ಶುಕ್ರವಾರ, ಮೇ 14, 2021
35 °C

ಮಡಿಕೇರಿ ನೀರಿನ ಕರ, ಆಸ್ತಿ ತೆರಿಗೆ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ನಗರದ ನಾಗರಿಕರಿಗೆ ನೀರಿನ ತೆರಿಗೆ ಹಾಗೂ ಆಸ್ತಿ ತೆರಿಗೆಯನ್ನು ಪರಿಷ್ಕರಿಸಲಾಗಿದ್ದು, ಸೋಮವಾರ ಅಧ್ಯಕ್ಷ ಎಚ್.ಎಂ. ನಂದಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಈ ಕುರಿತು ಅಂಗೀಕರಿಸಲಾಯಿತು.ಗೃಹೋಪಯೋಗಕ್ಕೆ ಇದುವರೆಗೆ 45 ರೂಪಾಯಿಗಳಿದ್ದ ನೀರಿನ ತೆರಿಗೆಯನ್ನು ರೂ 120ಗೆ ಗೃಹೇತರ ಬಳಕೆಗೆ ಇದ್ದ 200 ರೂಪಾಯಿಯನ್ನು 240 ರೂಪಾಯಿಗೆ ಹಾಗೂ ವಾಣಿಜ್ಯ ಮತ್ತು ಕೈಗಾರಿಕೆ ಉದ್ದೇಶಗಳಿಗೆ ವಿಧಿಸ ಲಾಗುತ್ತಿದ್ದ ತೆರಿಗೆಯನ್ನು 600 ರೂಪಾಯಿಗಳಿಂದ 480 ರೂಪಾಯಿಗಳಿಗೆ ಇಳಿಸಲಾಗಿದೆ.ಸ್ವಯಂ ಆಸ್ತಿ ತೆರಿಗೆ ಪದ್ಧತಿಯಲ್ಲಿ ಚಾಲ್ತಿಯಲ್ಲಿರುವ ಆಸ್ತಿತೆರಿಗೆಯನ್ನು ಶೇ.15 ರಷ್ಟು ಪರಿಷ್ಕರಿಸುವಂತೆ ತೀರ್ಮಾನಿಸಲಾಯಿತು.ಪೌರಾಡಳಿತ ನಿರ್ದೇಶನಾಲಯದ ಪ್ರಕಾರ 5 ವರ್ಷಕ್ಕೊಮ್ಮೆ ಆಸ್ತಿ ತೆರಿಗೆ ದರವನ್ನು ಶೇ 15ರಿಂದ ಶೇ 30ರವರೆಗೆ ವಿವಿಧ ಕಟ್ಟಡ, ಪ್ರದೇಶ ಹಾಗೂ ಜಾಗಗಳಿಗೆ ಅನುಗುಣವಾಗಿ ಹೆಚ್ಚಿಸಲು ಆದೇಶವಿದ್ದರೂ  ಕನಿಷ್ಠ ಪ್ರಮಾಣದಲ್ಲಿ  (ಶೇ 15) ಹೆಚ್ಚಿಸಲು ನಗರಸಭೆ ನಿರ್ಧರಿಸಿದೆ. 20 ವರ್ಷಗಳಿಂದ ಕರ ಹೆಚ್ಚಿಸಿಲ್ಲ:

ಕುಂಡಾ ಮೇಸ್ತ್ರಿ ಯೋಜನೆ ಕಾರ್ಯಗತವಾದ ಬಳಿಕ ಕರ ಹೆಚ್ಚಿಸು ವುದು ಸೂಕ್ತವೆಂದು ಸದಸ್ಯರು ಸಲಹೆ ನೀಡಿದಾಗ, ಪ್ರತಿಕ್ರಿಯಿಸಿದ ಅಧ್ಯಕ್ಷ ನಂದಕುಮಾರ್ ಅವರು, ಕಳೆದ 20 ವರ್ಷಗಳಿಂದ ನೀರಿನ ಕರವನ್ನು ಹೆಚ್ಚಿಸಿಲ್ಲ. ಹಿಂದೊಮ್ಮೆ ಪ್ರಸ್ತಾಪ ವಾಗಿದ್ದರೂ ದರ ಏರಿಸಿಲ್ಲ ಎಂದು ಹೇಳಿದರು.ಜನರಿಗೆ ಮೂಲ ಸೌಕರ್ಯವನ್ನು ಒದಗಿಸಬೇಕಾದರೆ ತೆರಿಗೆ ಹೆಚ್ಚಿಸ ಬೇಕಾಗುತ್ತದೆ. ಜತೆಗೆ ದರ ಪರಿಷ್ಕರಣೆ ಮಾಡುವ ಬಗ್ಗೆ ಸರಕಾರವೇ ಸೂಚಿಸಿರುವುದರಿಂದ ಅನಿವಾರ್ಯ ವಾಗಿ ತೆರಿಗೆಯನ್ನು ಹೆಚ್ಚಿಸಬೇಕಾಗಿದೆ ಎಂದರು. ಜತೆಗೆ ಸಿಬ್ಬಂದಿ ಕೊರತೆ ಇರುವುದರಿಂದ ಹೊರಗುತ್ತಿಗೆ ಆಧಾರದಲ್ಲಿ 12 ಮಂದಿಯ ನೇಮಕವೂ ನಡೆಯಬೇಕಾಗಿದೆ ಎಂದರು.ಈ ಸಂದರ್ಭದಲ್ಲಿ ಮಾತನಾಡಿದ ಆಯುಕ್ತ ಶಶಿಕುಮಾರ್, ಪ್ರತಿ ಮೂರು ವರ್ಷಗಳಿಗೊಮ್ಮೆ ನೀರಿನ ನಿರ್ವಹಣೆ, ದುರಸ್ತಿ ಹಾಗೂ ಸೇವಾ ಶುಲ್ಕಗಳನ್ನು ವಿಧಿಸಬೇಕೆಂದು ಸರಕಾರ ರಾಜ್ಯಾದ್ಯಂತ ರೂಪಿಸಿರುವ ನೀತಿಯಾಗಿರುವುದರಿಂದ ಅನಿವಾರ್ಯವಾಗಿ ಈ ಕರವನ್ನು ಹೆಚ್ಚಿಸಬೇಕಾಗಿದೆ. ಜತೆಗೆ ನಗರಸಭೆಯಿಂದ ಜಲಮಂಡಳಿಗೂ ಶುಲ್ಕವನ್ನು ಪಾವತಿಸಬೇಕಿದೆ ಎಂದರು.300 ಮನೆಗಳಿಗೆ ಅವಕಾಶ: ರಾಜೀವ್‌ಗಾಂಧಿ ವಸತಿ ಯೋಜನೆಯ ನೋಡಲ್ ಅಧಿಕಾರಿ ನರಸಿಂಹ ಮಾತನಾಡಿ, 1.30 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಾಜಪೇಯಿ ವಸತಿ ನಿರ್ಮಾಣ ಯೋಜನೆಗೆ ಸಂಬಂಧಪಟ್ಟಂತೆ 300 ಮನೆಗಳನ್ನು ಅವಕಾಶವಿದ್ದು, ಈಗಾ ಗಲೇ 84 ಮಂದಿ ಮುಂದೆ ಬಂದಿದ್ದಾರೆ ಎಂದು ತಿಳಿಸಿದರು.ವಾರ್ಷಿಕ ರೂ 87,600ಗಳ ವರಮಾನವಿರುವ ನಿವೇಶನ ಹಕ್ಕುಪತ್ರ ಹೊಂದಿರುವವರು ಹಾಗೂ ನಿವೇಶನ ರಹಿತರೂ ಈ ಯೋಜನೆಯ ಲಾಭ ಪಡೆಯಬಹುದೆಂದು ವಿವರಿಸಿದರು. ಸದಸ್ಯರು ತಾವು ನೀಡುವ ಕಡುಬಡ ಫಲಾನುಭವಿಗಳನ್ನು ಪರಿಗಣಿಸುವಂತೆ ಈ ಸಂದರ್ಭದಲ್ಲಿ ಸಲಹೆ ನೀಡಿದರು.ಬ್ಯಾಂಕ್ ಸಾಲ ಪಡೆಯುವಲ್ಲಿ ತೊಡಕುಗಳಿರುವ ಬಗ್ಗೆ ಸದಸ್ಯರು ಗಮನ ಸೆಳೆದಾಗ, ಈ ಯೋಜನೆಗೆ ಸಾಲ ನೀಡುವುದು ಕೂಡ ಸರಕಾರದ ಕಾರ್ಯಕ್ರಮದ ಒಂದು ಭಾಗವೇ ಆಗಿದೆ. ಹೀಗಿರುವಲ್ಲಿ ತಮಗೆ ತಿಳಿಸಿದಲ್ಲಿ ಈ ತೊಡಕನ್ನು ನಿವಾರಿಸುವುದಾಗಿ ನರಸಿಂಹ ತಿಳಿಸಿದರು.ನಗರದಲ್ಲಿ ರೂ 62.20 ಕೋಟಿ ವೆಚ್ಚದಲ್ಲಿ ಉದ್ದೇಶಿಸಿರುವ ಒಳಚರಂಡಿ ನಿರ್ಮಾಣ ಯೋಜನೆಗೆ ಸಂಬಂಧಪಟ್ಟಂತೆ ಗಾಲ್ಫ್‌ಗ್ರೌಂಡ್ ಬಳಿ ಸ್ಥಳ ಗುರುತಿಸಿರುವ ಬಗ್ಗೆ ಚರ್ಚೆ ನಡೆದು ಸಭೆ ಯೋಜನೆ ಕಾರ್ಯಗತಕ್ಕೆ ಮುದ್ರೆಯೊತ್ತಿತು.ನೂತನ ಮಾರುಕಟ್ಟೆ ನಿರ್ಮಾಣ: ಸಭೆಯಲ್ಲಿ 2.90 ಕೋಟಿ ರೂ. ವೆಚ್ಚದ ನೂತನ ಮಾರುಕಟ್ಟೆಗೆ ಸಂಬಂಧಿಸಿದ ನೀಲ ನಕಾಶೆಯ ಬಗ್ಗೆ ತಿಳಿಸಿದ ಅಧಿಕಾರಿಗಳು ವೀಡಿಯೋ ಪ್ರದರ್ಶನದ ಮೂಲಕ ವಿವರವಾದ ಮಾಹಿತಿಯನ್ನು ನೀಡಿದರು.ಸಭೆಯಲ್ಲಿ ನಡೆದ ಚರ್ಚೆಯಲ್ಲಿ ಸದಸ್ಯರಾದ ಅಬ್ದುಲ್ ರಜಾಕ್, ಎ.ಸಿ.ದೇವಯ್ಯ, ಮುನೀರ್ ಆಹಮ್ಮದ್, ಪ್ರದೀಪ್, ಬೇಬಿಮ್ಯೋಥ್ಯು, ರಮೇಶ್, ಉಣ್ಣಿಕೃಷ್ಣ, ಮಾಜಿ ಅಧ್ಯಕ್ಷ ಪಿ.ಡಿ.ಪೊನ್ನಪ್ಪ ಮತ್ತಿತರರು ಭಾಗವಹಿಸಿದ್ದರು.  ಉಪಾಧ್ಯಕ್ಷೆ ವಸಂತ ಕೇಶವ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.