ಶುಕ್ರವಾರ, ನವೆಂಬರ್ 15, 2019
20 °C

`ಮಠಗಳಿಗೆ ರಾಜಕಾರಣದ ನೆರಳು ಬೇಡ'

Published:
Updated:

ಕೃಷ್ಣರಾಜಪೇಟೆ: ಭ್ರಷ್ಟಾಚಾರ, ಸ್ವಜನ ಪಕ್ಷಪಾತಗಳಲ್ಲಿ ಮೈಮರೆತು ರಾಜ್ಯದ ಜನರ ಹಿತವನ್ನು ಕಡೆಗಣಿಸಿರುವ ರಾಜಕಾರಣಿಗಳನ್ನು ತಿರಸ್ಕರಿಸಿ, ಜನಪರ ಕಾಳಜಿಯುಳ್ಳವರನ್ನು ಆಯ್ಕೆ ಮಾಡಬೇಕು ಎಂದು ಕೂಡಲಸಂಗಮದ ಬಸವಧರ್ಮ ಪೀಠದ ಮಾತೆ ಮಹಾದೇವಿ ಸಲಹೆ ನೀಡಿದರು.ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಭಾನುವಾರ ಪಟ್ಟಣಕ್ಕೆ ಆಗಮಿಸಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

ಜಾತಿಯ ಹೆಸರಿನಲ್ಲಿ ಸಮಾಜವನ್ನು ಒಡೆದು ತಮ್ಮ ಬೇಳೆ ಬೇಯಿಸಿಕೊಳ್ಳುವ ರಾಜಕಾರಣಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು ಅಂತಹ ವ್ಯಕ್ತಿಗಳನ್ನು ಅಧಿಕಾರದಿಂದ ದೂರ ಇಡಬೇಕು. ಸ್ವಹಿತಾಸಕ್ತಿಗಾಗಿ ಹೊಸ ಪಕ್ಷಗಳನ್ನು ಹುಟ್ಟುಹಾಕಿ, ಸ್ವಾರ್ಥಕ್ಕಾಗಿ ಜನರ ಹಿತವನ್ನು ಬಲಿಕೊಡುವವರನ್ನು ಧಿಕ್ಕರಿಸಬೇಕು ಎಂದರು.ಇಂದಿನ ರಾಜಕೀಯ ಹೊಲಸಿನಿಂದ ಕೂಡಿದ್ದು, ಎಲ್ಲ ಮಠಮಾನ್ಯಗಳು ರಾಜಕಾರಣದ ನೆರಳಿನಿಂದ ಹೊರಬರಬೇಕು ವಚನ ಮಾಂಗಲ್ಯ, ಮಂತ್ರ ಮಾಂಗಲ್ಯಗಳಂತಹ ಸರಳ ವಿವಾಹಗಳನ್ನು ಪ್ರೋತ್ಸಾಹಿಸಿ, ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು. ಜ್ಯೋತಿಷ್ಯ, ಭವಿಷ್ಯದಂತಹ ಆಧಾರರಹಿತ ಮೌಢ್ಯಗಳನ್ನು ನಂಬದೇ ವಾಸ್ತವದಲ್ಲಷ್ಟೇ ನಂಬಿಕೆ ಇಡಬೇಕು ಎಂದರು.ವಚನ ಮಾಂಗಲ್ಯ ತತ್ವದಡಿಯಲ್ಲಿ ವಿವಾಹ ಕಾರ್ಯಕ್ರಮವನ್ನು ಮಾತೆ ಮಹಾದೇವಿ ನಡೆಸಿಕೊಟ್ಟರು. ಮೈಸೂರಿನ ಬಸವ ತತ್ವ ಪ್ರಚಾರ ಸಮಿತಿಯ ಮಹದೇವಸ್ವಾಮಿ, ಸ್ಥಳೀಯ ಬಸವ ಸಮಿತಿಯ ಸದಸ್ಯರಾದ ಸೋಮನಾಥಪುರ ಮಾದೇಶ್, ಮಂಜುನಾಥ್, ಮಾತಾಜಿಯವರ ಅನುಯಾಯಿ ಸೋಮಶೇಖರ್,  ಚಿಕ್ಕಮಲ್ಲನಹೊಳೆ ವೀರಭದ್ರಯ್ಯ, ವಿಜಯೇಂದ್ರಪ್ರಭು ಇದ್ದರು.

ಪ್ರತಿಕ್ರಿಯಿಸಿ (+)