ಗುರುವಾರ , ಜನವರಿ 30, 2020
19 °C
22ರಂದು ಮತದಾನ, 24ರಂದು ಮತ ಎಣಿಕೆ

ಮಡಿಕೇರಿ ನಗರಸಭೆ ಚುನಾವಣೆಗೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಇಲ್ಲಿಯ ನಗರಸಭೆಗೆ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ಸಿದ್ಧತೆಗಳನ್ನು ನಗರಸಭೆ ಆಯುಕ್ತ ಶಶಿಕುಮಾರ್‌ ಬುಧವಾರ ವೀಕ್ಷಿಸಿದರು.ಅನವಶ್ಯಕ ಜನರ ಓಡಾಟವನ್ನು ನಿಯಂತ್ರಿಸಲು ನಗರಸಭೆ ಕಚೇರಿ ಸುತ್ತಮುತ್ತ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ನಗರಸಭೆ ಕಚೇರಿ ಪಕ್ಕದ ಕಾವೇರಿ ಕಲಾಕ್ಷೇತ್ರದ ಬಳಿಯ ಕಟ್ಟಡದಲ್ಲಿ ನಾಮಪತ್ರ ಸ್ವೀಕಾರ ಕೇಂದ್ರವನ್ನು ತೆರೆಯಲಾಗಿದೆ. ಮೊದಲ ದಿನವಾದ ಬುಧವಾರ ಯಾವುದೇ ನಾಮಪತ್ರಗಳು ಸಲ್ಲಿಕೆಯಾಗಿಲ್ಲ.ಡಿ.22 ಮತದಾನ

ಮಡಿಕೇರಿ ನಗರಸಭೆಗೆ ಚುನಾವಣಾ ಪ್ರಕ್ರಿಯೆ ಡಿಸೆಂಬರ್ 4 ರಿಂದ ಆರಂಭವಾಗಿದ್ದು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯಾದ ಅನುರಾಗ್ ತಿವಾರಿ ಅವರು ಚುನಾವಣಾ ಪ್ರಕ್ರಿಯೆ ಘೋಷಣೆ ಮಾಡಿದ್ದಾರೆ.  ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು, ಡಿಸೆಂಬರ್ 11 ರವರೆಗೆ ಸಲ್ಲಿಸಲು ಅವಕಾಶವಿದೆ. ಡಿಸೆಂಬರ್ 12ರಂದು ನಾಮಪತ್ರ ಪರಿಶೀಲನೆ. ಡಿಸೆಂಬರ್ 14ರಂದು ನಾಮಪತ್ರ ವಾಪಾಸ್ಸು ಪಡೆಯಲು ಕೊನೆ ದಿನ. ಡಿಸೆಂಬರ್  20ರಂದು ಬಹಿರಂಗ ಪ್ರಚಾರ ಅಂತ್ಯ. ಡಿಸೆಂಬರ್  22ರಂದು ಮತದಾನವು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ.  ಡಿಸೆಂಬರ್  24 ರಂದು ಮತ ಎಣಿಕೆಯು ಬೆಳಗ್ಗೆ 8 ಗಂಟೆಯಿಂದ ನಗರ ಸಭೆ ವ್ಯಾಪ್ತಿಯಲ್ಲಿ ನಡೆಯಲಿದೆ.ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಒಟ್ಟು 33,381 ಜನಸಂಖ್ಯೆಯಿದ್ದು, 16,423 ಪುರುಷರು ಮತ್ತು 16,958 ಮಹಿಳೆಯರಿದ್ದಾರೆ. ಇವರಲ್ಲಿ 3,344 ಅನುಸೂಚಿತ ಜಾತಿ ಜನಸಂಖ್ಯೆಯಿದ್ದು, 1643 ಪುರುಷರು ಮತ್ತು 1701 ಮಹಿಳೆಯರಿದ್ದಾರೆ. ಅನುಸೂಚಿತ ಪಂಗಡದಲ್ಲಿ 633  ಜನಸಂಖ್ಯೆಯಲ್ಲಿ ಇದ್ದು, 308 ಪುರುಷರು, 325 ಮಹಿಳೆಯರಿದ್ದಾರೆ. ಒಟ್ಟಾರೆ ನಗರಸಭೆ ವ್ಯಾಪ್ತಿಯಲ್ಲಿ 24,325 ಮತದಾರರಿದ್ದು, 11,934 ಪುರುಷರು ಮತ್ತು 12,391 ಮಹಿಳಾ ಮತದಾರರಿದ್ದಾರೆ.ಒಟ್ಟು 28 ಮತಗಟ್ಟೆಗಳನ್ನು ಗುರುತಿಸಲಾಗಿದ್ದು, 23 ವಾರ್ಡ್‌ಗಳಿಗೆ ಇಬ್ಬರು ಚುನಾವಣಾಧಿಕಾರಿಗಳು ಮತ್ತು ಇಬ್ಬರು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. 1 ರಿಂದ 11 ನೇ ವಾರ್ಡ್‌ಗೆ ಸಹಕಾರ ಇಲಾಖೆಯ ಸಹಕಾರ ಸಂಘಗಳ ಉಪನಿಬಂಧಕರಾದ ಎಸ್.ಶ್ರೀಧರ್ ಅವರು ಚುನಾವಣಾಧಿಕಾರಿಯಾಗಿ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜಯಲಕ್ಷ್ಮಿ ಬಾಯಿ ಅವರು ಕಾರ್ಯ ನಿರ್ವಹಿಸಲಿದ್ದಾರೆ. ಹಾಗೆಯೇ 12 ರಿಂದ 23ನೇ ವಾರ್ಡ್‌ಗೆ  ಚುನಾವಣಾಧಿಕಾರಿಯಾಗಿ ಜಿಲ್ಲಾ ಜಲಾನಯನ ಇಲಾಖೆ ಉಪ ನಿರ್ದೇಶಕರಾದ ತಿರುಮಲೇಶ್, ಸಹಾಯಕ ಚುನಾವಣಾಧಿಕಾರಿಯಾಗಿ ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಪ್ರಮೋದ್ ಕಾರ್ಯ ನಿರ್ವಹಿಸಲಿದ್ದಾರೆ.ನಗರಸಭಾ ವ್ಯಾಪ್ತಿಯಲ್ಲಿ 28 ಮತಗಟ್ಟೆಗಳಲ್ಲಿ 3 ಅತೀ ಸೂಕ್ಷ್ಮ, 2 ಸೂಕ್ಷ್ಮ ಮತ್ತು 23 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ ಸಂತ ಮೈಕಲರ ಪ್ರೌಢಶಾಲೆಯ ಮತಗಟ್ಟೆಯಲ್ಲಿ 1263 ಮತದಾರರನ್ನು ಹೊಂದಿದ್ದು, ಅತೀ ಹೆಚ್ಚು ಮತದಾರರನ್ನು ಹೊಂದಿರುವ ಮತಗಟ್ಟೆಯಾಗಿದೆ. ಹಾಗೆಯೇ ತಾಲ್ಲೂಕು ಪಂಚಾಯಿತಿ ಕಚೇರಿ ಕಟ್ಟಡದಲ್ಲಿನ ಮತಗಟ್ಟೆಯಲ್ಲಿ 465 ಮತದಾರರ ಸಂಖ್ಯೆ ಹೊಂದಿದ್ದು, ಅತೀ ಕಡಿಮೆ ಮತದಾರರನ್ನು ಹೊಂದಿದೆ. ನಗರಸಭೆ ವ್ಯಾಪ್ತಿಯ 23 ವಾರ್ಡ್‌ಗಳಲ್ಲಿ 28 ಮತಗಟ್ಟೆಗಳನ್ನು ಗುರುತಿಸಲಾಗಿದ್ದು, 28 ಮತಗಟ್ಟೆಗಳಿಗೆ 30 ಪಿಆರ್ಓ, 30 ಎಪಿಆರ್ಓ, 60 ಪೋಲಿಂಗ್ ಅಧಿಕಾರಿಗಳಂತೆ ಒಟ್ಟು 120 ಮಂದಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ಪ್ರತಿಕ್ರಿಯಿಸಿ (+)