ಮಡಕೆ, ಡಬ್ಬದಲ್ಲಿ ಜೇನು ಸಾಕಣೆ

7

ಮಡಕೆ, ಡಬ್ಬದಲ್ಲಿ ಜೇನು ಸಾಕಣೆ

Published:
Updated:

ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದ ಸಮೀಪದ ಅತ್ತಿಕೆರೆ ಗ್ರಾಮದ ಸಾವಯವ ರೈತರಾದ ಸುರೇಶ್ ಕಡಿಮೆ ವೆಚ್ಚದಲ್ಲಿ ಜೇನು ಸಾಕುವ ಸುಲಭ ವಿಧಾನವನ್ನು ರೂಪಿಸಿದ್ದಾರೆ. ಮೊದಲು ಬೇಸಾಯದ ಜತೆ ಜೇನು ಸಾಕಣೆ ಮಾಡುತ್ತಿದ್ದರು. ಈಗ ಅದೇ ಅವರ ಮುಖ್ಯ ವೃತ್ತಿ ಎನ್ನುವಂತಾಗಿದೆ. ಸುರೇಶ್ ಅವರಿಗೆ 2.17 ಎಕರೆ ಭೂಮಿ ಇದೆ. ಅದರಲ್ಲಿ ಕಾಫಿ ಬೆಳೆದಿದ್ದಾರೆ. ಸಾವಯವ ಪದ್ಧತಿಯಲ್ಲಿ ಅನಾನಸ್, ಶುಂಠಿ, ಕಬ್ಬು, ಸೀಬೆ, ನಿಂಬೆ, ಸೌತೆ ಇತ್ಯಾದಿಗಳನ್ನು ಬೆಳೆಯುತ್ತಾರೆ. ಜತೆಗೆ ಜೇನು ಕುಟುಂಬಗಳನ್ನು ಡಬ್ಬ ಹಾಗೂ ಮಣ್ಣಿನ ಮಡಕೆಗಳಲ್ಲಿ ಇಟ್ಟು ಸಾಕುತ್ತಾರೆ.ಜೇನು ಸಾಕುವವರು ಸಾಮಾನ್ಯವಾಗಿ ಸಾಗುವಾನಿ ಮರದ ಪೆಟ್ಟಿಗೆಗಳನ್ನು ಬಳಸುತ್ತಾರೆ. ಮರದ ಪೆಟ್ಟಿಗೆಯೊಂದಕ್ಕೆ ಈಗ 3 ಸಾವಿರ ರೂ ಬೆಲೆ ಇದೆ. ಸಣ್ಣ ರೈತರು ಹಾಗೂ ಜನ ಸಾಮಾನ್ಯರಿಗೆ ಜೇನು ಸಾಕುವ ಆಸಕ್ತಿ ಇದ್ದರೂ ಪೆಟ್ಟಿಗೆ ಖರೀದಿಸಲು ಹಣವಿಲ್ಲದೆ ಜೇನು ಸಾಕಲು ಸಾಧ್ಯವಾಗುತ್ತಿಲ್ಲ. ಇದನ್ನರಿತ ಸುರೇಶ್ ಮಡಕೆ ಹಾಗೂ ಖಾಲಿ ಎಣ್ಣೆ ಡಬ್ಬಗಳಲ್ಲಿ ಜೇನು ಸಾಕುವ ವಿಧಾನವನ್ನು ರೂಪಿಸಿದ್ದಾರೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಿಣಾಭಿವೃದ್ಧಿ ಸಂಸ್ಥೆ ಅವರಿಗೆ ಉತ್ತೇಜನ ನೀಡುತ್ತಿದೆ.ಸುಮಾರು 15 ಲೀಟರ್ ನೀರು ಸಂಗ್ರಹಿಸಬಹುದಾದ ಮಡಕೆ ಅಥವಾ ಎಣ್ಣೆ ಡಬ್ಬಗಳಲ್ಲಿ ಅವರು ಜೇನುಗಳನ್ನು ಸಾಕಿದ್ದಾರೆ. ಇಂತಹ ಒಂದು ಮಡಕೆ ಬೆಲೆ 50 ರಿಂದ 75 ರೂ. ಡಬ್ಬವಾದರೆ 20 ರಿಂದ 25 ರೂ. ಮಡಕೆ  ಅಥವಾ ಡಬ್ಬ ಖರೀದಿಸಿದ ಮೇಲೆ 100 ಗ್ರಾಂ ಜೇನು ಮೇಣದ ಪುಡಿ, 25 ಗ್ರಾಂ ಪುಡಿ ಬೆಲ್ಲ ಹಾಗೂ 25 ಗ್ರಾಂ ದಾಲ್ಚಿನ್ನಿ ಚಕ್ಕೆ ಪುಡಿ ಹಾಗೂ 25 ಗ್ರಾಂ ಸ್ವಲ್ಪ ದಪ್ಪದ ಮರಳಿನ ಪುಡಿ ಜೋಡಿಸಿಕೊಳ್ಳಬೇಕು.ಡಬ್ಬ ಅಥವಾ ಮಡಕೆಯನ್ನು  ಒಂದು ಹದಕ್ಕೆ ಬಿಸಿ ಮಾಡಿ ನಂತರ ಶುಭ್ರ ನೀರಿನಿಂದ ಸ್ವಚ್ಛಗೊಳಿಸಬೇಕು.  ಜೇನು ಮೇಣದ ಪುಡಿಯನ್ನು ಮಡಕೆಯೊಳಕ್ಕೆ ಹಾಕಿ ಮತ್ತೆ ಹದವಾಗಿ ಬಿಸಿ ಮಾಡಬೇಕು. ಮೇಣ ಕರಗಿ ದ್ರವವಾದ ನಂತರ ಬೆಲ್ಲದ ಪುಡಿ, ಮರಳು ಹಾಗೂ ದಾಲ್ಚಿನ್ನಿ ಪುಡಿಯನ್ನು ಅದಕ್ಕೆ ಬೆರೆಸಿ ಮಿಶ್ರಮಾಡಿ ಬಿಸಿ ಇರುವಾಗಲೇ ಮಡಕೆ ಅಥವಾ ಡಬ್ಬವನ್ನು ತಿರುಗಿಸುತ್ತಾ ದ್ರವ ಒಳಭಾಗದಲ್ಲಿ ಸುತ್ತ ಲೇಪನವಾಗುವಂತೆ ನೋಡಿಕೊಳ್ಳಬೇಕು. ಮಡಕೆ ಅಥವಾ ಡಬ್ಬದ ಕೆಳಭಾಗದಲ್ಲಿ ಮೂರು ರಂಧ್ರಗಳನ್ನು ಮಾಡಿಕೊಳ್ಳಬೇಕು. ರಂಧ್ರಗಳ ಹೊರಭಾಗಕ್ಕೂ ದ್ರವವನ್ನು ಚೆನ್ನಾಗಿ ಉಜ್ಜಬೇಕು. ಈ ಕ್ರಮವನ್ನು ದಿನ ಬಿಟ್ಟುದಿನ ಮೂರು ಸಲ ಮಾಡಬೇಕು. ಬೆಲ್ಲ, ದಾಲ್ಚಿನ್ನಿ ಲೇಪನದ ಪರಿಮಳಕ್ಕೆ ಜೇನು ಕುಟುಂಬಗಳು ಆಕರ್ಷಿತವಾಗಿ ಡಬ್ಬ, ಮಡಕೆಗಳ ಒಳಕ್ಕೆ ಬಂದು ಸಂಸಾರ ಹೂಡುತ್ತವೆ. ಡಬ್ಬಕ್ಕೆ ಜೇನುಮೇಣ ಲೇಪಿಸಿರುವುದರಿಂದ 3-4 ವರ್ಷ ಬಾಳಿಕೆ ಬರುತ್ತದೆ. ನಂತರ ಬದಲಾಯಿಸಬೇಕು.ಮಡಕೆ ಹಲವಾರು ವರ್ಷಗಳ ಕಾಲ ಬಾಳಿಕೆ ಬರುತ್ತದೆ. ಪ್ರತಿ ಜೇನು ಕುಟುಂಬದಿಂದ 5 ರಿಂದ 10 ಕೆ.ಜಿ.  ಜೇನುತುಪ್ಪ ಸಿಗುತ್ತದೆ.

ಜನವರಿ-ಫೆಬ್ರುವರಿ ಅವಧಿಯಲ್ಲಿ ಮೇಲಿನಂತೆ ಸಿದ್ಧಪಡಿಸಿದ ಮಡಕೆ, ಡಬ್ಬಗಳನ್ನು ಕಾಡುಗಳಲ್ಲಿ, ಅಡಿಕೆ,  ಕಾಫಿ ತೋಟಗಳಲ್ಲಿ, ಮನೆಯ ಹಿತ್ತಲುಗಳಲ್ಲಿ ಇಡಬೇಕು. ಸ್ವಲ್ಪ ಎತ್ತರದ ಜಾಗಗಳಲ್ಲಿ ಅಡಿ ಭಾಗ ಸಮತಟ್ಟಾದ  ಕಲ್ಲಿನ ಮೇಲೆ ಬೋರಲಾಗಿ ಇಡಬೇಕು. ಗಾಳಿ, ಮಳೆಗಳಿಗೆ ಡಬ್ಬ- ಮಡಕೆ ಅಲ್ಲಾಡದಂತೆ ಕಾಡು ಕಲ್ಲುಗಳನ್ನು ಸುತ್ತ ಜೋಡಿಸಬೇಕು. ಮೇಲ್ಭಾಗಕ್ಕೆ ಅಡಕೆ ಹಾಳೆ, ಒಣ ಬಾಳೆ ಎಲೆ ಅಥವಾ ದಾಲ್ಚಿನ್ನಿ ಮರದ ಸಣ್ಣ ಟೊಂಗೆಗಳನ್ನು ಮುಚ್ಚಬೇಕು. ರಂಧ್ರವಿರುವ ಜಾಗವನ್ನು ಹಾಗೇ ಬಿಡಬೇಕು. ಜನವರಿ ಕೊನೆ ವಾರದಿಂದ ಮಾರ್ಚ್‌ವರೆಗೆ ಜೇನು ಕುಟುಂಬಗಳು ಪಾಲಾಗಿ ಹೊಸ ಆಶ್ರಯ ಹುಡುಕುತ್ತಾ ಇರುತ್ತವೆ. ಪ್ರತಿ ವರ್ಷ ಹಳೆಯ ಕುಟುಂಬಗಳಿಂದ ಕನಿಷ್ಠ 5 ರಿಂದ 15 ಹೊಸ ಕುಟುಂಬಗಳು ಬೆಳೆಯುತ್ತವೆ ಎನ್ನುತ್ತಾರೆ ಸುರೇಶ್.ಏಪ್ರಿಲ್, ಮೇ ತಿಂಗಳುಗಳಲ್ಲಿ ಮಡಕೆ-ಡಬ್ಬಗಳಿಂದ ಜೇನು ತುಪ್ಪ ತೆಗೆಯಬಹುದು. ಮಳೆಗಾಲದಲ್ಲೂ ಪ್ಲಾಸ್ಟಿಕ್ ರಕ್ಷಣೆಯಿಂದ ನಿರಂತರವಾಗಿ ಜೇನು ಹುಳು ಸಾಕಬಹುದು. ಸುರೇಶ್ ಪ್ರತಿ ವರ್ಷ 200ಕ್ಕೂ ಹೆಚ್ಚು  ಜೇನು ಕುಟುಂಬಗಳನ್ನು ಸಾಕಿ ಸಲಹುತ್ತಿದ್ದಾರೆ. ಆಸಕ್ತರಿಗೆ ಜೇನು ಪಟ್ಟಿಗೆಗಳನ್ನು ಕುಟುಂಬಸಹಿತ ರಿಯಾಯಿತಿ ಬೆಲೆಗೆ ವಿತರಿಸುತ್ತಾರೆ.  ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕೃಷಿ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಸುರೇಶ್ ಘಟಕದ ಇತರ ಸದಸ್ಯರಿಗೆ ಹಾಗೂ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಜೇನು ಸಾಕಾಣಿಕೆ ಬಗ್ಗೆ ಉಚಿತ ಮಾಹಿತಿ ನೀಡುತ್ತಿದ್ದಾರೆ. ಕಡಿಮೆ ವೆಚ್ಚದಲ್ಲಿ ಜೇನು ಸಾಕಲು ಬಯಸುವವರಿಗೆ ಅವರು ಸಲಹೆ ಸೂಚನೆ ನೀಡುತ್ತಾರೆ. ಆಸಕ್ತರು ಅವರನ್ನು ಸಂಪರ್ಕಿಸಬಹುದು. ಅವರ ಮೊಬೈಲ್ ನಂಬರ್- 9481621749.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry