ಮಡೆಸ್ನಾನ ಅನಿಷ್ಟ ಆಚರಣೆ: ಕುಲಪತಿ

7

ಮಡೆಸ್ನಾನ ಅನಿಷ್ಟ ಆಚರಣೆ: ಕುಲಪತಿ

Published:
Updated:

ತುಮಕೂರು: ಧರ್ಮ ಹಾಗೂ ಆಚರಣೆಗಳ ಹೆಸರಿನಲ್ಲಿ ಮುಗ್ದ ಗ್ರಾಮೀಣ ಜನರ ಹಾಗೂ ಅನಕ್ಷರಸ್ಥರ ಶೋಷಣೆ ನಡೆಯುತ್ತಿದೆ. ಇದಕ್ಕೆ ಮಡೆ­ಸ್ನಾನದಂಥ ಅನಿಷ್ಟ, ಅವೈಜ್ಞಾನಿಕ ಆಚರಣೆಯೇ ಸಾಕ್ಷಿ ಎಂದು ತುಮಕೂರು ವಿಶ್ವವಿದ್ಯಾಲನಿಲಯದ ಕುಲಪತಿ ಪ್ರೊ.ಎ.ಎಚ್‌.ರಾಜಾಸಾಬ್‌ ಇಲ್ಲಿ ಹೇಳಿದರು.ವಿಶ್ವವಿದ್ಯಾನಿಲಯದಲ್ಲಿ ಸೋಮವಾರ ವಿಜ್ಞಾನ ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆ, ಎನ್‌ಸಿಸಿ, ಎನ್‌ಎಸ್‌ಎಸ್‌ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.ಮೂಢನಂಬಿಕೆಗಳು ಎಲ್ಲ ಧರ್ಮಗಳಲ್ಲಿಯೂ ಇವೆ. ಇವುಗಳಿಂದ ದೇಶದ ಆರ್ಥಿಕ, ಸಾಮಾಜಿಕ ಸ್ಥಿತಿ ಹದಗೆಡುತ್ತಿರುವುದು ಅತ್ಯಂತ ನೋವಿನ ಸಂಗತಿ ಎಂದು ವಿಷಾದಿಸಿದರು.ಸಾಮಾನ್ಯ ವ್ಯಕ್ತಿ ಸೇರಿದಂತೆ ವಿಜ್ಞಾನಿಗಳು, ಧಾರ್ಮಿಕ ಮುಖಂಡರಲ್ಲಿಯೂ ಮೂಢಾ­ಚರಣೆ­ಗಳಿವೆ. ನಂಬಿಕೆಗಳು ಕೇವಲ ವೈಯಕ್ತಿಕವಾಗಿದ್ದರೆ ತೊಂದರೆ ಇಲ್ಲ. ಆದರೆ ಯಾವಾಗ ಸಮೂಹದ ಮೇಲೆ ಹೇರಲು ಯತ್ನಿಸುತ್ತಾರೋ ಆಗ ಸಮಾಜವು ಅಧೋಗತಿಗೆ ಇಳಿಯುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.ಅನಿಷ್ಟ ಪದ್ಧತಿಗಳು ಬಡ, ಶ್ರೀಮಂತ ದೇಶ­ಗ­ಳಾದ ಸೋಮಾಲಿಯಾ, ಅಮೆರಿಕವನ್ನೂ ಬಿಟ್ಟಿಲ್ಲ. ಸಮಾಜದಲ್ಲಿರುವ ಅನಾಚಾರ, ಕಂದಾಚಾರ ತೊಲಗಬೇಕಾದರೆ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಜಾಗೃತರಾಗಬೇಕು ಎಂದು ಸಲಹೆ ನೀಡಿದರು.ವಿಚಾರವಾದಿ ಹುಲಿಕಲ್‌ ನಟರಾಜ್‌ ಮಾತ­ನಾಡಿ, ಒಳ್ಳೆಯತನ, ಪರೋಪಕಾರಗಳೇ ಎಲ್ಲ ಧರ್ಮಗಳ ಮೂಲ ಆಶಯವಾಗಿದೆ. ಕತಾರ್‌ ದೇಶದಲ್ಲಿ ನಡೆಯಲಿರುವ ಒಂದು ಕಾರ್ಯ­ಕ್ರಮದಲ್ಲಿ ಮುಸ್ಲಿಂ ಧರ್ಮದ ಮೂಢನಂಬಿಕೆಗಳ ಬಗ್ಗೆ ‘ಪವಾಡ ಬಯಲು’ ಕಾರ್ಯಕ್ರಮ ನಡೆಸಿ­ಕೊಡಲಿದ್ದೇನೆ. ಅನಿಷ್ಟ ಪದ್ಧತಿಗಳು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಎಲ್ಲ ಧರ್ಮಗಳಲ್ಲೂ ಕಂಡು ಬರುತ್ತಿವೆ. ಇವುಗಳು ತೊಡೆದುಹಾಕಬೇಕಾದರೆ ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳಬೇಕು ಎಂದರು.ಜಗತ್ತಿನಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ವಿದ್ಯಾವಂತರಿರುವ ಭಾರತದಲ್ಲೇ ಅತಿ ಕಡಿಮೆ ಪ್ರಜ್ಞಾವಂತರು ಇರುವುದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ ಎಂದು ಸೂಚ್ಯವಾಗಿ ಹೇಳಿದರು.ಕುಲಸಚಿವ ಪ್ರೊ.ಡಿ.ಶಿವಲಿಂಗಯ್ಯ ಮಾತನಾಡಿ­ದರು. ಪ್ರಾಂಶುಪಾಲ ಡಾ.ಎಚ್.ವೈ.ಈಶ್ವರ್‌, ಉಪ ಪ್ರಾಂಶುಪಾಲ ಡಾ.ಎಸ್‌.ಶ್ರೀನಿವಾಸ್‌ ಇತರರು ಹಾಜರಿದ್ದರು. ನಂತರ ನಟರಾಜ್‌ ಅವರಿಂದ ಪವಾಡ ಬಯಲು ಕಾರ್ಯಕ್ರಮ ನಡೆಯಿತು. ರೆಡಕ್ರಾಸ್‌­ನಿಂದ ನಡೆದ ರಕ್ತದಾನ ಶಿಬಿರದಲ್ಲಿ ನೂರಾರು ವಿದ್ಯಾರ್ಥಿಗಳು ರಕ್ತದಾನ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry