ಗುರುವಾರ , ಅಕ್ಟೋಬರ್ 17, 2019
22 °C

ಮಡೆಸ್ನಾನ: ಪೇಜಾವರ ಶ್ರೀ ಹೇಳಿಕೆಗೆ ಮತ್ತೆ ವಿರೋಧ

Published:
Updated:

ಬೆಂಗಳೂರು: ನಿಡುಮಾಮಿಡಿ ಮಹಾಸಂಸ್ಥಾನವು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ `ಮಡೆಸ್ನಾನ: ಒಂದು ಸಂವಾದ~ ಕಾರ್ಯಕ್ರಮದಲ್ಲಿ `ಸಂವಿಧಾನಕ್ಕಾಗಿ ಧರ್ಮಶಾಸ್ತ್ರವನ್ನು ಬಲಿ ಕೊಡುವುದಿಲ್ಲ~ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರು ನೀಡಿದ ಹೇಳಿಕೆ ಬಗ್ಗೆ ತೀವ್ರ ಚರ್ಚೆ ನಡೆಯಿತು.ಸಂವಾದದಲ್ಲಿ ಮಾತನಾಡಿದ ವಿಶ್ವೇಶತೀರ್ಥರು, `ಧರ್ಮಶಾಸ್ತ್ರ ಹಾಗೂ ರಾಷ್ಟ್ರದ ಸಂವಿಧಾನ ಎರಡನ್ನೂ ಒಪ್ಪುತ್ತೇನೆ. ಆದರೆ ಸಂವಿಧಾನಕ್ಕಾಗಿ ಧರ್ಮಶಾಸ್ತ್ರವನ್ನು ಬಲಿ ಕೊಡುವುದಿಲ್ಲ~ ಎಂದರು.ಇದಕ್ಕೆ ಕೆಲ ಸಭಿಕರು ಆಕ್ಷೇಪ ವ್ಯಕ್ತಪಡಿಸಿದರು. ಚಿಂತಕ ಪ್ರೊ.ಜಿ.ಕೆ.ಗೋವಿಂದಾವ್, ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ್ ಹಾಗೂ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಘಟಕದ ಸಂಚಾಲಕ ಮಾವಳ್ಳಿ ಶಂಕರ್ ಅಸಮಾಧಾನ ವ್ಯಕ್ತಪಡಿಸಿದರು. ಕೆಲವರು ಸಭಾಂಗಣದ ಹೊರಗೆ ಘೋಷಣೆ ಕೂಗಿದರು.ಬಳಿಕ ಪ್ರತಿಕ್ರಿಯಿಸಿದ ವಿಶ್ವೇಶತೀರ್ಥರು, `ಸಂವಿಧಾನ ಹಾಗೂ ಧರ್ಮಶಾಸ್ತ್ರವನ್ನು ಗೌರವಿಸುತ್ತೇನೆ. ಈ ಎರಡೂ ವಿಷಯ ಬಂದಾಗ ಸಂವಿಧಾನಕ್ಕೆ ವಿರೋಧವಾಗದಂತೆ ಶಾಸ್ತ್ರದೊಂದಿಗೆ ಸಮನ್ವಯ ಸಾಧಿಸಿಕೊಂಡು ಮುಂದುವರಿಯುತ್ತೇನೆ~ ಎಂದರು.ಮುಸ್ಲಿಮರು ಹಬ್ಬದ ಸಂದರ್ಭದಲ್ಲಿ ಒಂದೇ ತಟ್ಟೆಯಲ್ಲಿ ಆಹಾರ ಸೇವಿಸುವುದು ಕೂಡ ಎಂಜಲು ಸೇವಿಸಿದಂತೆ ಎಂಬುದಾಗಿ ವಿಶ್ವೇಶತೀರ್ಥರು ನೀಡಿದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಶಿವಮೊಗ್ಗದ ಮುನೀರ್, `ಅದು ಸಹ- ಭೋಜನವೇ ಹೊರತು ಎಂಜಲು ಸೇವಿಸಿದಂತಾಗುವುದಿಲ್ಲ. ಅಲ್ಲದೇ ಆ ರೀತಿ ಆಹಾರ ಸೇವಿಸುವುದು ಭ್ರಾತೃತ್ವದ ಪ್ರತೀಕ~ ಎಂದರು.ಬಳಿಕ ಪ್ರತ್ಯುತ್ತರ ನೀಡಿದ ವಿಶ್ವೇಶತೀರ್ಥರು, `ಒಂದು ತುತ್ತು ಸೇವಿಸಿ ಮತ್ತೆ ತಟ್ಟೆಯಲ್ಲಿನ ಆಹಾರವನ್ನು ತೆಗೆದುಕೊಂಡರೆ ಅದು ಎಂಜಲಾಗುತ್ತದೆ. ಹಾಗಾಗಿ ಒಂದೇ ತಟ್ಟೆಯಲ್ಲಿ ಒಟ್ಟಿಗೆ ಆಹಾರ ಸೇವಿಸುವುದು ಸಹ ಎಂಜಲು ಸೇವಿಸಿದಂತೆ. ಈ ಪದ್ಧತಿಗಳನ್ನು ಯಾರೊಬ್ಬರು ವಿರೋಧಿಸುವುದಿಲ್ಲ. ಹಾಗೆಂದು ಅನ್ಯ ಧರ್ಮೀಯರನ್ನು ದೂಷಿಸುವುದಿಲ್ಲ. ಹಿಂದೂ ಆಚರಣೆಗಳನ್ನೇ ವಿರೋಧಿಸುವ ಹಿಂದೂಗಳನ್ನು ಪ್ರಶ್ನಿಸುತ್ತಿದ್ದೇನೆ~ ಎಂದು ಹೇಳಿದರು. ಬಳಿಕ ಸಭಿಕರ ಲಿಖಿತ ಪ್ರಶ್ನೆಗಳಿಗೆ ಸಾರಾಂಶ ರೂಪದಲ್ಲಿ ಅವರು ತಮ್ಮ ಅಭಿಪ್ರಾಯ ತಿಳಿಸಿದರು.

Post Comments (+)