ಶುಕ್ರವಾರ, ಅಕ್ಟೋಬರ್ 18, 2019
27 °C

ಮಡೆಸ್ನಾನ ತೊಲಗಲಿ; ಮಾನವೀಯತೆ ಉಳಿಯಲಿ

Published:
Updated:

ಚಾಮರಾಜನಗರ: `ಕುಕ್ಕೆ ಸುಬ್ರಮಣ್ಯದಲ್ಲಿ ಅನಿಷ್ಟ ಮಡೆಸ್ನಾನ ಪದ್ಧತಿಯ ನಿಷೇಧಕ್ಕೆ ಅಧಿಕಾರಿಗಳ ನೇತೃತ್ವದ ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ. ಈ ಹಿನ್ನೆಲೆಯಲ್ಲಿ ನಿಷೇಧಕ್ಕೆ ರಾಜ್ಯ ಸರ್ಕಾರ ಕೂಡಲೇ ಕ್ರಮಕೈಗೊಳ್ಳಬೇಕು~ ಎಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಶಿವರಾಂ ಒತ್ತಾಯಿಸಿದರು.`ಈ ಅನಿಷ್ಟ ಪದ್ಧತಿಗೆ ಅಲ್ಲಿನ ಪುರೋಹಿತಶಾಹಿ ಮನಸ್ಸುಗಳು ಬೆಂಬಲವಾಗಿ ನಿಂತಿವೆ. ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ನೀಡಿ  ಮಡೇಸ್ನಾನದ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡುತ್ತಿರುವಾಗ ನನ್ನ ಮೇಲೆಯೇ ಹಲ್ಲೆ ನಡೆಸಲಾಯಿತು. ಇದು ಧಾರ್ಮಿಕ ಗೂಂಡಾಗಿರಿಯಾಗಿದೆ. ಹಿಂದೂ ಧರ್ಮದ ಉದ್ಧಾರಕ್ಕೆ ನಿಂತಿರುವ ಸ್ವಾಮೀಜಿಗಳಿಗೆ ಈ ಪದ್ಧತಿ ನಿರ್ಮೂಲನೆಯಾಗುವುದು ಬೇಕಿಲ್ಲ~ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.ಸಮಾಜ ಕಲ್ಯಾಣ ಸಚಿವ ನಾರಾಯಣಸ್ವಾಮಿ ಮಡೆಸ್ನಾನ ನಿಷೇಧಿಸಲು ಬದ್ಧವಾಗಿದ್ದರು. ಆದರೆ, ಕುಕ್ಕೆ ಸುಬ್ರಮಣ್ಯದ ವೈದಿಕ ಮನಸ್ಸುಗಳು ಹಾಗೂ ಸಚಿವ ಡಾ.ವಿ.ಎಸ್. ಆಚಾರ್ಯ ಅವರು ಮುಖ್ಯಮಂತ್ರಿ ಮೇಲೆ ಒತ್ತಡ ತಂದಿದ್ದಾರೆ. ಹೀಗಾಗಿ, ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ. ಸಮಿತಿ ಸರ್ಕಾರಕ್ಕೆ ನೀಡಿರುವ ವರದಿಯಲ್ಲಿ ಮೊದಲು ಪಂಕ್ತಿಭೇದ ನಿಷೇಧಿಸಲು ಸೂಚಿಸಿದೆ. ಇದನ್ನು ನಿಷೇಧಿಸಿದರೆ ಮಡೇಸ್ನಾನ ಪದ್ಧತಿಯೂ ನಿರ್ಮೂಲನೆಯಾಗಲಿದೆ. ಈ ಪದ್ಧತಿ ಬಗ್ಗೆ ಮಲೆಕುಡಿಯ ಜನಾಂಗದ ಮುಖಂಡರಲ್ಲಿಯೂ ಅಸಮಾಧಾನ ವಿದೆ. ಆದರೆ, ಬದುಕಿನ ಅನಿವಾರ್ಯತೆಯಿಂದ ಬಹಿರಂಗವಾಗಿ ಹೇಳಿಕೆ ನೀಡುತ್ತಿಲ್ಲ ಎಂದರು.ಮಡೆಸ್ನಾನ ಖಂಡಿಸಿ ಜ. 7ರಂದು ಬೆಂಗಳೂರಿನಲ್ಲಿ ಪ್ರಗತಿಪರ ಚಿಂತನೆಯ ಮಠಾಧೀಶರ ಸಮಾವೇಶ ನಡೆಯಲಿದೆ. 8ರಂದು ಉಡುಪಿಯ ವಿಶ್ವೇಶ್ವತೀರ್ಥ ಸ್ವಾಮೀಜಿ ಅವರೊಂದಿಗೆ ಸಂವಾದ ನಡೆಯಲಿದೆ. ಸರ್ಕಾರ ಮಡೇಸ್ನಾನ ನಿಷೇಧಿಸದಿದ್ದರೆ ರಾಜ್ಯ ವ್ಯಾಪ್ತಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಜಿ.ಎಸ್. ಜಯದೇವ ಮಾತನಾಡಿ, `ಮಡೆಸ್ನಾನ ಪದ್ಧತಿಯ ಹಿಂದೆ ವಸ್ತುಲಾಭ ಪಡೆಯುವ ಷಡ್ಯಂತ್ರವಿದೆ. ಮೇಲ್ವರ್ಗದವರು ಊಟ ಮಾಡಿದ ಎಂಜಲು ಎಲೆ ಮೇಲೆ ಉರುಳುವುದು ಅಮಾನವೀಯವಾದುದು. ಈ ಪದ್ಧತಿ ನಿಷೇಧಕ್ಕೆ ಸರ್ಕಾರ ಕೂಡಲೇ ಕ್ರಮಕೈಗೊಳ್ಳಬೇಕು~ ಎಂದು ಆಗ್ರಹಿಸಿದರು.

ಸಾತ್ವಿಕ ಮನುಷ್ಯರು ಎಂಜಲು ಎಲೆಯನ್ನು ನಾಯಿಗಳಿಗೂ ಕೂಡ ಹಾಕುವುದಿಲ್ಲ. ಆದರೆ, ಮಾನವೀಯ ಮೌಲ್ಯ ಇಲ್ಲದ ಪುರೋಹಿತಶಾಹಿ ಗಳ ಕುತಂತ್ರದಿಂದ ಈ ಪದ್ಧತಿ ಜೀವಂತವಾಗಿರು ವುದು ದುರಂತ. ಇದರ ವಿರುದ್ಧ ಮಠಾಧೀಶರು ತಡವಾಗಿಯಾದರೂ ಧ್ವನಿ ಎತ್ತಿದ್ದಾರೆ. ಮಾನವೀಯ ಮೌಲ್ಯವನ್ನು ತೇಜೋವಧೆ ಮಾಡುವ ಈ ಪದ್ಧತಿಯನ್ನು ನಿಷೇಧಿಸಬೇಕಿದೆ ಎಂದರು.ಹಿರಿಯ ರಂಗಕರ್ಮಿ ಕೆ. ವೆಂಕಟರಾಜು ಮಾತನಾಡಿ, `ಸಚಿವ ಡಾ.ವಿ.ಎಸ್. ಆಚಾರ್ಯ ಪ್ರತಿನಿಧಿಸುವ ಸಮುದಾಯದ ಗುಂಪೊಂದು ಮಡೆಸ್ನಾನ ಪದ್ಧತಿಯನ್ನು ಬೆಂಬಲಿಸುತ್ತಿದೆ. ಇದು ಅಮಾನವೀಯವಾದುದು~ ಎಂದು ಟೀಕಿಸಿದರು.ಈ ಪದ್ಧತಿಯ ನಿಷೇಧ ಸಂಬಂಧ ಪೇಜಾವರ ಸ್ವಾಮೀಜಿ ದ್ವಂದ್ವ ನಿಲುವು ತಳೆದಿರುವುದು ಆಶ್ಚರ್ಯ ಮೂಡಿಸಿದೆ. ರೈತರ ಭೂಮಿ ಸ್ವಾಧೀನಪಡಿಸಿಕೊಳ್ಳುವಾಗ ಸರ್ಕಾರ ಅತಿಯಾದ ಉತ್ಸಾಹ ತೋರುತ್ತದೆ. ಆದರೆ, ಅನಿಷ್ಟ ಪದ್ಧತಿಯ ನಿಷೇಧಕ್ಕೆ ಕನಿಷ್ಠ ಪ್ರಮಾಣದ ಆಸಕ್ತಿ ಯನ್ನೂ ತೋರಿಸುತ್ತಿಲ್ಲ ಎಂದು ದೂರಿದರು.ದಲಿತ ಮುಖಂಡ ವೆಂಕಟರಮಣಸ್ವಾಮಿ (ಪಾಪು) ಮಾತನಾಡಿ, `ಮಡೇಸ್ನಾನ ಪದ್ಧತಿ ಜೀವಂತವಾಗಿರುವುದು ಮಾನವಧರ್ಮಕ್ಕೆ ಮಾಡುತ್ತಿರುವ ಅಪಚಾರ~ ಎಂದು ಟೀಕಿಸಿದರು.ಸುದ್ದಿಗೋಷ್ಠಿಯಲ್ಲಿ ಸಿ.ಎಂ. ನರಸಿಂಹಮೂರ್ತಿ, ಕೆ.ಎಂ. ನಾಗರಾಜು ಇತರರು ಹಾಜರಿದ್ದರು.

Post Comments (+)