`ಮಠ-ಮಂದಿರ ಸಮಾಜ ತಿದ್ದಲಿ'

7

`ಮಠ-ಮಂದಿರ ಸಮಾಜ ತಿದ್ದಲಿ'

Published:
Updated:

ಉಜಿರೆ: ಮಠ-ಮಂದಿರಗಳು ದೇವರ ಆರಾಧನೆಯೊಂದಿಗೆ ಸಮಾಜಕ್ಕೆ ಸನ್ಮಾರ್ಗದ ಬೆಳಕನ್ನು ನೀಡಬೇಕು. ಸಮಾಜವನ್ನು ತಿದ್ದುವ ಕೆಲಸ ಮಾಡಬೇಕು. ಭೋಗ ಜೀವನದ ಬದಲು ನಾವು ತ್ಯಾಗದ ಜೀವನ ಮಾಡಿ ದೇವರಿಗೆ ಪ್ರಿಯವಾದ ಸತ್ಕಾರ್ಯಗಳನ್ನು ಮಾಡಬೇಕು ಎಂದು ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.



ಧರ್ಮಸ್ಥಳ ಗ್ರಾಮದ ಕನ್ಯಾಡಿಯ ಶ್ರಿರಾಮ ಕ್ಷೇತ್ರದಲ್ಲಿ ಮಂಗಳವಾರ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚತುರ್ಥ ವರ್ಷದ ಪಟ್ಟಾಭಿಷೇಕ ವರ್ಧಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ರಾಮ ಕ್ಷೇತ್ರದ ಪ್ರಗತಿಗೆ ಸರ್ಕಾರದ ಸಂಪೂರ್ಣ ಸಹಕಾರ ನೀಡುವುದಾಗಿ ಪ್ರಕಟಿಸಿದರು.



ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿ, ಕನ್ಯಾಡಿಯ ರಾಮ ಕ್ಷೇತ್ರದಲ್ಲಿ ಸರ್ಕಾರದ ವತಿುಂದ ಯಾತ್ರಿ ನಿವಾಸ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.



ರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಇಲ್ಲಿನ ಗುರುಕುಲದಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣ ನೀಡಲಾಗುತ್ತಿದೆ. ಸಾರ್ವಜನಿಕರಿಂದ ಬಂದ ದೇಣಿಗೆಯನ್ನು ಸಮಾಜದ ಕಲ್ಯಾಣ ಕಾರ್ಯಗಳಿಗೆ ಬಳಸಲಾಗುವುದು ಎಂದರು.



ಆಶೀರ್ವಚನ ನೀಡಿದ ಕೊಲ್ಯ ಮಠದ ರಮಾನಂದ ಸ್ವಾಮೀಜಿ, ಸನಾತನ ಧರ್ಮ ಮತ್ತು ಸಂಸ್ಕೃತಿಯ ಅನುಷ್ಠಾನದಿಂದ ಶಾಂತಿ, ಸಾಮರಸ್ಯದ ಬದುಕು ಸಾಧ್ಯವಾಗುತ್ತದೆ. ಮಕ್ಕಳಿಗೆ ಧಾರ್ಮಿಕ ಸಂಸ್ಕಾರ ಮತ್ತು ಸತ್ಸಂಗದ ಶಿಕ್ಷಣ ನೀಡಿ ಸಮಾಜದ ಸಭ್ಯ ನಾಗರಿಕರಾಗಿ ರೂಪಿಸಬೇಕು. ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ ಸಲ್ಲದು ಎಂದು ಹೇಳಿದರು.



ಶಾಸಕ ಕೆ. ವಸಂತ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವರಾದ ಕೋಟ ಶ್ರಿನಿವಾಸ ಪೂಜಾರಿ ಮತ್ತು ಶಿವಾನಂದ ನಾಯ್ಕ, ಸೊರಬ ಶಾಸಕ ಮಧು ಬಂಗಾರಪ್ಪ ಹಾಗೂ ಬಂಟ್ವಾಳದ ಪ್ರೊ. ತುಕಾರಾಮ ಪೂಜಾರಿ ಶುಭಾಶಂಸನೆ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry