`ಮಠಕ್ಕೆ ಬಯಸುವುದು ತಪ್ಪಲ್ಲ'

7

`ಮಠಕ್ಕೆ ಬಯಸುವುದು ತಪ್ಪಲ್ಲ'

Published:
Updated:
`ಮಠಕ್ಕೆ ಬಯಸುವುದು ತಪ್ಪಲ್ಲ'

ಬೆಂಗಳೂರು: `ಮಠಾಧೀಶರಿಗೆ ಆಸೆ ಇರಲಿ; ಆದರೆ ಅದು ದುರಾಸೆ ಆಗಬಾರದು. ಮಠ ಮುನ್ನಡೆಸಲು ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಹಣ ಬಯಸುವುದು ತಪ್ಪಲ್ಲ'. ಇದು ಬಸವತತ್ವ ಪ್ರಚಾರಕ, ಆಧ್ಯಾತ್ಮಿಕ ಚಿಂತಕ ಬೀದರದ ಬೆಲ್ದಾಳ ಸಿದ್ಧರಾಮ ಶರಣರ  ಅಭಿಪ್ರಾಯ.   

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ಕನ್ನಡ ಭವನದಲ್ಲಿ ಏರ್ಪಡಿಸಿದ್ದ `ಮನೆಯಂಗಳದಲ್ಲಿ ಮಾತುಕತೆ'ಯಲ್ಲಿ ಮಾತನಾಡಿದ ಅವರು, `ಮೌಲ್ಯಾಧಾರಿತ ಶಿಕ್ಷಣದ ಕೊರತೆ, ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುವ ಕೆಲ ಕಾರ್ಯಕ್ರಮಗಳು ಹಾಗೂ  ಸಂಸ್ಕಾರದ ಕೊರತೆಯಿಂದ ಯುವಪೀಳಿಗೆ ಅಡ್ಡದಾರಿ ಹಿಡಿಯುತ್ತಿದೆ.

ಹೀಗಾಗಿ ಮೊದಲು ಮನೆಗಳಲ್ಲಿ ಪೋಷಕರು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಬೇಕು. ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುವ ಪ್ರಚೋದಿತ ಕಾರ್ಯಕ್ರಮಗಳು ನಿಲ್ಲಬೇಕು. ಮಹಾತ್ಮರು, ಸಂತರು ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನು ಪರಿಚಯಿಸುವ ಪಠ್ಯಗಳು ಶಾಲಾ ಕಾಲೇಜುಗಳಲ್ಲಿ ಇರಬೇಕು' ಎಂದು ಸಲಹೆ ನೀಡಿದರು.ಇತ್ತೀಚೆಗೆ ಶಿಕ್ಷಣ ವ್ಯಾಪಾರೀಕರಣ ಆಗಿದೆ. ಶಿಕ್ಷಣದ ಹೆಸರಲ್ಲಿ ಹಣ ಮಾಡುವ ಸಂಸ್ಥೆಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಶಿಕ್ಷಣದ ಮೌಲ್ಯ ಕುಸಿಯುತ್ತಿದೆ. ಮಕ್ಕಳಲ್ಲಿ ಸ್ವಾರ್ಥ ಭಾವನೆ ಹೆಚ್ಚುತ್ತಿದ್ದು, ರಾಷ್ಟ್ರೀಯ ಭಾವ  ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದ ಅವರು, `ಹಣವಂತರು `ಕಲ್ಲು ಮಣ್ಣಿನ ದೇವಾಲಯ ಕಟ್ಟುವ ಬದಲು ಬಡ ಮಕ್ಕಳಿಗೆ ಶಿಕ್ಷಣ ಕೊಟ್ಟು, ಅವರ ಬದುಕು ಕಟ್ಟಿಕೊಡಬೇಕು' ಎಂದು ಮನವಿ ಮಾಡಿದರು.

`ಧರ್ಮ, ಜಾತಿಯ ಹೆಸರಲ್ಲಿ ನಿರ್ಮಾಣವಾಗುತ್ತಿರುವ ಪ್ರತ್ಯೇಕತಾ ಭಾವ ನಶಿಸಿ, ಭಾರತ ಅಖಂಡ, ಸುಭದ್ರ ಹಾಗೂ ಸಮೃದ್ಧವಾಗಿ ಸಾಮರಸ್ಯದಿಂದ ಕೂಡಿರಬೇಕೆಂಬುದು ನನ್ನ ಜೀವನದ ಆಸೆ' ಎಂದು ತಿಳಿಸಿದರು.

  

ನಡೆದು ಬಂದ ದಾರಿ: ಬೀದರ ಜಿಲ್ಲೆ ಔರಾದ ತಾಲ್ಲೂಕಿನ ಬೆಲ್ದಾಳ ಗ್ರಾಮದ ಪರಿಶಿಷ್ಟ ಕುಟುಂಬದಲ್ಲಿ ಜನಿಸಿದ ಸಿದ್ಧರಾಮ ಶರಣರು ಓದಿದ್ದು 3ನೇ ತರಗತಿ ವರೆಗೆ ಮಾತ್ರ. 15ನೇ ವಯಸ್ಸಿನಲ್ಲಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು. ಇಬ್ಬರು ಮಕ್ಕಳ ತಂದೆಯಾದ ನಂತರ ಅಧ್ಯಾತ್ಮದ ಬಗ್ಗೆ ಒಲವು ಬೆಳೆಸಿಕೊಂಡು ಸನ್ಯಾಸದತ್ತ ವಾಲಿದರು. ಬಸವತತ್ವ ಪ್ರಚಾರದಲ್ಲಿ ಬದುಕನ್ನು ತೊಡಗಿಸಿಕೊಂಡರು. ನಂತರ ಕೌಠಾ (ಬಿ) ಗ್ರಾಮ ಅವರ ಕಾರ್ಯಕ್ಷೇತ್ರವಾಯಿತು.ಪ್ರಾರಂಭದಲ್ಲಿ 25 ಬಡ ಮಕ್ಕಳನ್ನು ದತ್ತು ಸ್ವೀಕರಿಸಿ ಅವರಿಗೆ ಉಚಿತ ಶಿಕ್ಷಣ ನೀಡಲು ಪ್ರಾರಂಭಿಸಿದರು. ಹೀಗೆ ಮುಂದುವರೆದು ಈಗ 700 ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡುತ್ತಿದ್ದಾರೆ. ಉಚಿತ ಆಸ್ಪತ್ರೆ  ಸಹ ನಡೆಸುತ್ತಿದ್ದಾರೆ. ವಚನ ಸಾಹಿತ್ಯದಲ್ಲಿ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಬಸವ ಶ್ರೀ, ಅನುಭವ ಮಂಟಪ, ಬಸವ ಸಾಧಕ, ಹಾಗೂ ಸುವರ್ಣ ಸಿರಿ ಮತ್ತಿತರ ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ.ಬಸವ ತತ್ವಗಳನ್ನೇ ಉಸಿರಾಗಿಸಿಕೊಂಡ ಅವರಿಗೆ ರೂ 5 ಕೋಟಿ ವೆಚ್ಚದಲ್ಲಿ ಬಸವಣ್ಣನ ಇಷ್ಟಲಿಂಗ ಆಕಾರದಲ್ಲಿ `ಅಂತರ ರಾಷ್ಟ್ರೀಯ ನೀಲಾಂಬಿಕ ಶಿವಯೋಗ ಕೇಂದ್ರ' ಕಟ್ಟುವ ಕನಸಿದೆ. ಇಲ್ಲಿ ಧ್ಯಾನ ಹಾಗೂ ಯೋಗ ತರಬೇತಿ ನೀಡುವ ಯೋಜನೆ ಇದೆ. `ಆದರೆ ಇದಕ್ಕಾಗಿ ನಾನು ಯಾರನ್ನೂ ಬೇಡುವುದಿಲ್ಲ. ಯಾರಾದರೂ ಬಯಸಿ ಸಹಾಯ ಮಾಡಿದರೆ ಸಾಕು' ಎನ್ನುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry