ಮಡೆಸ್ನಾನ, ಪಂಕ್ತಿ ಭೇದ ಪದ್ಧತಿ ನಿಷೇಧಕ್ಕೆ ಆಗ್ರಹ

7

ಮಡೆಸ್ನಾನ, ಪಂಕ್ತಿ ಭೇದ ಪದ್ಧತಿ ನಿಷೇಧಕ್ಕೆ ಆಗ್ರಹ

Published:
Updated:

ಬೆಂಗಳೂರು: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಚರಿಸಲಾಗುತ್ತಿರುವ ಮಡೆ ಮಡೆಸ್ನಾನ ಮತ್ತು ಉಡುಪಿಯ ಶ್ರೀಕೃಷ್ಣಮಠದಲ್ಲಿನ ಪಂಕ್ತಿ ಭೇದ ಪದ್ಧತಿಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಆಗ್ರಹಿಸಿದೆ.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಕಾರ್ಯದರ್ಶಿ, ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ `ರಾಜ್ಯಕ್ಕೆ ಕೆಟ್ಟ ಹೆಸರು ತರುತ್ತಿರುವ ಈ ಕೆಟ್ಟ ಪದ್ಧತಿಗಳನ್ನು ಕೊನೆಗಾಣಿಸಲು ಸರ್ಕಾರ ಕಠಿಣ ಕಾನೂನನ್ನು ಜಾರಿಗೊಳಿಸಬೇಕು' ಎಂದು ಒತ್ತಾಯಿಸಿದರು.`ಜನರ ನಂಬಿಕೆಗಳ ಹೆಸರಿನಲ್ಲಿ ಅನಿಷ್ಟ ಪದ್ಧತಿಗಳ ಆಚರಣೆಗೆ ಅವಕಾಶ ಕೊಡುವುದರೆಂದರೆ, ದೇಶದ ಸಂವಿಧಾನದ ಮೂಲ ಆಶಯಗಳಿಗೆ ಅಗೌರವ ತೋರಿದಂತೆ. ಪುರೋಹಿತಶಾಹಿಗಳ ಹಿಡಿತ ಬಿಗಿಯಾಗಿರುವುದರಿಂದ ರಾಜ್ಯ ಸರ್ಕಾರವು ಅನಿಷ್ಟ ಪದ್ಧತಿಗಳನ್ನು ಕಾನೂನಿನ ಮೂಲಕ ನಿಷೇಧಿಸಲು ಹಿಂದೇಟು ಹಾಕುತ್ತಿದೆ' ಎಂದು ಅವರು ಟೀಕಿಸಿದರು.`ಮಡೆ ಮಡೆಸ್ನಾನ ಅಥವಾ ಎಡೆ ಸ್ನಾನಗಳ ನಡುವೆ ವ್ಯತ್ಯಾಸವೇನಿಲ್ಲ. ಬ್ರಾಹ್ಮಣರು ಉಂಡ ಎಲೆಗಳ ಮೇಲೆ ಬ್ರಾಹ್ಮಣರೇ ಆಗಲಿ, ಮಲೆಕುಡಿಯ ಆದಿವಾಸಿಗಳೇ ಅಥವಾ ಇತರ ಯಾವುದೇ ಜಾತಿಯ ಜನರೇ ಆಗಲಿ ಉರುಳಾಡುವುದರಿಂದ ದೋಷ ನಿವಾರಣೆಯಾಗುತ್ತದೆ ಎಂಬುದು ಅಂಧಶ್ರದ್ಧೆಯ ಪರಮಾವಧಿಯಾಗಿದೆ. ಎಡೆ ಸ್ನಾನದ ಬಗ್ಗೆ ಕೋರ್ಟ್‌ಗೆ ಸರ್ಕಾರ ಸಲ್ಲಿಸಿರುವ ಪ್ರಮಾಣ ಪತ್ರದಿಂದ ಗೊಂದಲ ಉಂಟಾಗಿದೆಯೇ ಹೊರತು ಕೆಟ್ಟ ಆಚರಣೆ ನಿಂತಿಲ್ಲ' ಎಂದು ಅವರು ಹೇಳಿದರು.ಪಕ್ಷದ ಕಾರ್ಯದರ್ಶಿ ಮಂಡಳಿಯ ಸದಸ್ಯ ಜಿ.ಎನ್.ನಾಗರಾಜ್ ಮಾತನಾಡಿ, `ಕಾನೂನು ರೂಪಿಸಿ, ಜಾರಿಗೆ ತರುವುದು ಸರ್ಕಾರದ ಕರ್ತವ್ಯ. ಕಾನೂನುಗಳ ಮೇಲೆ ಕೋರ್ಟ್‌ಗಳು ಅಭಿಪ್ರಾಯ ವ್ಯಕ್ತಪಡಿಸುತ್ತವೆ. ಜನರ ಒಳಿತಿಗಾಗಿ ಸರಿಯಾದ ಕಾನೂನನ್ನು ಜಾರಿಗೆ ತರಬೇಕಾದ್ದು ಸರ್ಕಾರದ ಜವಾಬ್ದಾರಿಯಾಗಿದೆ' ಎಂದರು.`ಸತಿ ಸಹಗಮನ, ದೇವದಾಸಿ, ಬೆತ್ತಲೆ ಸೇವೆ ಮೊದಲಾದ ಆಚರಣೆಗಳಿಗೂ ಜನರ ನಂಬಿಕೆಗಳೇ ಆಧಾರವಾಗಿತ್ತು. ಕಾನೂನು ಮೂಲಕ ಅವನ್ನು ನಿಷೇಧಿಸಿ ತಡೆ ಹಿಡಿಯಲು ಸಾಧ್ಯವಾಗಿದೆ' ಎಂದು ಅವರು ಅಭಿಪ್ರಾಯಪಟ್ಟರು.ಪಕ್ಷದ ಕಾರ್ಯದರ್ಶಿ ಮಂಡಳಿಯ ಮತ್ತೊಬ್ಬ ಸದಸ್ಯ ವಿ.ಜಿ.ಕೆ.ನಾಯರ್, `ಮಲೆ ಕುಡಿಯರ ಹೆಸರಿನಲ್ಲಿ ಇತರರು ಸಂಘ ರಚಿಸಿಕೊಂಡು ಅನಿಷ್ಟ ಪದ್ಧತಿ ಆಚರಣೆಗೆ ಕುಮ್ಮಕ್ಕು ನೀಡುತ್ತಿದ್ದಾರೆ' ಎಂದು ಆರೋಪಿಸಿದರು.`ಪಕ್ಷವು ಮಡೆ ಸ್ನಾನ ಮತ್ತು ಪಂಕ್ತಿ ಭೇದ ವಿರುದ್ಧ ಜನಾಂದೋಳನ ಹಮ್ಮಿಕೊಂಡಿದೆ. ಡಿಸೆಂಬರ್ 21ರಂದು ಕುಕ್ಕೆ ಸುಬ್ರಹ್ಮಣ್ಯದಿಂದ ಮಂಗಳೂರು ಮತ್ತು ಉಡುಪಿಗೆ ಕಾಲ್ನಡಿಗೆ ಜಾಥಾ ಆರಂಭಿಸಲಾಗುವುದು. ಡಿಸೆಂಬರ್ 27ರಂದು ಉಡುಪಿಯಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಲಾಗುವುದು' ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry