ಮಠಗಳ ಸೇವೆ ಶ್ಲಾಘನೀಯ

ಬುಧವಾರ, ಜೂಲೈ 17, 2019
25 °C

ಮಠಗಳ ಸೇವೆ ಶ್ಲಾಘನೀಯ

Published:
Updated:

ಜಮಖಂಡಿ: ವೀರಶೈವ ಪೀಠಗಳು ಹಾಗೂ ಮಠಮಾನ್ಯಗಳು ಧಾರ್ಮಿಕ ಕಾರ್ಯಗಳ ಜೊತೆಗೆ ಶೈಕ್ಷಣಿಕ ಸಂಸ್ಥೆಗಳನ್ನು ಮತ್ತು ಪ್ರಸಾದ ನಿಲಯಗಳನ್ನು ಹುಟ್ಟುಹಾಕಿ ಬಹಳಷ್ಟು ಗಟ್ಟಿಯಾದ ಹೆಜ್ಜೆಗಳನ್ನು ಇಟ್ಟ ದಿನಗಳನ್ನು ಮರೆಯಬಾರದು ಎಂದು ಬಾಳೆಹೊನ್ನೂರಿನ ರಂಭಾಪುರಿಯ ಜಗದ್ಗುರು ಪ್ರಸನ್ನ ರೇಣುಕ ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ನುಡಿದರು.ತಾಲ್ಲೂಕಿನ ಹುಲ್ಯಾಳ ಗ್ರಾಮದ ಗುರು ಶಂಭುಲಿಂಗೇಶ್ವರ ವಿದ್ಯಾವರ್ಧಕ ಸಂಘದ ಮಾತಾ ದಾನೇಶ್ವರಿ ಡಿ.ಇಡಿ ಕಾಲೇಜಿನ ನೂತನ ಕಟ್ಟಡದ ಉದ್ಘಾಟನೆಯನ್ನು ಬುಧವಾರ ನೆರವೇರಿಸಿದ ಬಳಿಕ ನಡೆದ ಸಮಾರಂಭದಲ್ಲಿ ದಾನಿಗಳನ್ನು ಸನ್ಮಾನಿಸಿ ಅವರು ಆಶೀರ್ವಚನ ನೀಡಿದರು.ಬುದ್ಧಿ ವಿಕಾಸವಾದರೆ ಮನುಷ್ಯನ ಭಾವನೆಗಳು ವಿಕಾಸ ಆಗಬೇಕು. ಆದರೆ ವಿದ್ಯಾವಂತರು ಎನಿಸಿಕೊಳ್ಳುವವರ ಕೆಲವರ ಮನಸ್ಸುಗಳು ವಿಕಾರಗೊಳ್ಳುತ್ತಿವೆ. ಕಾರಣ ಭೌತಿಕ ಜ್ಞಾನದ ಜೊತೆಗೆ ನಿಜವಾದ ಜೀವನದ ಜ್ಞಾನ ಮತ್ತು ಅನುಭವವನ್ನು ಶಿಕ್ಷಣ ಸಂಸ್ಥೆಗಳು ನೀಡಬೇಕು ಎಂದರು.`ನಮ್ಮ ಸಂಸ್ಕೃತಿ, ಪರಂಪರೆ, ರಾಷ್ಟ್ರಭಕ್ತಿ, ಸಹಬಾಳ್ವೆ ಕುರಿತು ಇಂದಿನ ಯುವಕರಲ್ಲಿ ಚಿಂತನೆ ತುಂಬುವ ಕೆಲಸ ಧರ್ಮಪೀಠಗಳ ಹಾಗೂ ಧಾರ್ಮಿಕ ಕೇಂದ್ರಗಳ ಮೂಲಕ ನಡೆಯಬೇಕು. ಅಂದಾಗ ಮಾತ್ರ ಭವಿಷ್ಯ ಆಶಾದಾಯಕವಾಗಿರಲು ಸಾಧ್ಯವಾಗುತ್ತದೆ~ ಎಂದು ನುಡಿದರು.ವಿಜಾಪುರ ಜಿಲ್ಲಾಧಿಕಾರಿಎಸ್.ಎಸ್. ಪಟ್ಟಣಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡಿ, ಸಮಾಜಕ್ಕೆ ಉಪಯೋಗ ಆಗುವಂತ ಹಲವಾರು ಹೊಸ ಕೋರ್ಸ್‌ಗಳನ್ನು ಆರಂಭಿಸಲು ಕಾರ್ಯ ಪ್ರವೃತರಾಗಲು ಗುರು ಶಂಭು ಲಿಂಗೇಶ್ವರ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳಿಗೆ ಸಲಹೆ ನೀಡಿದರು.ಹುಲ್ಯಾಳ ಯೋಗಾಶ್ರಮದ ವಿದ್ಯಾನಂದ ಶ್ರೀಗಳು ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು. ಬಂಕಾಪುರದ ಅರಳೆಲೆ ಹಿರೇಮಠದ ರೇವಣಸಿದ್ಧೇಶ್ವರ ಶ್ರೀಗಳು ಆಶೀರ್ವಚನ ನೀಡಿದರು. ಜಮಖಂಡಿಯ ಮುತ್ತಿನಕಂತಿ ಮಠದ ನೀಲಕಂಠ ಶ್ರೀಗಳು, ಶಿವಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಜಗದೀಶ ಗುಡಗುಂಟಿ, ಇಳಕಲ್‌ನ ಡಯಟ್ ಸಂಸ್ಥೆ ಪ್ರಾಚಾರ್ಯ ಎಂ.ಎಂ.ಮಡಿವಾಳ, ಬಿಇಓ ಎ.ಸಿ. ಗಂಗಾಧರ ಮಾತನಾಡಿದರು. ಸೋಲಾಪುರದ ಜ್ಯೋತಿಷಿ ಎನ್.ಎಸ್. ಪರದೇಶಿಮಠ, ಗ್ರಾ.ಪಂ. ಅಧ್ಯಕ್ಷ ಎಂ.ಎಚ್. ಭಜಂತ್ರಿ, ಜಿ.ಪಂ.ಸದಸ್ಯೆ ಮಹಾದೇವಿ ಮೂಲಿಮನಿ, ತಾ.ಪಂ. ಸದಸ್ಯೆ ನಾಗವ್ವ ವಾರದ ವೇದಿಕೆಯಲ್ಲಿದ್ದರು.ಕಟ್ಟಡ ದಾನಿಗಳಾದ ಜಗದೀಶ ಗುಡಗುಂಟಿ ದಂಪತಿ, ಚಿಕ್ಕಮಕ್ಕಳ ತಜ್ಞ ಡಾ.ಶಂಕರ ಪಾಟೀಲ (ಬಾಗಲಕೋಟೆ) ದಂಪತಿ, ಶಂಕರಲಿಂಗಪ್ಪ ಬೀಳಗಿ (ರಾಮದುರ್ಗ) ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಗೀತಾ ನಾಶಿಮಠ, ಸಂಗೀತಾ ಯಂಡಿಗೇರಿ, ಮಾಲಾಶ್ರೀ ಗಡೆನ್ನವರ, ಶಶಿಕಲಾ ಕತ್ತಿ, ವಿಶ್ವನಾಥ ಹಲ್ಯಾಳ ಅವರನ್ನು ಸನ್ಮಾನಿಸಲಾಯಿತು.ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಎಂ. ಝುಲಪಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿ.ಇಡಿ ಅಧೀಕ್ಷಕಿ ಪೂರ್ಣಿಮಾ ಗಾರವಾಡಮಠ ವರದಿ ವಾಚನ ಮಾಡಿದರು. ರುದ್ರಮ್ಮ ಮಂಡಾಗಣಿ ನಿರೂಪಿಸಿದರು.  ಗುರು ಶಂಭುಲಿಂಗೇಶ್ವರ ವಿದ್ಯಾವರ್ಧಕ ಸಂಘದ ಚೇರಮನ ಡಾ.ಎ.ಆರ್. ಬೆಳಗಲಿ ವಂದಿಸಿದರು.ಅಡ್ಡಪಲ್ಲಕ್ಕಿ ಮಹೋತ್ಸವ: ಇದಕ್ಕೂ ಮೊದಲು ಹುಲ್ಯಾಳ ಗ್ರಾಮದಲ್ಲಿ ಖಣಿವಾದನ ಮೇಳ, ಕರಡಿಮೇಳ ಹಾಗೂ ಇತರ ಜನಪದ ಕಲಾ ತಂಡಗಳು ಮೆರಣಿಗೆಯಲ್ಲಿ ಭಾಗವಹಿಸಿದ್ದವು.ಕುಂಭಹೊತ್ತ ಮತ್ತು ಆರತಿ ಹಿಡಿದ ಸುಮಂಗಲೆಯರು, ಗ್ರಾಮಸ್ಥರು ಸೇರಿ ಶ್ರದ್ಧೆ, ಭಕ್ತಿಯಿಂದ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry