ಭಾನುವಾರ, ಅಕ್ಟೋಬರ್ 20, 2019
21 °C

ಮಡೆಸ್ನಾನ ನಿಷೇಧ: ಸರ್ಕಾರಕ್ಕೆ ಆಗ್ರಹ

Published:
Updated:
ಮಡೆಸ್ನಾನ ನಿಷೇಧ: ಸರ್ಕಾರಕ್ಕೆ ಆಗ್ರಹ

ಬೆಂಗಳೂರು: ರಾಜ್ಯದಲ್ಲಿ ಮಡೆಸ್ನಾನ ಪದ್ಧತಿ ಆಚರಣೆ ನಿಷೇಧಕ್ಕೆ ಕಾನೂನು ರೂಪಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವ ಸಂಬಂಧ ಪೇಜಾವರ ಮಠದ ವಿಶ್ವೇಶತೀರ್ಥರು ಸೇರಿದಂತೆ ವಿವಿಧ ಮಠಾಧಿಪತಿಗಳು ಭಾನುವಾರ ನಡೆದ ಸಭೆಯಲ್ಲಿ ಒಮ್ಮತದ ನಿರ್ಣಯ ತೆಗೆದುಕೊಂಡರು.

ನಿಡುಮಾಮಿಡಿ ಮಹಾಸಂಸ್ಥಾನವು ನಗರದ ಕುಮಾರಕೃಪಾ ಪೂರ್ವದಲ್ಲಿರುವ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ `ಮಡೆಸ್ನಾನ: ಒಂದು ಸಂವಾದ~ ಕಾರ್ಯಕ್ರಮದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು.

ಸುಮಾರು ಮೂರು ಗಂಟೆ ಕಾಲ ನಡೆದ ಸಂವಾದದ ಬಳಿಕ ಅಧ್ಯಕ್ಷತೆ ವಹಿಸಿದ್ದ ಹೊಸದುರ್ಗದ ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, `ಮಡೆಸ್ನಾನ ಪದ್ಧತಿ ನಿಷೇಧಕ್ಕೆ ಸೂಕ್ತ ಕಾನೂನು ರಚಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಸಭೆ ಒಮ್ಮತದ ನಿರ್ಧಾರ ತೆಗೆದುಕೊಂಡಿದೆ~ ಎಂದು ಪ್ರಕಟಿಸಿದರು.

ಅಸಮಾಧಾನ: `ಮಡೆಸ್ನಾನ ನಿಷೇಧಕ್ಕೆ ಸಂಬಂಧಪಟ್ಟಂತೆ ವಿಶ್ವೇಶ್ವತೀರ್ಥರಿಂದ ನಿರೀಕ್ಷಿತ ಮಟ್ಟದ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎಂಬ ಅಸಮಾಧಾನವಿದೆ. ಆದರೂ ಈ ಅಮಾನವೀಯ ಪದ್ಧತಿಯನ್ನು ನಿಷೇಧಿಸಬೇಕು ಎಂಬ ಒತ್ತಾಯದ ಹೋರಾಟದಲ್ಲಿ ಅವರು ನಮ್ಮಂದಿಗೆ ಇರುವುದಾಗಿ ಘೋಷಿಸಿರುವುದು ಸಂತೋಷದ ಸಂಗತಿ~ ಎಂದರು.

`ವಿಶ್ವೇಶತೀರ್ಥರು ಸೇರಿದಂತೆ ಯಾರ ಮಾತನ್ನು ಸರ್ಕಾರ ಆಲಿಸುವುದಿಲ್ಲ. ಆದರೆ ಸಾರ್ವಜನಿಕರ ಒತ್ತಾಯಕ್ಕೆ  ಸರ್ಕಾರ ಮಣಿಯಬೇಕಾಗುತ್ತದೆ. ಅಸಮಾನತೆಯನ್ನು ಅನುಸರಿಸುವ ಹಿಂದೂ ಧರ್ಮವನ್ನು ಒಪ್ಪುವುದಾದರೂ ಹೇಗೆ ಎಂಬ ಪ್ರಶ್ನೆ ಜನರಲ್ಲಿ ಮೂಡುತ್ತದೆ. ಹಾಗಾಗಿ ಇಂತಹ ಅನಿಷ್ಟ ಪದ್ಧತಿಗಳ ವಿರುದ್ಧ ಎಲ್ಲರೂ ದನಿಯೆತ್ತಬೇಕಿದೆ~ ಎಂದು ಹೇಳಿದರು.

ಇದಕ್ಕೂ ಮೊದಲು ಆಶಯ ನುಡಿಗಳನ್ನಾಡಿದ ನಿಡುಮಾಮಿಡಿ ಮಹಾಸಂಸ್ಥಾನದ ವೀರಭದ್ರ ಚನ್ನಮಲ್ಲ ಸ್ವಾಮೀಜಿ, `ಮಡೆಸ್ನಾನದ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುಕ್ತ ಸಂವಾದ ಆಯೋಜಿಸಲಾಗಿದೆ. ಮಡೆಸ್ನಾನದ ಬಗ್ಗೆ ಚಿಂತಿಸುವಾಗ ಒಂದು ರಾತ್ರಿ ನನಗೆ ನಿದ್ರೆಯೇ ಬರಲಿಲ್ಲ. ಮಾನವೀಯತೆ, ಮಾನವ ಧರ್ಮವೇ ಎಂಜಲೆಲೆಯ ಮೇಲೆ ಉರುಳಾಡಿದಷ್ಟು ಬೇಸರವಾಯಿತು~ ಎಂದರು.

`ವಿಶ್ವೇಶತೀರ್ಥರಲ್ಲಿ ಇಷ್ಟವಾಗುವ ಹಾಗೂ ಇಷ್ಟವಾಗದ ಹಲವು ವಿಚಾರಗಳಿವೆ. ಅವರ ಸ್ಪಂದನಶೀಲ ವ್ಯಕ್ತಿತ್ವ ಕಂಡರೆ ಬಹಳ ಪ್ರೀತಿ. ಅವರಲ್ಲಿ ಮಠದ ಸಾಂಪ್ರದಾಯಿಕ ಗಡಿಗಳನ್ನು ಮೀರುವ ತುಡಿತವಿದೆ. ಮಾಧ್ವ ಪರಂಪರೆಯಲ್ಲಿ ಹೊಸ ಸುಧಾರಣೆ ತರುವ ಮೂಲಕ ಸಂಚಲನ ಮೂಡಿಸಿದ್ದಾರೆ. ಸಂವಾದ ಮನೋಭಾವ, ಕ್ರಿಯಾಶೀಲ ಕಾರ್ಯವೈಖರಿ ಬಗ್ಗೆ ಗೌರವವಿದೆ~ ಎಂದರು.

`ಆದರೆ ಸುಧಾರಣೆ, ಪರಿವರ್ತನೆಯ ವಿಷಯ ಬಂದಾಗ ಅವರ ನಿಲುವು ಗೊಂದಲಮಯವಾಗಿರುತ್ತದೆ. ಸ್ಪಷ್ಟವಾದ ನಿರ್ಧಾರವನ್ನು ಅವರು ವ್ಯಕ್ತಪಡಿಸುವುದಿಲ್ಲ. ಮಡೆಸ್ನಾನ ಕುರಿತಂತೆ ಹಲವು ಗೊಂದಲಮಯ ಹೇಳಿಕೆ ನೀಡಿದ್ದಾರೆ. ಜನರ ಅಭಿಪ್ರಾಯಗಳಿಗೆ ಅನುಗುಣವಾಗಿ ನಿಲುವು ಬದಲಾಯಿಸುವುದು ಸರಿಯಲ್ಲ~ ಎಂದು ನೇರ ಆರೋಪ ಮಾಡಿದರು.

ಶಿಷ್ಯ ವೃತ್ತಿ ಸ್ವೀಕರಿಸುತ್ತೇನೆ: `ನನ್ನ ದುಬಾರಿಯಲ್ಲದ ಕೆಲವು ಬೇಡಿಕೆಗಳಿವೆ. ಪೇಜಾವರ ಮಠದಲ್ಲಿ ತಾವಿರುವಾಗಲೇ ಪಂಕ್ತಿ ಭೇದವನ್ನು ನಿಷೇಧಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಹಿಂದುಗಳೆಲ್ಲಾ ಹುಟ್ಟಿನಿಂದ ಸಮಾನರು. ಹಾಗಾಗಿ ಅಂತರಜಾತಿ ವಿವಾಹ, ವಿಧವಾ ವಿವಾಹವಾಗುವಂತೆ ಜನತೆಗೆ ಸಂದೇಶ ನೀಡಬೇಕು. ಅಷ್ಟಮಠಗಳಲ್ಲಿ ವರ್ಷದಲ್ಲಿ ಒಂದು ದಿನ ಹಿಂದುಳಿದ, ದಲಿತ ಸಮುದಾಯದ ಧಾರ್ಮಿಕ ಮುಖಂಡರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು. ಈ ಬೇಡಿಕೆಗಳನ್ನು ಈಡೇರಿಸಿದರೆ ನಾನು ನಿಮ್ಮ ಬಳಿ ಶಿಷ್ಯವೃತ್ತಿ ಸ್ವೀಕರಿಸುತ್ತೇನೆ~ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ವಿಶ್ವೇಶತೀರ್ಥರು, `ನನಗೆ ಕೆಲವೊಂದು ಇತಿಮಿತಿ ಇದೆ. ಸಮಾಜದ ಬಗ್ಗೆ ತುಡಿತವೂ ಇದೆ. ಧರ್ಮಶಾಸ್ತ್ರದ ಚೌಕಟ್ಟನ್ನು ಮೀರುವಂತಿಲ್ಲ. ಪರಂಪರೆಯ ಸಂವಿಧಾನ ಹಾಗೂ ದೇಶದ ಸಂವಿಧಾನ ಎರಡಕ್ಕೂ ಬದ್ಧವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಇದು ಕೆಲವರಿಗೆ ಗೊಂದಲವೆನಿಸಬಹುದು~ ಎಂದರು.

