ಮಠಾಧೀಶರ ದಿಲ್ಲಿ ಚಲೋ: ಪೇಜಾವರ ಸ್ವಾಮೀಜಿ ಸಲಹೆ

7

ಮಠಾಧೀಶರ ದಿಲ್ಲಿ ಚಲೋ: ಪೇಜಾವರ ಸ್ವಾಮೀಜಿ ಸಲಹೆ

Published:
Updated:

ಶ್ರೀರಂಗಪಟ್ಟಣ:  ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದ್ದು ಮುಖ್ಯಮಂತ್ರಿ ಜಗದೀಶ ಶೆಟ್ಟರ್, ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು, ಸಂಸದರು ಹಾಗೂ ಶಾಸಕರು ತಮ್ಮ ಸ್ಥಾನಗಳಿಗೆ ತಕ್ಷಣ ರಾಜೀನಾಮೆ ನೀಡಬೇಕು ಎಂದು ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.ತಮಿಳುನಾಡಿನಲ್ಲಿ ಚಾತುರ್ಮಾಸ ಆಚರಣೆ ಮುಗಿಸಿಕೊಂಡು ವಾಪಸಾಗುತ್ತಿದ್ದ ವೇಳೆ ಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿ ವೃತ್ತದಲ್ಲಿ ಬುಧವಾರ ಕಾವೇರಿ ಹಿತರಕ್ಷಣಾ ಸಮಿತಿ ನಡೆಸುತ್ತಿದ್ದ ಧರಣಿಯಲ್ಲಿ ಕೆಲಕಾಲ ಭಾಗವಹಿಸಿ ಅವರು ಮಾತನಾಡಿದರು.ದಿಲ್ಲಿ ಚಲೋಗೆ ಸಿದ್ಧ: ಸದ್ಯದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ, ಸಚಿವರು ಹಾಗೂ ಶಾಸಕರು ರಾಜೀನಾಮೆ ನೀಡಿ ಒತ್ತಡ ಹೇರುವ ತಂತ್ರ ಸೂಕ್ತವಾದುದು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜಕಾರಣಿಗಳು ಪಕ್ಷಭೇದ ಮರೆತು ಒಗ್ಗಟ್ಟು ಪ್ರದರ್ಶಿಸಬೇಕು. ತಡ ಮಾಡದೆ ನವದೆಹಲಿಗೆ ನಿಯೋಗ ತೆರಳಿ ಪ್ರಧಾನಮಂತ್ರಿಗಳಿಗೆ ವಾಸ್ತವ ಸಂಗತಿಯನ್ನು ಮನವರಿಕೆ ಮಾಡಿಕೊಡಬೇಕು. ತಡವಾದರೆ ರಾಜ್ಯದ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತಾರೆ. ರಾಜ್ಯದ ಎಲ್ಲ ಮಠಾಧೀಶರು ಒಂದಾಗಿ ದಿಲ್ಲಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ನವದೆಹಲಿಗೆ ಹೋಗಲು ನಾವೂ ಸಿದ್ಧರಿದ್ದೇವೆ ಎಂದು ಹೇಳಿದರು.ರಾಜಕಾರಣಿಗಳು ಹಾಗೂ ಮಠಾಧೀಶರು ದೆಹಲಿಗೆ ಹೋಗುವಾಗ ತಮ್ಮ ಜತೆ ತಜ್ಞರನ್ನು ಕರೆದೊಯ್ಯಬೇಕು. ರಾಜ್ಯದಲ್ಲಿನ ಮಳೆಯ ಕೊರತೆ, ಬೆಳೆ ನಷ್ಟ, ಕುಡಿಯುವ ನೀರಿನ ಸಮಸ್ಯೆಯನ್ನು ಬಿಡಿಸಿ ಹೇಳಬೇಕು. ತಮಿಳುನಾಡಿನಲ್ಲಿ ಸಾಕಷ್ಟು ನೀರಿದ್ದರೂ ಅಲ್ಲಿನ ಸರ್ಕಾರ ರಾಜಕೀಯ ಕಾರಣಗಳಿಗಾಗಿ ನೀರಿಗೆ ಬೇಡಿಕೆ ಇಡುತ್ತಿದೆ. ನಿಜ ಸಂಗತಿ ಗೊತ್ತಿಲ್ಲದ ಕಾವೇರಿ ನದಿ ಪ್ರಾಧಿಕಾರ ನೀರು ಹರಿಸುವಂತೆ ಕರ್ನಾಟಕಕ್ಕೆ ಆದೇಶ ನೀಡಿರುವುದು ಸಮ್ಮತವಲ್ಲ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry