ಗುರುವಾರ , ಮೇ 13, 2021
17 °C

ಮಡಿಕೆಗಿಲ್ಲ ಬೇಡಿಕೆ: ಸಂಕಷ್ಟದಲ್ಲಿ ಕುಂಬಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಜೇಂದ್ರಗಡ: ಏಪ್ರಿಲ್ ತಿಂಗಳ ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಝಳದಿಂದ ನಾಗರಿಕರಲ್ಲಿ ತಳಮಳವೂ ಜಾಸ್ತಿಯಾಗಿದೆ. ಇಂಥ ನೆತ್ತಿ ಸುಡುವ ರಣರಣ ಬಿಸಿಲಿನಲ್ಲಿ ಎಷ್ಟು ನೀರು ಕುಡಿದರೂ ತೃಪ್ತಿಯಾಗದ ದಾಹವಿದೆ.ಬೇಸಿಗೆ ದಿನಗಳಲ್ಲಿ ಬಡವರ ದಾಹವನ್ನು ತಣಿಸಲೆಂದು ಮಾರುಕಟ್ಟೆಗೆ ಲಗ್ಗೆ ಹಾಕುತ್ತಿದ್ದ ಮಣ್ಣಿನ ಮಡಿಕೆಗಳಿಗೆ ಇತ್ತೀಚಿನ ವರ್ಷಗಳಲ್ಲಿ ಬೇಡಿಕೆಯೇ ಇಲ್ಲದಂತಾಗಿದೆ. ಇದರಿಂದ ಇದನ್ನೇ ಜೀವನಕ್ಕೆ ಆಧಾರ ಮಾಡಿಕೊಂಡಿದ್ದ ಕುಂಬಾರರು ಈ ಗುಡಿ ಕೈಗಾರಿಕೆಯಿಂದ ದೂರ ಸರಿಯುತ್ತಿದ್ದಾರೆ.ರೋಣ ತಾಲ್ಲೂಕಿನ ಗಜೇಂದ್ರಗಡ, ಸೂಡಿ, ರಾಜೂರ, ಮುಶಿಗೇರಿ ಮುಂತಾದ ಗ್ರಾಮಗಳಲ್ಲಿ ಎರಡು ನೂರಕ್ಕೂ ಅಧಿಕ ಕುಂಬಾರ ಕುಟುಂಬ ಗಳಿದ್ದು, ಮಣ್ಣಿನ ಮಡಿಕೆ, ಒಲೆ, ಪಾತ್ರೆಗಳ ತಯಾರಿಕೆಯನ್ನೇ ಕಾಯ ವನ್ನಾಗಿಸಿಕೊಂಡು ಬದುಕು ಸಾಗಿ ಸುತ್ತಿದ್ದಾರೆ. ಆದರೆ, ಇತ್ತೀಚೆಗೆ ಆಧುನಿಕತೆಯ ಭರಾಟೆಗೆ ಸಿಕ್ಕು ಗ್ರಾಮೀಣ ಸೊಗಡಿನ ಮಣ್ಣಿನ ಮಡಿಕೆಗಳನ್ನು ಕೇಳುವವರೇ ಇಲ್ಲದಂತಾಗಿದೆ. ಅವರೆಲ್ಲರೂ ಈ ವೃತ್ತಿಯಿಂದ ದೂರ ಸರಿದು ತುತ್ತಿನ ಚೀಲ ತುಂಬಿಸಿಕೊಳ್ಳಲು ಅನಿವಾರ್ಯ ವಾಗಿ ಬೇರೆ ಬೇರೆ ಉದ್ಯೋಗ ಕಂಡುಕೊಳ್ಳಲು ಪರದಾಡುತ್ತಿದ್ದಾರೆ.