ಮಡಿಕೇರಿ ನಗರೀಕರಣ ವಿಸ್ತರಣೆಗೆ ಮುಡಾ ಯೋಜನೆ

7

ಮಡಿಕೇರಿ ನಗರೀಕರಣ ವಿಸ್ತರಣೆಗೆ ಮುಡಾ ಯೋಜನೆ

Published:
Updated:

ಮಡಿಕೇರಿ: ಮಡಿಕೇರಿ ನಗರದ ಒಟ್ಟು 9347 ಹೆಕ್ಟೇರ್ ಪ್ರದೇಶದ ಪೈಕಿ 1337 ಹೆಕ್ಟೇರ್ ಪ್ರದೇಶದಲ್ಲಿ ನಗರೀಕರಣ ಬೆಳೆಸಲು ನಗರಾಭಿವೃದ್ಧಿ ಪ್ರಾಧಿಕಾರವು (ಮುಡಾ) ರೂಪಿಸಿದ ಮಹಾಯೋಜನೆಗೆ ಸರ್ಕಾರ ತಾತ್ಕಾಲಿಕ ಅನುಮೋದನೆ ನೀಡಿದೆ.ಇಲ್ಲಿನ ಪ್ರಾಧಿಕಾರದ ಕಚೇರಿಯಲ್ಲಿ ಸೋಮವಾರ ಮುಡಾ ಅಧ್ಯಕ್ಷ ಸಜಿಲ್ ಕೃಷ್ಣ ಪತ್ರಕರ್ತರಿಗೆ ಈ ವಿಷಯ ತಿಳಿಸಿದರು.2001ರ ಜನಗಣತಿಯಂತೆ ಮಡಿಕೇರಿ ಪಟ್ಟಣದ ಜನಸಂಖ್ಯೆ 32,496 ಇದ್ದು, ಮುಂದಿನ 2021ಕ್ಕೆ 50,000 ಆಗಬಹುದೆಂದು ಅಂದಾಜಿಸಿ, ಈ ಜನಸಂಖ್ಯೆಗೆ ಅನುಗುಣವಾಗಿ ನಗರೀಕರಣದ ಈ ಮಹಾಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದರು.ಪ್ರಸ್ತಾವಿತ 1,337 ಹೆಕ್ಟೇರ್ ಪ್ರದೇಶದಲ್ಲಿ ವಸತಿಗೆ 716.06 ಹೆಕ್ಟೇರ್ (ಶೇ.53.53), ವಾಣಿಜ್ಯಕ್ಕೆ 65.06 ಹೆಕ್ಟೇರ್ (ಶೇ. 4.86), ಕೈಗಾರಿಕೆಗೆ 1.69 ಹೆಕ್ಟೇರ್ (ಶೇ.0.13), ಸಾರ್ವಜನಿಕ, ಅರೆ ಸಾರ್ವಜನಿಕ ಉಪಯೋಗಕ್ಕಾಗಿ 84.36 ಹೆಕ್ಟೇರ್ (ಶೇ. 6.31), ಉದ್ಯಾನವನ ಮತ್ತು ಬಯಲು ಜಾಗಕ್ಕಾಗಿ 171.92 ಹೆಕ್ಟೇರ್ (ಶೇ.12.85), ಸಾರಿಗೆ ಮತ್ತು ಸಂಪರ್ಕಕ್ಕಾಗಿ 121.01 ಹೆಕ್ಟೇರ್ (ಶೇ.9.05),ನಾಗರೀಕ ಸೌಲಭ್ಯಕ್ಕಾಗಿ 4.59 ಹೆಕ್ಟೇರ್ (ಶೇ. 0.34), ವ್ಯವಸಾಯಕ್ಕಾಗಿ 166.33 ಹೆಕ್ಟೇರ್ (ಶೇ.12.43) ಮತ್ತು ಜಲಾವೃತ ಪ್ರದೇಶಕ್ಕೆ 6.73 ಹೆಕ್ಟೇರ್ (ಶೇ. 0.50) ವಿಸ್ತೀರ್ಣವನ್ನು ನಿಗದಿಪಡಿಸಲಾಗಿದೆ ಎಂದರು.1997ರಲ್ಲಿ 633 ಹೆಕ್ಟೇರ್ ಪ್ರದೇಶದಲ್ಲಿ ನಗರೀಕರಣಗೊಳಿಸಲಾಗಿತ್ತು. ಅದಾದ ನಂತರ ಈ ವರ್ಷವೇ ಇಂತಹ ಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದರು.

`ತಕರಾರು ಇದ್ದರೆ ಅರ್ಜಿ ಸಲ್ಲಿಸಿ~

ಮಡಿಕೇರಿ ಪಟ್ಟಣದ ಸ್ಥಳೀಯ ಯೋಜನಾ ಪ್ರದೇಶದ 9347 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ, ಪೈಸಾರಿ ಹಾಗೂ ಅರಣ್ಯಕ್ಕೆ ಸಂಬಂಧಿಸಿದ ಜಾಗವಿದೆ. ಪೈಸಾರಿ ಹಾಗೂ ಕೃಷಿ ಭೂಮಿಯನ್ನು ಮಾತ್ರ ಬಳಸಿಕೊಂಡು 1337 ಹೆಕ್ಟೇರ್ ಪ್ರದೇಶದಲ್ಲಿ ನಗರೀಕರಣ ಮಾಡಲು ಮುಡಾ ಉದ್ದೇಶಿಸಿದೆ ಎಂದು ಆಯುಕ್ತ ಅಶಾದ್ ಉರ್ ರೆಹಮಾನ್ ಷರೀಫ್ ಹೇಳಿದರು.ಜನವಸತಿ ಪ್ರದೇಶ ನಿರ್ಮಿಸಲು ಮಡಿಕೇರಿಯ ರೋಶನಾರ್ ಕೆರೆ ಹಿಂಭಾಗ, ಗಾಳಿಬೀಡು ರಸ್ತೆ ಹಾಗೂ ಇತರೆಡೆ ಜಾಗವನ್ನು ಗುರುತಿಸಲಾಗಿದೆ. ಕೈಗಾರಿಕೆಗಳ ಸ್ಥಾಪನೆಗೆ ಸೋಮವಾರಪೇಟೆ ಕಡೆ ಹೋಗುವ ಹೊರವಲಯದಲ್ಲಿ ಜಾಗವನ್ನು ಗುರುತಿಸಲಾಗಿದೆ. ಇದೇ ರೀತಿ ವಾಣಿಜ್ಯ ಬಳಕೆಗೆ, ಉದ್ಯಾನವನ ನಿರ್ಮಾಣಕ್ಕೆ ಹಾಗೂ ಇತರ ಉಪಯೋಗಕ್ಕಾಗಿ 1337 ಹೆಕ್ಟೇರ್ ಪ್ರದೇಶ ಗುರುತಿಸಲಾಗಿದೆ.ನಗರೀಕರಣದ ನಕ್ಷೆಯನ್ನು ಪ್ರಾಧಿಕಾರದ ಕಚೇರಿಯಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದು, ಸಾರ್ವಜನಿಕರು ವೀಕ್ಷಿಸಬಹುದಾಗಿದೆ. ಮುಡಾ ರೂಪಿಸಿರುವ ನಗರೀಕರಣದ ಈ ಯೋಜನೆ ಬಗ್ಗೆ ಸಲಹೆ ನೀಡಲು ಬಯಸುವವರು ಅಥವಾ ಆಕ್ಷೇಪ ವ್ಯಕ್ತಪಡಿಸಲು ಬಯಸುವ ಸಾರ್ವಜನಿಕರು ನಿಗದಿತ ಅರ್ಜಿಯಲ್ಲಿ 60 ದಿನಗಳೊಳಗಾಗಿ ಸಲ್ಲಿಸಬಹುದಾಗಿದೆ. ನಿಗದಿತ ಅರ್ಜಿಗೆ ರೂ 10 ಶುಲ್ಕವಿದ್ದು, ಪ್ರಾಧಿಕಾರದ ಕಚೇರಿಯಲ್ಲಿ ಪಡೆದುಕೊಳ್ಳಬಹುದಾಗಿದೆ.ಯೋಜನೆ ಕುರಿತಾದ ಮಾಹಿತಿಯು ಸಿ.ಡಿ.ಯಲ್ಲೂ ಲಭ್ಯ (ಶುಲ್ಕ ರೂ 2,000), ನಕ್ಷೆ ಪ್ರತಿಗೆ ರೂ 1,000 ಇದ್ದು, ಆಸಕ್ತರು ಪಡೆದುಕೊಳ್ಳಬಹುದಾಗಿದೆ. ಯೋಜನೆಯಲ್ಲಿ ಬದಲಾವಣೆ ಕೈಗೊಳ್ಳುವ ಬಗ್ಗೆ ಸಾರ್ವಜನಿಕರು ವ್ಯಕ್ತಪಡಿಸುವ ಅಭಿಪ್ರಾಯಗಳನ್ನು ಸರ್ಕಾರದ ಗಮನಕ್ಕೆ ತಂದು, ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.ಯೋಜನೆಗೆ ಒಳಪಡುವ ಗ್ರಾಮಗಳು

ಮಡಿಕೇರಿ ಸೇರಿದಂತೆ ಸುತ್ತಮುತ್ತಲಿನ ಒಂಬತ್ತು ಗ್ರಾಮ ಪಂಚಾಯಿತಿಗಳ ಅಲ್ಪಸ್ವಲ್ಪ ಪ್ರದೇಶವೂ ಮಡಿಕೇರಿ ಪಟ್ಟಣದ ಸ್ಥಳೀಯ ಯೋಜನಾ ಪ್ರದೇಶಕ್ಕೆ ಸೇರುತ್ತದೆ.ಯೋಜನಾ ಪ್ರದೇಶಕ್ಕೆ ಒಳಪಡುವ ಗ್ರಾಮಗಳು- ಕೆ.ನಿಡುಗಣೆ, ಕರ್ಣಂಗೇರಿ, ಕೆ.ಬಾಡಗ, ಮಕ್ಕಂದೂರು, ಹೆಬ್ಬೆಟಗೇರಿ, ಇಬ್ಬನಿಏಳವಾಡಿ, ಕಡಗದಾಳು, ಕಾಟಗೇರಿ, ಮದೆ ಗ್ರಾಮ ಪಂಚಾಯಿತಿಯ ಅಲ್ವಸ್ವಲ್ಪ ಪ್ರದೇಶಕ್ಕೆ ಇದಕ್ಕೆ ಒಳಪಡುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry