ಮಠ-ಮಂದಿರ ಮೂಢನಂಬಿಕೆ ಕೇಂದ್ರ

7

ಮಠ-ಮಂದಿರ ಮೂಢನಂಬಿಕೆ ಕೇಂದ್ರ

Published:
Updated:

ದಾವಣಗೆರೆ: ಬಹುತೇಕ ಮಠ, ಮಂದಿರ, ಚರ್ಚ್, ಮಸೀದಿಗಳು ಇಂದು ಮೂಢ ನಂಬಿಕೆಗಳನ್ನು ಬಿತ್ತರಿಸುವ ಕೇಂದ್ರಗಳಾಗಿದ್ದು, ತಮ್ಮ ಅನುಕೂಲಕ್ಕೆ ತಕ್ಕಂತೆ ಜನರಲ್ಲಿ ಅಜ್ಞಾನವನ್ನು ಬೆಳೆಸುತ್ತಿವೆ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಕಿಡಿ ಕಾರಿದರು.ಸ್ಫೂರ್ತಿ ಸೇವಾ ಸಂಘ ನಗರದಲ್ಲಿ ಮೂರು ದಿನ ಹಮ್ಮಿಕೊಂಡಿರುವ ನಾಟಕೋತ್ಸವಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.ದೇಶದಲ್ಲಿ ಸಾಕಷ್ಟು ದಾರ್ಶನಿಕರು, ಯೋಗಿಗಳು, ಮಹಾತ್ಮರು, ಸಂತರು ಜನ್ಮವೆತ್ತಿ ಸಮಾಜದಲ್ಲಿನ ನ್ಯೂನತೆ ಸರಿಪಡಿಸಲು ಪ್ರಯತ್ನಿಸಿದ್ದಾರೆ. ಆದರೆ, ಕಾಲಾನಂತರದಲ್ಲಿ ಅವರ ತತ್ವ, ಚಿಂತನೆಗಳು ಯಥಾಸ್ಥಿತಿವಾದಿಗಳ, ಮೂಲಭೂತವಾದಿಗಳ ಕೈಯಲ್ಲಿ ಸಿಲುಕಿವೆ. ಅದರ ಪರಿಣಾಮ ಸಮಾಜದಲ್ಲಿ ಗುಣಾತ್ಮಕ ಬದಲಾವಣೆ ಸಾಧ್ಯವಾಗಿಲ್ಲ. ಬಸವಣ್ಣ ಶೋಷಣೆ ವಿರುದ್ಧ, ಅಸಮಾನತೆಯ ವಿರುದ್ಧ, ಜಾತಿ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದರು. ಆದರೆ, ಇಂದು ಅವರ ಅನುಯಾಯಿಗಳು ಜಾತಿವಾದಿ ಆಗಿದ್ದಾರೆ. ಲಿಂಗಾಯತ, ಜಂಗಮ ಜಾತಿ ಸೂಚಕವಾಗಿ ಬಳಕೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.ಸಂತರ ಚರಿತ್ರೆಯನ್ನು ಪುರಾಣೀಕರಿಸಲಾಗಿದೆ. ಸಂತರಿಗೆ ದೇವರ ಸ್ಥಾನ ನೀಡಿ, ಅವರ ಅನುಯಾಯಿಗಳಿಗೇ ಮೂಢನಂಬಿಕೆಗಳನ್ನು ವ್ಯವಸ್ಥಿತವಾಗಿ ತುಂಬಲಾಗುತ್ತಿದೆ. ಹೋರಾಟಗಾರರನ್ನೂ ದೇವರು ಮಾಡಿ ಕೂರಿಸಲಾಗಿದೆ. ಅದೆಲ್ಲಕ್ಕಿಂತ ಸೋಜಿಗ ಎಂದರೆ ಇಂದು ಬಹುತೇಕ ಮಠಗಳು, ಸ್ವಾಮೀಜಿಗಳೂ ಮೂಲಭೂತವಾದಿಗಳಾಗಿ ಸಂಪತ್ತನ್ನು ವೃದ್ಧಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.ಕೇಂದ್ರ ಮಾಜಿ ಸಚಿವ ಹಾಗೂ ಶಾಸಕ ವಿ. ಶ್ರೀನಿವಾಸ ಪ್ರಸಾದ್ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಸಮಾನತೆ ಹಾಗೂ ಮಾನವೀಯತೆಗಾಗಿ ಶ್ರಮಿಸಿದರು. ಅವರ ಆದರ್ಶಗಳನ್ನು ಜನರು ಮೈಗೂಡಿಸಿಕೊಳ್ಳುವ ಮೂಲಕ ಅಸಂಘಟಿತರು, ಅಶಕ್ತರು ಹಾಗೂ ಅಸಹಾಯಕರ ಸೇವೆಗಾಗಿ ಬದುಕು ಮುಡುಪಾಗಿಡಬೇಕು ಎಂದು ಕರೆ ನೀಡಿದರು.ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಜನರಲ್ಲಿ ನಾಟಕದ ಆಸಕ್ತಿ ಕಡಿಮೆಯಾಗಿ ವೃತ್ತಿ ರಂಗಭೂಮಿ ಅಳಿವಿನ ಅಂಚಿನಲ್ಲಿದೆ. ಭಾರತೀಯರು ತಮ್ಮ ಉನ್ನತ ಸಂಸ್ಕೃತಿ, ಮೌಲ್ಯಗಳನ್ನು ಕಡೆಗಣಿಸಿ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.ರಾಜ್ಯ ಜಾನಪದ, ಸಂಗೀತ, ಮತ್ತು ಯಕ್ಷಗಾನ, ಬಯಲಾಟ ಕಲಾವಿದರ ಸಂಘದ ಅಧ್ಯಕ್ಷ ಕೆ. ಸಣ್ಣ ಹೊನ್ನಯ್ಯ ಕಂಟಲಗೆರೆ, ಮೇಯರ್ ಎಂ.ಜಿ. ಬಕ್ಕೇಶ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಸುರೇಶ್, ಸಂಘದ ಅಧ್ಯಕ್ಷ ಎನ್.ಎಸ್. ರಾಜು ಮತ್ತಿತರರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಡಾ.ಡಿ. ರಾಘವನ್, ಡಾ.ಎ.ಎಂ. ಶಿವಕುಮಾರ್, ದಿಬ್ಬಳ್ಳಿ ಸುಧಾ ರಾಜಶೇಖರ್, ಕೆ.ಎಸ್. ನೀಲಮ್ಮ ಪಾಂಡೋಮಟ್ಟಿ, ಐ.ಎಸ್. ಪ್ರಶಾಂತ್ ಆರಾಧ್ಯ, ಪಿ.ವಿ. ಗಂಗಯ್ಯ ಅವರನ್ನು ಸನ್ಮಾನಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry