ಗುರುವಾರ , ಏಪ್ರಿಲ್ 15, 2021
24 °C

ಮಠಗಳ ಕಾರ್ಯ ಶ್ಲಾಘನೀಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ಭಾರತ ದೇಶದಲ್ಲಿ ಆಧ್ಯಾತ್ಮಿಕ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ ಕರ್ನಾಟಕದ ಮಠ ಮಾನ್ಯಗಳ ಸೇವೆಯನ್ನು ಬೀದರ್ ಚಿದಂಬರ್ ಆಶ್ರಮದ ಡಾ. ಶಿವಕುಮಾರ ಸ್ವಾಮೀಜಿ ಶ್ಲಾಘಿಸಿದರು.ಅವರು ಭಾನುವಾರ ಇಲ್ಲಿನ ಪಂಚಲಿಂಗೇಶ್ವರ ಬುಗ್ಗಿ ಬಳಿಯ ತೇರ್ ಮೈದಾನದಲ್ಲಿ ಹಾರಕೂಡ ಚನ್ನಬಸವ ಮಹಾ ಶಿವಯೋಗಿಗಳ ಜಾತ್ರೆ ಪ್ರಯುಕ್ತ ಹಮ್ಮಿಕೊಂಡ ಶಿವಾನುಭವ ಚಿಂತನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಸಂತರು, ಶರಣರು  ಬಾಳಿ ಬದುಕಿ ಪಾವನಗೊಳಿಸಿದ ಪುಣ್ಯಭೂಮಿ ಕರ್ನಾಟಕದಲ್ಲಿ ಮಠಗಳು, ಧರ್ಮ ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳ ಪುನರುತ್ಥಾನದ ಜತೆಗೆ ಜ್ಞಾನ ಹಾಗೂ ಅನ್ನದಾಸೋಹ ಕ್ಷೇತ್ರದಲ್ಲಿ ಮಾದರಿ ಸೇವೆ ಸಲ್ಲಿಸುತ್ತಿವೆ ಎಂದರು.ಸಾನಿಧ್ಯ ವಹಿಸಿದ್ದ ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಚನ್ನವೀರ ಶಿವಾಚಾರ್ಯರು ಮಾತನಾಡಿ, ದಾನ ಧರ್ಮ ಪರೋಪಕಾರಗಳಿಂದ ದೊರೆಯುವಂತಹ ಆತ್ಮತೃಪ್ತಿ ಇನ್ನಾವುದೇ ಕಾರ್ಯದಿಂದ ಸಿಗುವುದಿಲ್ಲ. ಭಕ್ತರು ಸದಾಕಾಲ ದಾಸೋಹ ಸೇವೆಯನ್ನು ಮೈಗೂಡಿಸಿಕೊಂಡು ಪುನೀತರಾಗಬೇಕೆಂದರು.ಮಾಜಿ ಸಚಿವ ವೈಜನಾಥ ಪಾಟೀಲ್, ಕೆಪಿಸಿಸಿ ಸದಸ್ಯ ಹಾಗೂ ಮಾಜಿ ಶಾಸಕ ಕೈಲಾಸ ವೀರೇಂದ್ರ ಪಾಟೀಲ್, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಅಜಯಸಿಂಗ್ ಮಾತನಾಡಿದರು,ಶಾಸಕ ಸುನೀಲ ವಲ್ಯ್‌ಪುರ ಅವರ ಅನುಪಸ್ಥಿತಿಯಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ರೇವಣಸಿದ್ದಪ್ಪ ಮಜ್ಜಗಿ ಸಂದೇಶ ಓದಿದರು. ಚನ್ನವೀರ ಶಿವಾಚಾರ್ಯರ ಪೂಜ್ಯ ತಂದೆಯವರಾದ ಶತಾಯುಶಿ ಕರಬಸಯ್ಯ ಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಮಾಜಿ ಮಂತ್ರಿ ಬಾಬುರಾವ್ ಚವ್ಹಾಣ್, ಜಾತ್ಯತೀತ ಜನತಾ ದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಗಾಜರೆ, ಜಿ.ಪಂ. ಸದಸ್ಯ ದೀಪಕನಾಗ ಶಶಿಧರ ಪುಣ್ಯಶೆಟ್ಟಿ, ಪ.ಪಂ.ಅಧ್ಯಕ್ಷ ಅಬ್ದುಲ್ ಬಾಷೀತ್, ಉಪಾಧ್ಯಕ್ಷ ಶರಣಗೌಡ ಸುಂಕದ್, ಡಾ.ಉಮೇಶ ಜಾಧವ್, ದೇವಿದಾಸ್ ಚವ್ಹಾಣ, ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಕಲ್ಲಪ್ಪ ಹೊಗತಾಪೂರ ಮತ್ತಿತರರು ಇದ್ದರು.ಕಾರ್ಯಕ್ರಮದಲ್ಲಿ ಶ್ರೀಮಠಕ್ಕೆ ಪಲ್ಲಕ್ಕಿ ದೇಣಿಗೆ ನೀಡಿದ ಶಾಮರಾವ್ ಸೀಳಿನ್ ದಂಪತಿಗೆ ಹಾಗೂ ಶ್ರೀಮಠದ ಪರಂಪರೆಯಂತೆ ಚನ್ನವೀರ ಶಿವಾಚಾರ್ಯರಿಂದ ಪ್ರಸಕ್ತ ವರ್ಷದ ಗುರುರಕ್ಷೆಗೆ ಭಕ್ತರಾದ ಅಣ್ಣಪ್ಪ ಮಾಸ್ತರ್ ಕಲಶೆಟ್ಟಿ ದಂಪತಿ ಹಾಗೂ ದುಬಲಗುಂಡಿಯ ರಾಮಣ್ಣ ಗಂಗಾ ಪಾಟೀಲ್ ದಂಪತಿ ಪಾತ್ರರಾದರು.ಇದೇ ಸಂದರ್ಭದಲ್ಲಿ ಗಾಳಿ ಪಟ ಉತ್ಸವದಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ ಬಹುಮಾನ ವಿತರಿಸಲಾಯಿತು. ಜಗನ್ನಾಥ ಶೇರಿಕಾರ ಸ್ವಾಗತಿಸಿದರು. ಮಲ್ಲಿಕಾರ್ಜುನ ಪಾಲಾಮೂರು ನಿರೂಪಿಸಿದರು. ನಾಗಶೆಟ್ಟಿ ಭದ್ರಶೆಟ್ಟಿ ವಂದಿಸಿದರು. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.