ಮಡೆಸ್ನಾನ, ಪಂಕ್ತಿಭೇದ ನಿಷೇಧಕ್ಕೆ ಒತ್ತಾಯ

7

ಮಡೆಸ್ನಾನ, ಪಂಕ್ತಿಭೇದ ನಿಷೇಧಕ್ಕೆ ಒತ್ತಾಯ

Published:
Updated:

ಚಿತ್ರದುರ್ಗ: ಶಾಲೆಗಳಲ್ಲಿ ಭಗವದ್ಗೀತೆ, ದೇವಸ್ಥಾನಗಳಲ್ಲಿ ಮಡೆಸ್ನಾನ ಹಾಗೂ ಮಠಮಂದಿರದಲ್ಲಿ ಪಂಕ್ತಿಭೇದ, ಜಾತಿಭೇದ ನಿಷೇಧಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಎನ್. ಮೂರ್ತಿ ಬಣ) ಜಿಲ್ಲಾ ಘಟಕದ ವತಿಯಿಂದ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.ಇಲ್ಲಿನ ಮುಖ್ಯರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ದಸಂಸ ಪದಾಧಿಕಾರಿಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಶಾಲೆಗಳ ಪಠ್ಯಕ್ರಮದಲ್ಲಿ ಭಗವದ್ಗೀತೆ ಬೋಧಿಸುವ ಅವೈಜ್ಞಾನಿಕ ಕ್ರಮವನ್ನು ಕೈಬಿಟ್ಟು, ಮಕ್ಕಳಿಗೆ ಭಾಷಾ ಕೌಶಲ ಮತ್ತು ವಿಜ್ಞಾನ ತಂತ್ರಜ್ಞಾನದಂಹತ ಗುಣಮಟ್ಟದ ಶಿಕ್ಷಣ ನೀಡುವತ್ತ ಚಿಂತನೆ ಮಾಡಬೇಕು. ಬೆಂಗಳೂರಿನ ವಿಧಾನಸೌಧದ ಮುಂದಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಸ್ಥಳಾಂತರಿಸದೇ ಆಧುನಿಕ ಯಂತ್ರ ಬಳಸಿ ಮೆಟ್ರೋ ರೈಲು ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ವಿವಿಧೆಡೆ ನಡೆಸುವ ಮಡೆಸ್ನಾನ, ಉಡುಪಿ ಕೃಷ್ಣಮಠ ಮತ್ತು ಇತರೆ ಮಠಮಂದಿರಗಳಲ್ಲಿ ಆಚರಣೆಯಲ್ಲಿರುವ ಪಂಕ್ತಿಭೇದ ಮತ್ತು ಜಾತಿಭೇದದ ಅನಿಷ್ಠ ಪದ್ಧತಿಯನ್ನು ನಿಷೇಧಿಸಬೇಕು.

 

ಹಾವೇರಿ ಜಿಲ್ಲೆ ಹಿರೇಕೆರೂರಿನ ದುರ್ಗಾದೇವಿ ದೇವಸ್ಥಾನದಲ್ಲಿ ಈಚೆಗೆ ನಡೆದ ಕೋಣ ಬಲಿ, ಬೆತ್ತಲೆ ಸೇವೆ ಮತ್ತು ದೇವರ ಹೆಸರಿನಲ್ಲಿ ಪ್ರಾಣಿಬಲಿ ನೀಡುವುದನ್ನು ಸರ್ಕಾರ ತಕ್ಷಣ ನಿಷೇಧಗೊಳಿಸಬೇಕು ಎಂದು ದಸಂಸ ಪದಾಧಿಕಾರಿಗಳು ಒತ್ತಾಯಿಸಿದರು.ಪ್ರಸಕ್ತ ಮಂಡಿಸಲಿರುವ ಬಜೆಟ್‌ನಲ್ಲಿ ಪರಿಶಿಷ್ಟಜಾತಿ, ಪರಿಶಿಷ್ಟವರ್ಗದ ಅಭಿವೃದ್ಧಿಗೆ ಶೇ. 25ರಷ್ಟು ಹಣ ಬಿಡುಗಡೆ ಮಾಡಿ, ಪರಿಶಿಷ್ಟರ ಅಭಿವೃದ್ಧಿಗೆ ಏಕಗವಾಕ್ಷಿ ಯೋಜನೆ ಜಾರಿ ಮಾಡಬೇಕು ಎಂದು ಆಗ್ರಹಿಸಿದರು. 

ತಾಲ್ಲೂಕಿನ ಕೋಡೆನಹಟ್ಟಿಯ ಎಸ್ಸಿ ಕಾಲೊನಿಯಲ್ಲಿ ವಾಸಿಸುತ್ತಿರುವವ ನಿವಾಸಿಗಳು ಅಲ್ಲಿಯೇ ವಾಸಿಸಲು ಅನುಮತಿ ನೀಡಬೇಕು ಹಾಗೂ ಚಳ್ಳಕೆರೆ ತಾಲ್ಲೂಕು ನೇರ‌್ಲಗುಂಟೆಯ ಡಾ.ಬಿ.ಆರ್. ಅಂಬೇಡ್ಕರ್ ನಗರ ವಾಸಿಗಳಿಗೆ ಮಲ್ಲಪ್ಪನಹಳ್ಳಿ ಬಿದರಿಕೆರೆ ಗ್ರಾಮದಲ್ಲಿ ಪುನರ್ವಸತಿ ಕಲ್ಪಿಸಿಕೊಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಸರ್ಕಾರ ಸ್ಪಂದಿಸಬೇಕು ಎಂದು ಮನವಿ ಮಾಡಿದರು.ದಸಂಸ ಜಿಲ್ಲಾ ಘಟಕದ ಎಸ್.ಎ. ನಾರಾಯಣಮೂರ್ತಿ, ನೇಹಮಲ್ಲೇಶ್, ಕೆ. ಮಹಾಲಿಂಗಪ್ಪ, ಕೆ.ಸಿ. ಜಗದೀಶ್ವರಪ್ಪ, ಶೂದ್ರ ಎನ್. ಮಂಜಪ್ಪ, ಅಂಗಡಿ ಮಂಜಣ್ಣ, ಕೆ. ಕಾಂತರಾಜ್, ಇರ್ಫಾನ್, ಜಬೀವುಲ್ಲಾ, ತಿಮ್ಮರಾಜು, ಟಿ. ಚಂದ್ರಪ್ಪ, ಪಿ. ವೆಂಕಟೇಶ್ ಪಾಲ್ಗೊಂಡಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry