ಸೋಮವಾರ, ಏಪ್ರಿಲ್ 12, 2021
23 °C

ಮಠಗಳೂ ಲೆಕ್ಕಪತ್ರ ಸಲ್ಲಿಸಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಠ ಮತ್ತು ಧಾರ್ಮಿಕ ಸಂಸ್ಥೆಗಳಿಗೆ ಬಜೆಟ್‌ನಲ್ಲಿಯೆ ಉದಾರವಾಗಿ ಕೋಟಿಗಟ್ಟಲೆ ಅನುದಾನ ಹಂಚಿಕೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಈ ಬಾರಿಯೂ ಮುಂದುವರಿಸಿದ್ದಾರೆ. ಈ ಬಗೆಗೆ ಸದನದ ಒಳಗೆ ಮತ್ತು ಹೊರಗೆ ಬಂದ ಟೀಕೆ ಟಿಪ್ಪಣಿಗಳಿಗೆ ಅವರು ಸೊಪ್ಪುಹಾಕಿಲ್ಲ. ಆದರೆ ಜನಸಾಮಾನ್ಯರಿಂದ ಬರುವ ತೆರಿಗೆಯ ಹಣವನ್ನು ಆಡಳಿತದ ಚುಕ್ಕಾಣಿ ಹಿಡಿದವರು ಬೇಕಾಬಿಟ್ಟಿ ನೀಡಲು ಬರುವುದಿಲ್ಲ.ಯಾವುದೇ ಒಂದು ಯೋಜನೆ, ಕಾರ್ಯಕ್ರಮ ಮತ್ತು ಇತರ ಸಂಸ್ಥೆಗಳಿಗೆ ನೀಡುವ ನೆರವಿನ ಸದ್ಬಳಕೆ ಬಗೆಗೆ ಪಾರದರ್ಶಕವಾಗಿರಬೇಕು. ಆರ್ಥಿಕ ನೆರವು ಪಡೆದ ಮಠಗಳು ಸರ್ಕಾರಕ್ಕೆ ಉತ್ತರದಾಯಿಯಾಗಿರಬೇಕು. ಭಕ್ತರು ನೀಡುವ ಕಾಣಿಕೆಗೂ ಸರ್ಕಾರ ನೀಡುವ ಹಣಕ್ಕೂ ವ್ಯತ್ಯಾಸವಿದೆ. ಆದ್ದರಿಂದ ಹಣ ಪಡೆಯುವ ಮಠಗಳು ಉದ್ದೇಶಿತ ಕಾರ್ಯಗಳಿಗೆ ಮಾಡಿದ ಖರ್ಚಿನ ಬಗೆಗೆ ಸರ್ಕಾರಕ್ಕೆ ಕರಾರುವಾಕ್ಕಾಗಿ ಲೆಕ್ಕ ನೀಡಬೇಕು. ಸರ್ಕಾರ ಕೂಡ ಇದನ್ನು ಕಡ್ಡಾಯಗೊಳಿಸಬೇಕು.‘ಸರ್ಕಾರ ಮಾಡಬೇಕಾದ ಕೆಲಸವನ್ನು ಮಠಗಳು ಮಾಡುತ್ತಿವೆ’ಎಂದು ಉಡಾಫೆಯ ಉತ್ತರ ನೀಡಿ ನುಣುಚಿಕೊಳ್ಳಬಾರದು. ಮಠಗಳು ಮಾಡುವ ಕಾರ್ಯವನ್ನು ಸರ್ಕಾರವೇಕೆ ಮಾಡಲಾಗಿಲ್ಲ ಎಂದು ತಮ್ಮ ಆಡಳಿತದಲ್ಲಿನ ದೋಷದ ಬಗೆಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಆ ಮೂಲಕ ಸರ್ಕಾರದ ಲೋಪವನ್ನು ಸರಿಪಡಿಸಬೇಕು. ಜನತೆ ಈ ಉದ್ದೇಶಕ್ಕಾಗಿಯೇ ತಮಗೆ ಅಧಿಕಾರ ನೀಡಿದ್ದಾರೆಂಬುದನ್ನು ಮುಖ್ಯಮಂತ್ರಿಗಳು ಮರೆಯಬಾರದು.ಸಮಾಜದ ಅಭಿವೃದ್ಧಿಗೆ ಸಹಾಯವಾಗುವ ಸಂಸ್ಥೆಗಳ ಕೆಲವೊಂದು ಯೋಜನೆಗಳಿಗೆ ಆರ್ಥಿಕ ನೆರವು ನೀಡುವುದರಲ್ಲಿ ತಪ್ಪೇನೂ ಇಲ್ಲ.ಆದರೆ ಆ ನಿಯಮವನ್ನು ಸಾಮಾಜಿಕ ಸೇವೆಯ ಸೋಗು ಹಾಕಿಕೊಂಡಿರುವ ಎಲ್ಲ ಮಠ ಮತ್ತು ಸಂಸ್ಥೆಗಳಿಗೆ ಅನ್ವಯಿಸಲಾಗದು.ಹಲವು ಮಠಗಳು ಸಾಮಾಜಿಕ ಸೇವೆಯಲ್ಲಿ ತೊಡಗಿರುವುದು ನಿಜ. ಬಹುತೇಕ ಮಠಗಳಿಗೆ ಇಂದು ಹಣ ಮತ್ತು ಇತರೆ ಸಂಪನ್ಮೂಲದ ಕೊರತೆಯೇನಿಲ್ಲ. ಹಲವು ಮಠಗಳು ವೃತ್ತಿ ಶಿಕ್ಷಣದ ಕಾಲೇಜುಗಳನ್ನು ನಡೆಸುತ್ತಿದ್ದು, ದುಬಾರಿ ಶುಲ್ಕ ಮತ್ತು ಪರೋಕ್ಷವಾಗಿ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಹೆಸರಿನಲ್ಲಿ ವಂತಿಗೆ ಪಡೆಯುತ್ತಿವೆ.

