ಮಡೆಸ್ನಾನ ನಿಷೇಧಕ್ಕೆ ಸಿಪಿಎಂ ಆಗ್ರಹ

7

ಮಡೆಸ್ನಾನ ನಿಷೇಧಕ್ಕೆ ಸಿಪಿಎಂ ಆಗ್ರಹ

Published:
Updated:

 


ಚಿಕ್ಕಬಳ್ಳಾಪುರ: `ಮಡೆಸ್ನಾನ ಆಚರಣೆಯು ಅನಿಷ್ಠಪದ್ಧತಿಯಾಗಿದ್ದು, ಮೂಢನಂಬಿಕೆಯಿಂದ ಕೂಡಿದೆ. ಜನರು ಮತ್ತು ಸಮಾಜದ ಹಿತದೃಷ್ಟಿಯಿಂದ ಈ ಪದ್ಧತಿಯನ್ನು ಸಂಪೂರ್ಣವಾಗಿ ನಿಷೇಧಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು' ಎಂದು ಸಿಪಿಎಂ ರಾಜ್ಯ ಘಟಕದ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಒತ್ತಾಯಿಸಿದರು.`ರಾಜ್ಯದಲ್ಲಿ ಕುಕ್ಕೆ ಸುಬ್ರಮಣ್ಯ ಮತ್ತು ಚಿಕ್ಕಬಳ್ಳಾಪುರದ ಸುಬ್ರಮಣ್ಯ ಮಠದಲ್ಲಿ ಮಾತ್ರವೇ ಮಡೆಸ್ನಾನ ಆಚರಿಸಲಾಗುತ್ತದೆ. ಮಡೆ ಸ್ನಾನ ಆಚರಿಸದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರೂ ಅದನ್ನು ಉಲ್ಲಂಘಿಸಿ ಚಿಕ್ಕಬಳ್ಳಾಪುರದಲ್ಲಿ ಮಡೆಸ್ನಾನ ನೆರವೇರಿತು' ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.`ಮಡೆಸ್ನಾನ ಪದ್ಧತಿ ಸೇರಿದಂತೆ ಇತರ ಅನಿಷ್ಠ ಪದ್ಧತಿಗಳ ಆಚರಣೆ ವಿರುದ್ಧ ಸಿಪಿಎಂ ನಿರಂತರವಾಗಿ ವಿರೋಧಿಸುತ್ತಲೇ ಬಂದಿದೆ. ಮೂಢನಂಬಿಕೆಯುಳ್ಳ ಅನಿಷ್ಠ ಪದ್ಧತಿಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಹೋರಾಟ ನಡೆಸಲಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲಿದ್ದೇವೆ' ಎಂದು ಅವರು ಹೇಳಿದರು.`ಬೇರೆ ಯಾರೋ ಉಂಡ ಎಂಜಲು ಎಲೆಗಳ ಮೇಲೆ ಉರುಳಾಡಿದರೆ ಒಳ್ಳೆಯಾದಾಗುತ್ತದೆ ಎಂದು ಜನರನ್ನು ನಂಬಿಸಲಾಗಿದೆ. ಮದುವೆಯಾಗುತ್ತದೆ, ಮಕ್ಕಳಾಗುತ್ತೇವೆ ಮತ್ತು ಜೀವನಕ್ಕೆ ಒಳ್ಳೆಯದಾಗುತ್ತದೆಯೆಂದು ಹೇಳಿ ಜನರ ದಿಕ್ಕನ್ನು ತಪ್ಪಿಸಲಾಗುತ್ತಿದೆ. ಒಂದು ವರ್ಷದ ಕಂದಮ್ಮಗಳು ಅಳುತ್ತಿದ್ದರೂ ಅವರನ್ನು ಉಂಡ ಎಲೆಗಳ ಮೇಲೆ ಉರುಳುವಂತೆ ಬಲವಂತ ಮಾಡುವುದು ಹೇಯಕರವಾದದ್ದು.  ಇಂದಿನ ವೈಜ್ಞಾನಿಕ ಯುಗದಲ್ಲಿ ಜನರು ಹೊಸ ಆಲೋಚನೆಗಳ ಮೂಲಕ ಜೀವನ ರೂಪಿಸಿಕೊಳ್ಳಬೇಕೆ ಹೊರತು ಮೂಢನಂಬಿಕೆಗೆ ಮರಳಾಗಬಾರದು' ಎಂದು ಅವರು ತಿಳಿಸಿದರು.`ಮಡೆಸ್ನಾನ ಪದ್ಧತಿ ನಿಷೇಧಿಸುವಂತೆ ಮತ್ತು ಉಡುಪಿ ಕೃಷ್ಣನ ದೇವಾಲಯದಲ್ಲಿ ಪಂಕ್ತಿ ಭೋಜನದಲ್ಲಿ ತಾರತಮ್ಯ ತೋರದಂತೆ ಆಗ್ರಹಿಸಿ ಶುಕ್ರವಾರದಿಂದ (ಡಿಸೆಂಬರ್ 21) ಪಾದಯಾತ್ರೆ ಕೈಗೊಳ್ಳಲಿದ್ದೇವೆ. ಡಿಸೆಂಬರ್ 27ರಂದು ಉಡುಪಿ ಕೃಷ್ಣನ ದೇವಾಲಯದ ಎದುರು ಬೃಹತ್ ಪ್ರತಿಭಟನಾ ಸಮಾವೇಶ ನಡೆಸಲಿದ್ದೇವೆ. ವಿವಿಧ ಜಿಲ್ಲೆಗಳಿಂದ ಸಿಪಿಎಂ ಮುಖಂಡರು, ಕಾರ್ಯಕರ್ತರು ಮತ್ತು ಜನರು ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಬೇಡಿಕೆಗಳು ಈಡೇರುವವರೆಗೆ ಹೋರಾಟ ಮುಂದುವರೆಸುತ್ತೇವೆ' ಎಂದು ಜಿ.ವಿ.ಶ್ರೀರಾಮರೆಡ್ಡಿ ತಿಳಿಸಿದರು.  ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ, ಮುಖಂಡರಾದ ಗೋಪಿನಾಥ್, ನಾಗರಾಜ್ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry