ಸೋಮವಾರ, ಆಗಸ್ಟ್ 3, 2020
24 °C

ಮಡಿವಾಳ ಸಂತೆಯ ಹೂಕೋಸೂ ಹೂವೂ

ರಮೇಶ ಕೆ. Updated:

ಅಕ್ಷರ ಗಾತ್ರ : | |

ಮಡಿವಾಳ ಸಂತೆಯ ಹೂಕೋಸೂ ಹೂವೂ

ವಾರಪೂರ್ತಿ ಕೆಲಸ ಮಾಡಿ, ರಜೆ ದಿನವಾದ ಭಾನುವಾರವೂ ಬ್ಯುಸಿಯಾಗಿದ್ದ ಖಾಸಗಿ ಕಂಪೆನಿ ಉದ್ಯೋಗಿಯೊಬ್ಬರು ಮನೆಗೆ ಸುದ್ದಿಪತ್ರಿಕೆ ಬರುವ ಮುಂಚೆಯೇ ತರಕಾರಿ ಕೊಳ್ಳಲು ಬಂದಿದ್ದರು. ಕಾರನ್ನು ರಸ್ತೆಬದಿ ನಿಲ್ಲಿಸಿ, ಕೈಚೀಲದೊಂದಿಗೆ ಸಂತೆಯೊಳಗೆ ಪ್ರವೇಶಿಸಿದ ಅವರು ಎರಡು ಹೂಕೋಸುಗಳನ್ನು ಕೊಂಡು ಮುಂದಿನ ಅಂಗಡಿಗೆ ಹೆಜ್ಜೆ ಇಟ್ಟರು.ಬಿಗ್ ಬಜಾರ್, ಫೋರಂ ಮಾಲ್, ಟೋಟಲ್ ಮಾಲ್ ಹಾಗೂ ರಿಲಾಯನ್ಸ್ ಫ್ರೆಶ್‌ನಂಥ ಬಹುರಾಷ್ಟ್ರೀಯ ಕಂಪೆನಿಗಳ ಮಾಲ್‌ಗಳು ಇದ್ದರೂ ಸಿಲಿಕಾನ್‌ಸಿಟಿ ಮಂದಿಗೆ ಇಂದಿಗೂ ಸಂಪ್ರದಾಯವಾಗಿ ನಡೆದುಕೊಂಡು ಬರುತ್ತಿರುವ ಸಂತೆಯೇ ವ್ಯಾಪಾರ ತಾಣವಾಗಿದೆ.

ಸುಮಾರು ನಲವತ್ತು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಮಡಿವಾಳದ ಸಂತೆ ಇಂದಿಗೂ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಇಲ್ಲಿಗೆ ಬಂದು ಕೊಳ್ಳುವವರ ಸಂಖ್ಯೆ ಕೂಡ ದಿನೇದಿನೇ ಹೆಚ್ಚಾಗುತ್ತಿದೆ.ಈಗ ತಲೆ ಎತ್ತಿರುವ ಟೋಟಲ್ ಮಾಲ್ ಜಾಗದಲ್ಲಿ ನಲವತ್ತು ವರ್ಷಗಳ ಹಿಂದೆ ಮಡಿವಾಳ ಸಂತೆ ಜೋರಾಗಿಯೇ ನಡೆಯುತ್ತಿತ್ತು. ಗುರುವಾರ ನಡೆಯುತ್ತಿದ್ದ ಸಂತೆಗೆ ವ್ಯಾಪಾರಿಗಳಿಂದ ಪಾಲಿಕೆಯವರು ಸುಂಕವನ್ನೂ ಕಟ್ಟಿಸಿಕೊಳ್ಳುತ್ತಿದ್ದರು. ಟೋಟಲ್ ಮಾಲ್ ಕಟ್ಟುವ ಉದ್ದೇಶದಿಂದ ಸಂತೆಯನ್ನು ಪೊಲೀಸ್ ಠಾಣೆ ಎದುರಿನ ರಸ್ತೆಗೆ ಸ್ಥಳಾಂತರಿಸಲಾಯಿತು.ಅಲ್ಲಿಯೂ ಐದು ವರ್ಷ ಸಂತೆ ವಹಿವಾಟು ನಡೆಯಿತು. ನಗರ ಬೆಳೆದಂತೆ, ವಾಹನಗಳ ಸಂಖ್ಯೆ ಹೆಚ್ಚಾದಂತೆ ಸಂಚಾರ ಸಮಸ್ಯೆ ತಪ್ಪಿಸುವ ಉದ್ದೇಶದಿಂದ ಅಲ್ಲಿಂದ ಪೊಲೀಸ್ ಠಾಣೆ ಪಕ್ಕದ ರಸ್ತೆ ಬದಿಗೆ ಸಂತೆ ಶಿಫ್ಟಾಯಿತು. ಗುರುವಾರದ ಸಂತೆ ಭಾನುವಾರ ನಡೆಯತೊಡಗಿತು. ಈ ಬದಲಾವಣೆಯಾಗಿ 15 ವರ್ಷವಾಗಿವೆ. ಮೂವತ್ತು ವರ್ಷಗಳಿಂದ ತರಕಾರಿ ವ್ಯಾಪಾರ ಮಾಡುತ್ತಿರುವ ನಾರಾಯಣಮ್ಮ ಮಡಿವಾಳ ಸಂತೆಯ ಹಳೆಯ ಕಾಲದ ಜೊತೆಜೊತೆಗೇ ಈ ಸಂದರ್ಭವನ್ನೂ ಮೆಲುಕು ಹಾಕುತ್ತಾರೆ. ಈ ಪ್ರದೇಶವನ್ನು ಸಂತೆ ಮೈದಾನ ಎಂದೇ ಕರೆಯುವುದು ಕೂಡ ಅವರ ಪಾಲಿಗೆ ಬೆರಗು.ಜಯನಗರ, ಬೊಮ್ಮನಹಳ್ಳಿ, ಕೋನಪ್ಪನ ಅಗ್ರಹಾರ, ರೂಪೇನ ಅಗ್ರಹಾರ, ಗಾರೇಪಾಳ್ಯ, ಕೋರಮಂಗಲ, ಎಚ್.ಎಸ್.ಆರ್. ಬಡಾವಣೆಗಳಿಂದಲೂ ಮಂದಿ ತರಕಾರಿ ಸೇರಿದಂತೆ ಇನ್ನಿತರೆ ಅಗತ್ಯ ವಸ್ತಗಳನ್ನು ಕೊಳ್ಳಲು ಮಡಿವಾಳ ಸಂತೆಗೆ ಬರುತ್ತಾರೆ. ಅಕ್ಕಿ, ಬೇಳೆ, ತೆಂಗಿನಕಾಯಿ, ಹಣ್ಣು ಹೂವು ಎಲ್ಲವೂ ಇಲ್ಲಿ ದೊರೆಯುತ್ತವೆ. ಸಂತೆಯ ಒಳಹೋದರೆ ಸಾಕು ವಾರಕ್ಕಾಗುವಷ್ಟು ತರಕಾರಿ ಇತ್ಯಾದಿ ಅಗತ್ಯ ಪದಾರ್ಥಗಳನ್ನು ಕೊಳ್ಳಬಹುದು.ನಲವತ್ತು ವರ್ಷಗಳ ಹಿಂದೆ ಕನಕಪುರದಿಂದ ಮಡಿವಾಳಕ್ಕೆ ಬಂದ ನಾರಾಯಣಮ್ಮ ತರಕಾರಿ ವ್ಯಾಪಾರ ಮಾಡಿಯೇ ಜೀವನ ಕಂಡುಕೊಂಡವರು. ಲಾಭ, ನಷ್ಟದ ತಕ್ಕಡಿಯ ಏರಿಳಿತ ಕಂಡವರು. `ಇಲ್ಲಿ ಜೋರಾಗಿದ್ದರೇ ವ್ಯಾಪಾರ ಮಾಡಲು ಸಾಧ್ಯ. ಇಲ್ಲವಾದರೆ ಹೆಂಗಸರು ವ್ಯಾಪಾರ ಮಾಡಲು ಸಾಧ್ಯವಿಲ್ಲ~ ಎನ್ನುವ ನಾರಾಯಣಮ್ಮ ಭಾನುವಾರ ಸುಮಾರು ಇಪ್ಪತ್ತು ಸಾವಿರ ವ್ಯಾಪಾರ ಮಾಡುತ್ತಾರೆ.

 

ಕೆ.ಆರ್.ಮಾರುಕಟ್ಟೆಯಿಂದ ಲೋಡ್‌ಗಟ್ಟಲೆ ಬರುವ ಹೂಕೋಸನ್ನು ಖರೀದಿಸಿ, ಸಗಟು ವ್ಯಾಪಾರಿಗಳಿಗೆ ಅವರು ಮಾರುತ್ತಾರೆ. ಒಂದೆರಡು ಹೂಕೋಸು ಕೇಳುವವರಿಗೂ ಅವರು ಇಲ್ಲವೆನ್ನುವುದಿಲ್ಲ.`ಗೋಬಿ ಮಂಚೂರಿ ಗಾಡಿಗಳ ಮಾಲೀಕರು, ಹೋಟೆಲ್ ನಡೆಸುವವರು ಹೆಚ್ಚಾಗಿ ಇಲ್ಲಿ ಹೂಕೋಸನ್ನು ಕೊಳ್ಳುತ್ತಾರೆ. ಪ್ರತಿವಾರ ಬರುವ ಗ್ರಾಹಕರಲ್ಲಿ ಕೆಲವರು ಆತ್ಮೀಯರಾಗುವಷ್ಟು ಸ್ನೇಹಿತರಾಗಿದ್ದಾರೆ. ಮತ್ತೆ ಕೆಲವರ ಮುಖಗಳಷ್ಟೇ ಪರಿಚಿತ. ಹೆಸರು ಕೇಳುವ ಉಸಾಬರಿಗೆ ಹೋಗೋದಿಲ್ಲ~ ಎನ್ನುತ್ತಾ ನಾರಾಯಣಮ್ಮ ಹೂಕೋಸಿನ ಎಲೆಯನ್ನು ಕತ್ತರಿಸಲು ಮುಂದಾದರು.ಆನೇಕಲ್, ಬನಶಂಕರಿ, ವೈಟ್‌ಫೀಲ್ಡ್, ಹೊಸಕೋಟೆ, ಚಿಕ್ಕಬಾಣಾವರದಿಂದ ಹೂಕೋಸನ್ನು ರೈತರು ಮಾರುಕಟ್ಟೆಗೆ ತರುತ್ತಾರೆ. ಮುಂಜಾನೆ ನಾಲ್ಕರಿಂದಲೇ ಚಾಲನೆಯಾಗುವ ಸಂತೆ ರಾತ್ರಿ 9ರವರೆಗೂ ನಡೆಯುತ್ತದೆ. ಸರ್ಕಾರಿ ನೌಕರಿಯಲ್ಲಿರುವ ಜ್ಯೋತಿ ಎರಡು ವರ್ಷದಿಂದ ಸಂತೆಗೆ ಬರುತ್ತಿದ್ದಾರೆ. ಪಕ್ಕದಲ್ಲೇ ಮಾಲ್‌ಗಳಿದ್ದರೂ ಸಂತೆಗೆ ಬರಲು ಅವರು ಅನೇಕ ಕಾರಣಗಳನ್ನು ನೀಡುತ್ತಾರೆ. ಅವರೇ ಹೇಳುವಂತೆ ರೈತರು ಬೆಳೆದ ತಾಜಾ ತರಕಾರಿ ಇಲ್ಲಿ ಸಿಗುತ್ತದೆ. ಜೊತೆಗೆ ಚೌಕಾಸಿ ಮಾಡಲೂ ಇಲ್ಲಿ ಅವಕಾಶವಿದೆ.ಮಡಿವಾಳ ಸಂತೆಗೆ ತಮಿಳುನಾಡಿನಿಂದ ಕನಕಾಂಬರ, ಕೆಂಪು, ಹಳದಿ, ನಸುಗೆಂಪು ಗುಲಾಬಿ ಹಾಗೂ ಸೇವಂತಿಗೆ ಹೂವು ಬರುತ್ತವೆ. `ನಾವು 300ರಿಂದ 350 ಮಾರು ಹೂವನ್ನು ಖರೀದಿಸಿ ಮಾರುತ್ತೇವೆ. ಒಂದು ಮಾರಿಗೆ ಎರಡು ರೂಪಾಯಿ ಲಾಭ ಬರುತ್ತದೆ~ ಎನ್ನುತ್ತಾರೆ ಹತ್ತು ವರ್ಷದಿಂದ ಹೂವಿನ ವ್ಯಾಪಾರ ಮಾಡುತ್ತಿರುವ ಪರಮೇಶ್. ಒಮ್ಮಮ್ಮೆ ವ್ಯಾಪಾರವಾಗದೇ ಉಳಿದ ಹೂವನ್ನು ಕಸದ ತೊಟ್ಟಿಗೆ ಎಸೆದು ಹೋಗುತ್ತೇವೆ. ಆಗ ಬಂಡವಾಳವೂ ಮರಳಿ ಬರುವುದಿಲ್ಲವೆಂದು ಅಲವತ್ತುಕೊಳ್ಳುತ್ತಾರೆ ಅವರು.ಬಿ.ಟಿ.ಎಂ.ಬಡಾವಣೆಯ ಬಿ.ವಿ.ರಾವ್ ಹತ್ತು ವರ್ಷಗಳಿಂದ ಈ ಸಂತೆಗೆ ಬರುತ್ತಿದ್ದಾರೆ. `ಸಂತೆಯಲ್ಲಾದರೆ ತಾಜಾ ತರಕಾರಿ ಕೊಳ್ಳಬಹುದು ಹಾಗೂ ಬೃಹತ್ ಶಾಪಿಂಗ್‌ಮಾಲ್‌ಗಳಿಗೆ ಹೋಲಿಸಿದರೆ ಕಡಿಮೆ ಬೆಲೆ ಇರುತ್ತದೆ. ಜೊತೆಗೆ ರೈತರಿಂದಲೇ ಕೊಂಡುಕೊಳ್ಳಬಹುದು. ಹಾಗಾಗಿ ಸಂತೆಯಲ್ಲೇ ತರಕಾರಿ ಕೊಳ್ಳುತ್ತೇನೆ~ ಎನ್ನುವ ಅವರಿಗೆ ಇಲ್ಲಿನ ತರಕಾರಿಗಳ ಗುಣಮಟ್ಟದ ಬಗ್ಗೆ ಖಾತರಿ ಇದೆ.ಬಡತನ ರೇಖೆಗಿಂತ ಕೆಳಗಿನವರಿಂದ ಬಹುರಾಷ್ಟ್ರೀಯ ಕಂಪೆನಿ ಉದ್ಯೋಗಿಗಳವರೆಗೆ ಅನೇಕರು ಈ ಸಂತೆಯಲ್ಲಿ ತರಕಾರಿ ಖರೀದಿಸುತ್ತಾರೆ. ರಸ್ತೆಬದಿಯಲ್ಲಿ ಬಿದ್ದ ಕಸದ ರಾಶಿಯ ಬಗಲಲ್ಲೇ ತುತ್ತಿನಚೀಲ ತುಂಬಿಸಿಕೊಳ್ಳುವ ವ್ಯಾಪಾರಿಗಳ ಜೊತೆಗೆ ನಗುನಗುತ್ತಾ ಮಾತನಾಡುವ ಗ್ರಾಹಕರು ಮಾಲ್‌ಗಳ ಕಾಲದಲ್ಲೂ ಸಂತೆಗೆ ಇರುವ ಮಹತ್ವಕ್ಕೆ ಸಾಕ್ಷಿಯಂತೆ ಕಾಣುತ್ತಾರೆ.ಸ್ವಚ್ಛತೆ ಕಾಪಾಡಿ


ಕೃಪಾನಿಧಿ ಕಾಲೇಜಿನಿಂದ ಟೋಟಲ್ ಮಾಲ್‌ವರೆಗಿನ ರಸ್ತೆ ಬದಿಯವರೆಗೆ ಮಡಿವಾಳ ಸಂತೆ ನಡೆಯುತ್ತದೆ. ಲಕ್ಷಾಂತರ ರೂಪಾಯಿ ವಹಿವಾಟು ನಡೆಯುವ ಈ ಪ್ರದೇಶದಲ್ಲಿ ಸ್ವಚ್ಛತೆ ಎಂಬುದೇ ಮರೀಚಿಕೆ. ಕೊಳೆತ ತರಕಾರಿ, ಬಾಳೆಎಲೆ, ಈರುಳ್ಳಿ ಸಿಪ್ಪೆ, ಹೂಕೋಸಿನ ಎಲೆ ಹೀಗೆ ಸಂತೆಯ ತ್ಯಾಜ್ಯವೆಲ್ಲ ರಸ್ತೆಯ ಮೇಲೆ ತಿಪ್ಪೆ ರೀತಿ ರಾಶಿಬಿದ್ದಿರುತ್ತದೆ.ಮೂಗು ಮುಚ್ಚಿಕೊಂಡೇ ತರಕಾರಿ ಖರೀದಿಸುವ ಗ್ರಾಹಕರು ಮಾತ್ರ ಇದರ ದುರ್ವಾಸನೆಗೆ ಬಲಿಯಾಗಬೇಕಿದೆ. ಇದಕ್ಕೆ ಪರಿಹಾರ ಸಿಕ್ಕರೆ ಸಂತೆಯಲ್ಲಿ ವ್ಯಾಪಾರ ಇನ್ನೂ ಹಸನಾದೀತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.