 

ಹಲವು ಭಕ್ತರು ಉದಾರವಾಗಿ ನೀಡುವ ಕಾಣಿಕೆಗಳಿಂದ ಬಹುತೇಕ ಮಠಗಳು ಶ್ರೀಮಂತವಾಗಿವೆ. ಇಂತಹ ಮಠಗಳಿಗೆ ಅನವಶ್ಯಕವಾಗಿ ಸರ್ಕಾರದ ಬೊಕ್ಕಸದಿಂದ ನೆರವು ನೀಡುವುದು ಅರ್ಥಹೀನ. ಸ್ವಜಾತಿ ಪ್ರೇಮ ಮತ್ತು ವೈಯಕ್ತಿಕ ಭಕ್ತಿಯಿಂದ ಮಠಗಳಿಗೆ ಸರ್ಕಾರದಲ್ಲಿರುವ ಸಾರ್ವಜನಿಕರ ಹಣವನ್ನು ಮನಸ್ಸಿಗೆ ಬಂದಂತೆ ಹಂಚುವುದು ಉತ್ತಮ ಆಡಳಿತದ ಲಕ್ಷಣವಲ್ಲ.ಜನರ ತೆರಿಗೆ ಹಣವನ್ನು ಎಚ್ಚರಿಕೆಯಿಂದ ಬಳಸಬೇಕು. ಮಾಡುವ ಪ್ರತಿಯೊಂದು ಪೈಸೆಯ ಖರ್ಚಿಗೆ ಲೆಕ್ಕ ಸಿಗಬೇಕು. ಆಡಳಿತ ವ್ಯವಸ್ಥೆಯಲ್ಲಿ ಇಂತಹ ಆರ್ಥಿಕ ಶಿಸ್ತು ಇರಲೇ ಬೇಕು. ಆದ್ದರಿಂದ ಮಠಗಳಿಗೆ ಬಜೆಟ್‌ನಿಂದ ನೀಡುವ ಪ್ರತಿಯೊಂದು ರೂಪಾಯಿಯ ಖರ್ಚಿನ ಬಗ್ಗೆ ಲೆಕ್ಕಪರಿಶೋಧನೆ ನಡೆಯಬೇಕು. ಆಗ ಮಾತ್ರ ಸರ್ಕಾರ ನೀಡುವ ಹಣ ಸದುಪಯೋಗವಾಗಲು ಸಾಧ್ಯ. ಈ ಕರ್ತವ್ಯ ನಿರ್ವಹಣೆಯಲ್ಲಿ ಸರ್ಕಾರ ಮತ್ತು ಮಠಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.