ಕಡಿಮೆ ಬೆಲೆಗೆ ಸಿಗುತ್ತಿದ್ದ ಮಣ್ಣಿನ ಮಡಿಕೆಗಳ ಜಾಗವನ್ನು ಇದೀಗ ವಿದ್ಯುತ್ ಚಾಲಿತ ರೆಫ್ರಿಜಿರೇಟರ್‌ಗಳು ಆಕ್ರಮಿಸಿ ಕೊಂಡಿವೆ. ಪ್ರಸಕ್ತ ವರ್ಷ ಬೇಸಿಗೆ ವಿಪರೀತ ಬಿಸಿಲಿನಿಂದ ಕೂಡಿದೆ. ಆದರೆ, ನೀರನ್ನು ತಂಪಾಗಿಸುವ ಮಡಿಕೆಗೆ ಮಾತ್ರ ಬೇಡಿಕೆ ಇಲ್ಲ. ಪರಿಣಾಮ ಕುಂಬಾರರು ಮಣ್ಣನ್ನು ಹದಗೊಳಿಸಿ ಭಟ್ಟಿ ಹಾಕಿ ಗಡಿಗೆ ಮಾಡು ವುದನ್ನು ಕೈಬಿಟ್ಟಿದ್ದಾರೆ.ಸದ್ಯ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕೇವಲ ಬೆರಳೆಣಿಕೆ ಯಷ್ಟು ಕುಂಬಾರ ಕುಟುಂಬಗಳು ವಲ್ಲದ ಮನಸ್ಸಿನಿಂದ ಗಡಗಿ, ಮಡಿಕೆ ಇತ್ಯಾದಿಗಳನ್ನು ತಯಾರಿಸಿದರೆ, ಮತ್ತೆ ಕೆಲವು ಬೇರೆ ಕಡೆಗಳಲ್ಲಿ ಸಿದ್ಧಗೊಂಡ ಮಣ್ಣಿನ ಮಡಿಕೆ ಮತ್ತು ಪಾತ್ರೆಗಳನ್ನು ತಂದು ಮಾರಾಟ ಮಾಡುತ್ತಿದ್ದಾರೆ.ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ವ್ಯಾಪಾರ ನಡೆಯುತ್ತಿಲ್ಲ ಎಂಬ ನೋವು ಕುಂಬಾರರನ್ನು ಕಾಡುತ್ತಿದೆ.

ಒಂದು ಕೊಡ ನೀರಿನ ಮಡಿಕೆಯನ್ನು 60 ರಿಂದ 80 ರೂ.ಕ್ಕೆ ಮಾರಾಟ ಮಾಡುತ್ತೇವೆ. ಒಂದು ಮಡಿಕೆಗೆ 5 ರಿಂದ 6 ರೂ. ಲಾಭ ಸಿಗುತ್ತೆ. ಆದರೆ, ಗಿರಾಕಿ ಗಳು ಸಾಕಷ್ಟು ಚೌಕಾಶಿ ಮಾಡುತ್ತಾರೆ.ಇದರ ಜೊತೆಗೆ ಮಡಿಕೆ ಒಡೆದು ಹೋದರಂತೂ ಅಸಲು ಹೋಗಲಿ ನಷ್ಟವಾಗಿ ತಣ್ಣೀರ ಬಟ್ಟೆಯೇ ಗತಿ ಯಾಗುತ್ತದೆ ಎಂದು ಮಡಿಕೆ ಮಾರಲು ಕುಳಿತಿದ್ದ ಸಾವಿತ್ರಿ ಹೇಳುತ್ತಾರೆ. ಇಂಥ ರಣರಣ ಬಿಸಿಲಿಗೆ ಮಡಿಕೆಗಳೆಲ್ಲಾ ಮಾರಾಟವಾಗಬೇಕು.