಿಗೆ ಸೂಕ್ತ ಪರಿಹಾರೋಪಾಯಗಳನ್ನು ಕಂಡುಹಿಡಿಯುವುದರ ಮೂಲಕ ಮುಕ್ತಿ ಹಾಡಲಾಗುವುದೆಂದು ತಿಳಿಸಿದರು.ರೈತರಾದವರು ಸರ್ಕಾರ ಕೊಡಮಾಡುವ ಯೋಜನೆಗಳ ಮತ್ತು ಸೌಲಭ್ಯಗಳ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಲು ಮುಂದೆ ಬರಬೇಕು. ಈ ನಿಟ್ಟಿನಲ್ಲಿ ರೈತರು ಜಾಗೃತರಾದಾಗ ಮಾತ್ರ ಅಭಿವೃದ್ಧಿ ಕಾಮಗಾರಿ ನಡೆಯಲು ಸಾಧ್ಯ ಎಂದು ಹೇಳಿದರು. ಹೊಲಗಳಿಗೆ ನೀರು ಒದಗಿಸುವ ದೃಷ್ಟಿಯಿಂದ ಹಲವು ದಶಕಗಳ ಹಿಂದೆ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಅಡಿಯಲ್ಲಿ ಬೆಣ್ಣೆತೊರಾ ಯೋಜನೆ ಜಾರಿಗೊಳಿಸಿದರೂ ಸಹ ರೈತರಿಗೆ ಮಾತ್ರ ಹನಿ ನೀರು ಸಿಕ್ಕಿಲ್ಲ. ಹಾಗೂ ಕಾಲುವೆಗಳ ನಿರ್ಮಾಣಕ್ಕೆ ಭೂಮಿ ನೀಡಿದ ರೈತರಿಗೆ ಇಲ್ಲಿಯವರೆಗೂ ಪರಿಹಾರ ನೀಡಿಲ್ಲ ಎಂದು ತಾಪಂ ಸದಸ್ಯ ಮಲ್ಲಿಕಾರ್ಜುನ ಶಿವಗೋಳ ಅಭಿಪ್ರಾಯ ವ್ಯಕ್ತಪಡಿಸಿದರು.ಕಾಡಾ ಭೂ ಅಭಿವೃದ್ಧಿ ಅಧಿಕಾರಿ ರಂಗನಾಥ, ಡೊಣ್ಣೂರ ವೀರಭದ್ರಪ್ಪ ಅಜ್ಜನವರು, ತಾಪಂ ಸದಸ್ಯ ಮಾರುತಿ ನಾಮದಾರ, ಶ್ರೀಮಂತ ನಾಮದಾರ, ಶಿವರಾಜ ಪಾಟೀಲ, ಗ್ರಾಪಂ ಸದಸ್ಯ ಸಂತೋಷ ಕಡಬೂರ, ಶಾಂತ ಕುಮಾರ ಪಾಟೀಲ, ನಾಗರಾಜ ಸಜ್ಜನ ಮೊದಲಾದವರು ಇದ್ದರು. ಪಿ.ಎ ಮೇಲೆ ಹಲ್ಲೆ: ಕಾಡಾ ಅಧ್ಯಕ್ಷ ಗಿರೀಶ ಮಟ್ಟೆಣ್ಣವರ ಆಪ್ತ ಸಹಾಯಕ ಆನಂದಕುಮಾರ ಎಂಬುವರ ಮೇಲೆ ಮಧ್ಯಾಹ್ನ 2ರ ಸುಮಾರಿಗೆ ಕಲಗುರ್ತಿ ಗ್ರಾಮದ ರಾಮು ಶಿವಶರಣಪ್ಪ ಕೋರಬಾ ಎಂಬುವರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.