ಮಡೆಸ್ನಾನ-ಪಂಕ್ತಿಭೇದ ವಿರುದ್ಧ ಸಿಪಿಎಂ ಜನಾಂದೋಲನ

7

ಮಡೆಸ್ನಾನ-ಪಂಕ್ತಿಭೇದ ವಿರುದ್ಧ ಸಿಪಿಎಂ ಜನಾಂದೋಲನ

Published:
Updated:

ಕೋಲಾರ: ಮಡೆಸ್ನಾನ-ಪಂಕ್ತಿಭೇದ ವಿರುದ್ಧ ಸಿಪಿಎಂ ಜನಾಂದೋಲನ ಹಮ್ಮಿಕೊಂಡಿದ್ದು, ಉಡುಪಿಯ ಅಜ್ಜರ ಕಾಡುವಿನಲ್ಲಿ ಡಿ.27ರಂದು ರಾಜ್ಯಮಟ್ಟದ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಜಿ.ಸಿ.ಬೈಯಾರೆಡ್ಡಿ ತಿಳಿಸಿದರು.


ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಭೆಯಲ್ಲಿ ಪಕ್ಷದ ಪಾಲಿಟ್ ಬ್ಯೂರೊ ಸದಸ್ಯರಾದ ಆಂಧ್ರಪ್ರದೇಶದ ಬಿ.ವಿ.ರಾಘವಲು, ಕೇರಳದ ಮಾಜಿ ಸಚಿವ ಎಂ.ಎ.ಬೇಬಿ, ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ, ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜಿ.ಎನ್.ನಾಗರಾಜ, ಮಾರುತಿ ಮಾನ್ಪಡೆ, ರಾಜ್ಯ ಹಿಂದಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು  ಮಾತನಾಡಲಿದ್ದಾರೆ. ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ, ಉಡುಪಿ ಜಿಲ್ಲಾ ಸಮಿತಿ ಕಾರ್ಯದರ್ಶಿ ಕೆ.ಶಂಕರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.ರಾಜ್ಯಮಟ್ಟದ ಈ ಸಭೆಯಲ್ಲಿ ಜಿಲ್ಲೆಯ 200 ಮಂದಿ ಪಾಲ್ಗೊಳ್ಳಲಿದ್ದಾರೆ. ಎಲ್ಲ ಪ್ರಗತಿಪರ ಮತ್ತು ಮಾನವತಾವಾದಿ ಶಕ್ತಿಗಳು ಈ ಹೋರಾಟ ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದರು.ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಕೋಮುವಾದಿ ಶಕ್ತಿಗಳ ಪ್ರಯೋಗಶಾಲೆಗಳಾಗಿ ರೂಪುಗೊಳ್ಳುತ್ತಿವೆ. ಜೊತೆಗೆ ಅಸ್ಪೃಶ್ಯತೆ ಮತ್ತು ಅಂಧಶ್ರದ್ಧೆಯನ್ನು ಗಟ್ಟಿಗೊಳಿಸುವ ಕೇಂದ್ರಗಳಾಗಿ ಪ್ರಭಾವ ವಿಸ್ತರಿಸುತ್ತಿವೆ. ಜನರ ನಂಬಿಕೆ ಹೆಸರಿನಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಸುತ್ತಿರುವ ಮಡೆಸ್ನಾನ, ಉಡುಪಿ ಕೃಷ್ಣ ಮಠದಲ್ಲಿ ಚಾಲ್ತಿಯಲ್ಲಿರುವ ಪಂಕ್ತಿಭೇದ ಪದ್ಧತಿಯು ದೇಶದ ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪಕ್ಷದ ಪ್ರಮುಖರಾದ ವಿ.ಗೀತಾ, ಗಾಂಧಿನಗರ ನಾರಾಯಣಸ್ವಾಮಿ, ಪಿ.ಶ್ರೀನಿವಾಸ್, ಎಚ್.ಎಂ.ಯಲ್ಲಪ್ಪ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry