ಭಾನುವಾರ, ನವೆಂಬರ್ 17, 2019
29 °C

ಮಡೆಸ್ನಾನ-ಎಲ್ಲರ ಭಾವನೆ ಅರಿತು ಕ್ರಮ

Published:
Updated:

ಉಡುಪಿ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಡೆಮಡೆ ಸ್ನಾನ ವಿಚಾರದಲ್ಲಿ ಭಾವುಕ ಭಕ್ತರ, ವಿಚಾರವಾದಿಗಳ ಭಾವನೆಗಳನ್ನು ಅರಿತುಕೊಂಡು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ರಾಜ್ಯದ ನೂತನ ಮುಜರಾಯಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.



ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಪ್ರಥಮ ಬಾರಿಗೆ ಜಿಲ್ಲೆಗೆ ಆಗಮಿಸಿದ ಅವರು ಉಡುಪಿ ಜಿಲ್ಲಾ ಬಿಜೆಪಿ ಘಟಕ ಮಂಗಳವಾರ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.



`ನನಗೆ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತೇನೆ. ಬಡವರ ಕಲ್ಯಾಣ ಯೋಜನೆಗಳ ಬಗ್ಗೆ ಹೆಚ್ಚು ಗಮನ ನೀಡುತ್ತೇನೆ~ ಎಂದು ಹೇಳಿದರು.



`ಸರ್ಕಾರ ಮತ್ತು ಪಕ್ಷ ನನಗೆ ನೀಡಿರುವ ಜವಾಬ್ದಾರಿಯನ್ನು ನಿರ್ವಹಿಸಲು ಹಿರಿಯ ಮುಖಂಡರ, ಜನರ ಹಾಗೂ ಕಾರ್ಯಕರ್ತರ ಸಹಕಾರ ಬೇಕು. ರಾಜ್ಯದಲ್ಲಿ 36 ಸಾವಿರ ದೇವಸ್ಥಾಗಳಿವೆ. ಆದರೆ ಎ ಮತ್ತು ಬಿ ವರ್ಗದ ದೇವಸ್ಥಾನಗಳನ್ನು ಹೊರತುಪಡಿಸಿ ಸುಮಾರು 25 ಸಾವಿರ ದೇವಸ್ಥಾನಗಳು ಸುಸ್ಥಿತಿಯಲ್ಲಿ ಇಲ್ಲ. ಇವುಗಳನ್ನು ಸುಧಾರಣೆ ಮಾಡಲು ಶ್ರಮಿಸುವೆ.

 

ದೇವಸ್ಥಾನ ಭಕ್ತರಿಂದ ನಡೆಯಬೇಕು ಎಂಬುದು ದಿ. ಡಾ. ವಿ.ಎಸ್. ಆಚಾರ್ಯರ ನಿಲುವಾಗಿತ್ತು. ಆ ನಿಟ್ಟಿನಲ್ಲಿ ಸುಧಾರಣೆ ಮಾಡಲಾಗುತ್ತದೆ~ ಎಂದು ಅವರು ಹೇಳಿದರು.ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿರುವ ದೇವಸ್ಥಾನಗಳು ಆಡಳಿತ ಸೇರಿಂದತೆ ಎಲ್ಲ ರೀತಿಯಿಂದ ಉತ್ತಮವಾಗಿವೆ. ರಾಜ್ಯದ ಎಲ್ಲ ದೇವಸ್ಥಾನಗಳನ್ನು ಇದೇ ರೀತಿ ಅಭಿವೃದ್ಧಿ ಮಾಡುವ ಆಲೋಚನೆ ಇದೆ. ಆಡಳಿತಾತ್ಮಕ ವಿಷಯದ ಬಗ್ಗೆ ಈಗಾಗಲೇ ಕೆಲ ಚರ್ಚೆಗಳು ನಡೆದಿವೆ ಎಂದು ಅವರು ಹೇಳಿದರು.



ಕಿವಿಮಾತು: `ನೂತನ ಸಚಿವರು ಎಚ್ಚರಿಕೆ, ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು~ ಎಂದು ಮೂರನೇ ಹಣಕಾಸು ಆಯೋಗದ ಅನುಷ್ಠಾನ ಸಮಿತಿ ಕಾರ್ಯಪಡೆ ಅಧ್ಯಕ್ಷ ಎ.ಜಿ. ಕೊಡ್ಗಿ ಕಿವಿಮಾತು ಹೇಳಿದರು.



`ಆಚಾರ್ಯರ ಅವಧಿಯಲ್ಲಿ ಜಿಲ್ಲೆಯಲ್ಲಿ ಆದ ಅಭಿವೃದ್ಧಿ ಕಾರ್ಯಗಳು ಈಗಲೂ ಮುಂದುವರೆಯಬೇಕು. ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನಶ್ಚೇತನ ಸೇರಿದಂತೆ ಎಲ್ಲ ಅಭಿವೃದ್ಧಿ ಕೆಲಸಗಳನ್ನು ನೂತನ ಸಚಿವರು ಮಾಡಬೇಕು. ಇದಕ್ಕೆ ಎಲ್ಲ ಶಾಸಕರು, ಮುಖಂಡರ ಬೆಂಬಲ ಇರುತ್ತದೆ~ ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದರು.



ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ. ಉದಯ್ ಕುಮಾರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಕೆ. ಲಕ್ಷ್ಮಿನಾರಾಯಣ, ಲಾಲಾಜಿ ಆರ್ ಮೆಂಡನ್, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮೋನಪ್ಪ ಭಂಡಾರಿ, ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸುನಿಲ್ ಕುಮಾರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ದೇವದಾಸ್ ಹೆಬ್ಬಾರ್, ನಗರಸಭೆ ಅಧ್ಯಕ್ಷ ಕಿರಣ್‌ಕುಮಾರ್, ಮೀನು ಮಾರಾಟ ಒಕ್ಕೂಟದ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

ಚರ್ಚಿಸಿ ತೀರ್ಮಾನ

ಭಾವುಕ ಭಕ್ತರು, ಸಾರ್ವಜನಿಕರು, ಸರ್ಕಾರ- ಪಕ್ಷದ ಅಭಿಪ್ರಾಯ ಪಡೆದು ಮಡೆ ಸ್ನಾನ ಆಚರಣೆ ಬಗ್ಗೆ ಶಾಶ್ವತ ಪರಿಹಾರ ಕಂಡುಹಿಡಿಯಲಾಗುತ್ತದೆ ಎಂದು ಶ್ರೀನಿವಾಸ ಪೂಜಾರಿ ಹೇಳಿದರು. ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಬಗ್ಗೆ ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತದೆ ಎಂದರು.

ಮುಜಾರಾಯಿ ಖಾತೆ ಪಡೆದವರ ರಾಜಕೀಯ ಭವಿಷ್ಯ ಹಾಳಾಗುತ್ತದೆ ಎಂಬ ಮಾತಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು `ಅದೆಲ್ಲ ಬರಿ ಭ್ರಮೆ~ ಎಂದರು.

`ಕಚೇರಿ ನಿರ್ವಹಣೆಗೆ ಹಣ ಇರಲಿಲ್ಲ~

ಸನ್ಮಾನ ಸ್ವೀಕರಿಸಿ ಮಾತನಾಡಿದ ಕೋಟಾ ಶ್ರೀನಿವಾಸ ಪೂಜಾರಿ ತಾವು ಗ್ರಾಮ ಪಂಚಾಯಿತಿ ಸದಸ್ಯನಾಗಿ ರಾಜಕೀಯ ಆರಂಭಿಸಿ ಆ ನಂತರ ಶಾಸಕನಾದ ಬಗ್ಗೆ ಭಾವುಕರಾಗಿ ಮಾತನಾಡಿದರು. `2005ರಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷನಾಗಿ ಆಯ್ಕೆಯಾದೆ.



ಆ ಸಂದರ್ಭದಲ್ಲಿ ಕಚೇರಿ ನಿರ್ವಹಣೆ ಮಾಡಲು 40ರಿಂದ 50 ಸಾವಿರ ರೂಪಾಯಿ ಬೇಕಾಗುತ್ತಿತ್ತು. ಆದರೆ ನನ್ನ ಬಳಿ ಹಣ ಇಲ್ಲದ ಕಾರಣ ಅಧ್ಯಕ್ಷ ಸ್ಥಾನ ಬೇಡ ಎಂದು ಹೇಳಿದೆ. ಆದರೆ ಪಕ್ಷದ ಹಿರಿಯರು ನನಗೆ ಧೈರ್ಯ ತುಂಬಿ ಅಗತ್ಯ ನೆರವು ನೀಡಿದರು. ನನ್ನ ಓಡಾಟದ ಖರ್ಚನ್ನೂ ಭರಿಸುವುದಾಗಿ ಹೇಳಿದ ಅವರು ಅಧ್ಯಕ್ಷ ಸ್ಥಾನ ಒಪ್ಪಿಕೊಳ್ಳುವಂತೆ ಮಾಡಿದರು~ ಎಂದರು.



ಪತ್ನಿಗೆ ನೋ ಎಂದ ಕೋಟಾ

ಸನ್ಮಾನ ಸಮಾರಂಭಕ್ಕೆ ಕೋಟಾ ಶ್ರೀನಿವಾಸ ಪೂಜಾರಿ ಅವರ ಪತ್ನಿ ಶಾಂತಾ ಅವರು ಬಂದಿದ್ದರು. ಪ್ರೇಕ್ಷಕರ ಜತೆ ಅವರು ಕುಳಿತು ಕಾರ್ಯಕ್ರಮ ವೀಕ್ಷಿಸುತ್ತಿದ್ದರು. ನಿರೂಪಕರು ಶಾಂತಾ ಅವರನ್ನು ವೇದಿಕೆ ಮೇಲೆ ಬರುವಂತೆ ಆಹ್ವಾನ ನೀಡಿದರು. ವೇದಿಕೆ ಮೇಲಿದ್ದ ಕೋಟಾ ಅವರು ಕೈಸನ್ನೆ ಮಾಡಿ ವೇದಿಕೆ ಮೇಲೆ ಬರುವುದು ಬೇಡ ಎಂದು ಹೇಳಿದ್ದರಿಂದ ಅವರು ಪ್ರೇಕ್ಷಕರ ಸಾಲಿನಲ್ಲೇ ಕುಳಿತು ಕಾರ್ಯಕ್ರಮ ವೀಕ್ಷಿಸಿದರು.

ಪ್ರತಿಕ್ರಿಯಿಸಿ (+)