`ಮಡೆಸ್ನಾನದ ಬಗ್ಗೆ 500 ವರ್ಷಗಳ ಹಿಂದೆ ವಾದಿರಾಜರು ಉಲ್ಲೇಖ ಮಾಡಿದ್ದಾರೆ. ಆದರೆ ಬ್ರಾಹ್ಮಣರು ಊಟ ಮಾಡಿದ ಎಲೆಗಳ ಮೇಲೆ ಉರುಳು ಸೇವೆ ಮಾಡಿ ಎಂದು ಎಲ್ಲಿಯೂ ಹೇಳಿಲ್ಲ. ಸುಬ್ರಹ್ಮಣ್ಯ ಕ್ಷೇತ್ರ ಅಷ್ಟು ಪವಿತ್ರ ಎಂಬುದಕ್ಕೆ ಆ ಉಲ್ಲೇಖವಿದೆ. ನಾನು ಎಲ್ಲಿಯೂ ಮಡೆಸ್ನಾನವನ್ನು ಸಮರ್ಥಿಸಿಲ್ಲ. ಮಡೆಸ್ನಾನದಿಂದಲೇ ಹಿಂದು ಪರಂಪರೆ ಉಳಿಯಬೇಕಿಲ್ಲ~ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

`ಹಿಂದೂ ಧರ್ಮದ ಆಚರಣೆಗಳನ್ನಷ್ಟೇ ವಿರೋಧಿಸಲಾಗುತ್ತಿದೆ. ಮುಸ್ಲಿಮರು ಹಬ್ಬದ ಸಂದರ್ಭದಲ್ಲಿ ಒಂದೇ ತಟ್ಟೆಯಲ್ಲಿ ಆಹಾರ ಸೇವಿಸುವುದು ಕೂಡ ಎಂಜಲು ಸೇವಿಸಿದಂತಾಗುತ್ತದೆ. ಪತ್ನಿಗೆ ಸರಳವಾಗಿ ವಿಚ್ಛೇದನ ನೀಡಿ ಮರು ಮದುವೆಯಾಗುವ ಅವಕಾಶ ನೀಡಲಾಗಿದೆ. ಇದರಿಂದ ಆ ಮಹಿಳೆಯರಿಗೆ ಅನ್ಯಾಯವಾಗುತ್ತದೆ. ಆದರೆ ಈ ಬಗ್ಗೆ ಯಾರೊಬ್ಬರು ಆಕ್ಷೇಪ ವ್ಯಕ್ತಪಡಿಸುವುದಿಲ್ಲ. ಆದರೆ ಎಲ್ಲ ಅನಿಷ್ಟ ಪದ್ಧತಿಗಳಿಗೂ ಹಿಂದೂ ಧರ್ಮ ಹಾಗೂ ಪುರೋಹಿತಶಾಹಿಯನ್ನೇ ಹೊಣೆಯಾಗಿಸುವ ಹುನ್ನಾರ ನಡೆಯುತ್ತಿದೆ~ ಎಂದರು.

ಎಚ್ಚರಿಕೆ: `ಮಡೆಸ್ನಾನ ಪದ್ಧತಿ ವಿರುದ್ಧ ಪ್ರತಿಭಟನೆ ನಡೆಸಿದರೆ ಅದಕ್ಕೆ ಪ್ರತಿಯಾಗಿ ಇನ್ನಷ್ಟು ಪ್ರತಿರೋಧ ವ್ಯಕ್ತವಾಗುತ್ತದೆ. ಇದರ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು. ಇದರ ನಿಷೇಧಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮಡೆಸ್ನಾನ ನಿಷೇಧಕ್ಕೆ ಕಾನೂನು ರೂಪಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು. ಒಂದೊಮ್ಮೆ ಸ್ಪಂದಿಸದಿದ್ದರೆ ಹೋರಾಟ ನಡೆಸಲಾಗುವುದು~ ಎಂದು ಎಚ್ಚರಿಕೆ ನೀಡಿದರು.

ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಸಿದ್ಧರಾಮ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಗುಳೇದಗುಡ್ಡದ ಗುರುಸಿದ್ಧೇಶ್ವರ ಮಠದ ಬಸವರಾಜ ಪಟ್ಟದಾರ್ಯ ಸ್ವಾಮೀಜಿ, ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಗುರುಪೀಠದ ಜಯಮೃತ್ಯುಂಜಯ ಸ್ವಾಮೀಜಿ, ಹೊಸದುರ್ಗದ ಭಗೀರಥ ಪೀಠದ ಪುರುಷೋತ್ತಮಾನಂದ ಸ್ವಾಮೀಜಿ, ಕನಕಗುರು ಪೀಠದ ಗುಲ್ಬರ್ಗ ವಿಭಾಗದ ಸಿದ್ಧರಾಮಾನಂದ ಸ್ವಾಮೀಜಿ, ವಿಮರ್ಶಕ ಕೆ. ಮರುಳಸಿದ್ದಪ್ಪ, ಸಾಹಿತಿ ಪ್ರೊ.ಎಸ್.ಜಿ. ಸಿದ್ಧರಾಮಯ್ಯ ಇದ್ದರು.

Post Comments (+)