ಆದರೆ, ಇವುಗಳನ್ನು ಕೇಳೋರೆ ಇಲ್ಲವಾಗಿದ್ದಾರೆ. ಕೆಂಪು ಮಡಿಕೆಗಳು ಉಳಿಯುತ್ತಲೇ ಇರಲ್ಲಿಲ್ಲ. ಬೆಳಗ್ಗೆಯಿಂದ ಕುಳಿತರೂ ಹತ್ತು ಮಡಿಕೆ ಮಾರಾಟ ವಾಗಿಲ್ಲ ಎಂದು ಶಿವಪ್ಪ ಕುಂಬಾರ ಅವಲತ್ತುಕೊಂಡರು.ನಿರ್ಲಕ್ಷ್ಯ

ಮಾಜಿ ಮುಖ್ಯ ಮಂತ್ರಿಗಳಾದ ದಿವಂಗತ ಡಿ.ದೇವರಾಜ ಅರಸು  ಹಾಗೂ ರಾಮಕೃಷ್ಣ ಹೆಗಡೆ ಅವರ ಅಧಿಕಾರಾವಧಿಯಲ್ಲಿ ಕುಂಬಾರ ರಿಗೆ ನೀಡಿದ್ದ ಪ್ರಾತಿನಿಧ್ಯವನ್ನು ನಂತರ ಬಂದ ಜನಪ್ರತಿನಿಧಿಗಳು, ಅಧಿಕಾರಿಗಳು ನೀಡಿಲ್ಲ ಎಂಬ ಆರೋಪ ಕುಂಬಾರ ಸಮೂಹದ್ದಾಗಿದೆ.ಮಳೆಗಾಲದಲ್ಲಿ ಮಾಡುವ ಮಡಿಕೆಗಳನ್ನು ಭಟ್ಟಿಯಲ್ಲಿ ಸುಡುವಾಗ ಮಳೆ ಬಂದರೆ ಹಾಳಾಗುತ್ತವೆ. ಬೇಸಿಗೆ ಕಾಲದಲ್ಲಿ ತೊಂದರೆಯಿಲ್ಲ. ಒಟ್ಟಾರೆ ಜೀವನ ಸಾಗಿಸಲು ಆರ್ಥಿಕ ಪರಿಸ್ಥಿತಿ ಕಷ್ಟಕರವಾಗಿದೆ ಎಂಬುದು ಕುಂಬಾರರ ಅಳಲು.ಕುಂಬಾರರಿಗೆ ಮಡಿಕೆ ಮಣ್ಣು ಹದಗೊಳಿಸಲು ಸೂಕ್ತ ಸ್ಥಳಾವಕಾಶ, ಆಧುನಿಕ ಸಲಕರಣೆ ಮತ್ತು ಮಡಿಕೆ ಬೇಯಿಸಲು ತಂತ್ರಜ್ಞಾನದ ಗೂಡು, ಮಣ್ಣು ಶೇಖರಣೆಗೆ ಗೋದಾಮು ಹಾಗೂ ಸರ್ಕಾರದಿಂದ ಸಹಾಯ ಧನ, ಪ್ರೋತ್ಸಾಹ ಧನದ ಜೊತೆಗೆ ಅಗತ್ಯ ಆರ್ಥಿಕ ನೆರವು ಒದಗಿಸಿಕೊಟ್ಟರೆ, ವರ್ಷದ ಎಲ್ಲ ದಿನಗಳಲ್ಲಿರೂ ಮಡಿಕೆ ಕಾಯಕದಲ್ಲಿ ತೊಡಗಿ ಸಿಕೊಳ್ಳ ಬಹುದಾಗಿದೆ.ಹತ್ತಾರು ಜನರಿಗೆ ಉದ್ಯೋಗವನ್ನು ನೀಡಿ ತಮ್ಮ ಜೀವನ ಮಟ್ಟವನ್ನು ಸಹ ಸುಧಾರಿಸಿಕೊಂಡು ನೆಮ್ಮದಿಯಾಗಿ ಬದುಕಬಹುದೆಂಬುದು ಕುಂಬಾರ ಸಮೂಹದ ಅಭಿಮತ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.