ಮಡೆಸ್ನಾನ ರೂಪಾಂತರ ಬೇಡ, ಹೋರಾಟಕ್ಕೂ ಸಿದ್ಧ

ಮಂಗಳವಾರ, ಜೂಲೈ 23, 2019
25 °C

ಮಡೆಸ್ನಾನ ರೂಪಾಂತರ ಬೇಡ, ಹೋರಾಟಕ್ಕೂ ಸಿದ್ಧ

Published:
Updated:

ಮಂಗಳೂರು: `ಕುಕ್ಕೆ ಸುಬ್ರಹ್ಮಣ್ಯದಲ್ಲಿ ತಲೆತಲಾಂತರದಿಂದ ನಡೆದುಕೊಂಡು ಬಂದಿರುವ ಮಡೆಮಡೆ ಸ್ನಾನ ಪದ್ಧತಿಗೆ ತರುವ ರೂಪಾಂತರವನ್ನು ಒಪ್ಪಿಕೊಳ್ಳಲಾಗದು. ಭಕ್ತರ ಭಾವನೆಗಳನ್ನು ಹತ್ತಿಕ್ಕುವ ಕೆಲಸವನ್ನು ಸರ್ಕಾರ ಮಾಡಬಾರದು. ಅಷ್ಟಮಂಗಲ ಪ್ರಶ್ನೆ ಇಟ್ಟು ಅದರಲ್ಲಿ ಸಿಗುವ ಪರಿಹಾರಕ್ಕೆ ಸ್ಥಳೀಯರು ಬದ್ಧರಾಗಿರುತ್ತಾರೆ~ ಎಂದು ಸುಬ್ರಹ್ಮಣ್ಯದ ಸಮಸ್ತ ನಾಗರಿಕರು ತಿಳಿಸಿದ್ದಾರೆ.ಸಮಸ್ತ ನಾಗರಿಕರ ಪರವಾಗಿ ಇಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಎನ್.ಎಸ್.ರಾಜೇಶ್, ದೇವಸ್ಥಾನದ ವಾಸ್ತುಶಿಲ್ಪಿ ಕೃಷ್ಣ ಪ್ರಸಾದ್ ಮುನಿಯಂಗಳ, ಧಾರ್ಮಿಕ ಕಾರ್ಯಕರ್ತ ಲಕ್ಷ್ಮೀಶ ಗಬ್ಲಡ್ಕ ಅವರು ಈ ವಿಷಯ ತಿಳಿಸಿದರಲ್ಲದೆ, ಭಕ್ತರ ಭಾವನೆಗೆ ವಿರುದ್ಧವಾಗಿ ಬಲವಂತದಿಂದ ಮಡೆಮಡೆ ಸ್ನಾನ ಸ್ಥಗಿತಗೊಳಿಸಿದರೆ ಅಥವಾ ರೂಪಾಂತರಗೊಳಿಸಿದರೆ ಅದರ ವಿರುದ್ಧ ಹೋರಾಟಕ್ಕೂ ಸಿದ್ಧ ಎಂದರು.`ಬ್ರಾಹ್ಮಣರು ಉಂಡ ಎಂಜಲೆಲೆಯ ಮೇಲೆ ನಾನು ಉರುಳುತ್ತೇನೆ ಎಂದು ಒಬ್ಬ ಭಕ್ತ ಹೇಳಿದರೂ ಅದಕ್ಕೆ ಅವಕಾಶ ಮಾಡಿಕೊಡುವುದು ಸರ್ಕಾರ, ಧಾರ್ಮಿಕ ದತ್ತಿ ಇಲಾಖೆ ಮತ್ತು ದೇವಸ್ಥಾನದ ಆಡಳಿತ ಮಂಡಳಿಯ ಕರ್ತವ್ಯ. ಸ್ವಯಂಪ್ರೇರಣೆಯಿಂದ ಅಥವಾ ಇನ್ನೊಬ್ಬರ ಉಪದೇಶದಿಂದ ಯಾರಾದರೂ ಈ ಆಚರಣೆಯನ್ನು ಮಾಡುವುದಿಲ್ಲ ಎಂದು ಹೇಳಿದರೆ ಸ್ಥಳೀಯರಾದ ನಾವು ಅದನ್ನು ಗೌರವಪೂರ್ವಕವಾಗಿ ಒಪ್ಪಿಕೊಳ್ಳುತ್ತೇವೆ. ಅವರಿಗೆ ಸರ್ವವಿಧದ ಸಹಕಾರ ನೀಡುತ್ತೇವೆ~ ಎಂದು ರಾಜೇಶ್ ಅವರು ಸ್ಪಷ್ಟಪಡಿಸಿದರು.`ಸರ್ಕಾರ ಯಾವುದೇ ಕಾರಣಕ್ಕೂ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿಯುವ ಯತ್ನ ಮಾಡಬಾರದು. ಭಕ್ತರಿಗೆ ಅನುಕೂಲಕರ ಸನ್ನಿವೇಶವನ್ನು ದೇವಸ್ಥಾನದ ಆಡಳಿತ ಮಂಡಳಿಯವರು ಒದಗಿಸಬೇಕು. ಸಾರ್ವಜನಿಕರ ಹಿತ ಕಾಯಲು ಹೊರಟಿರುವ ಸಂಘಟನೆಗಳ ಪದಾಧಿಕಾರಿಗಳು, ಪ್ರಗತಿಪರರೆನ್ನುವ ಮಠಾಧೀಶರು ಇಂತಹ ಸೇವೆ ಸಲ್ಲಿಸುವವರ ಮನಃಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಈ ಆಚರಣೆಗೆ ಇನ್ನೂ ಹಲವು ತಿಂಗಳು ಬಾಕಿ ಇರುವಾಗಲೇ ಸೂಕ್ತ ಚರ್ಚೆ, ಸಮಾಲೋಚನೆ ನಡೆಯಬೇಕು. ಒಂದು ಪರಿಹಾರ ಮಾರ್ಗ ಕಂಡುಕೊಳ್ಳಬೇಕು. ಕೊನೆಯ ಕ್ಷಣದಲ್ಲಿ ಉದ್ರೇಕಕಾರಿ ಹೇಳಿಕೆ ನೀಡಿ, ಪ್ರಚೋದಕ, ಭಯಾನಕ ವಾತಾವರಣ ನಿರ್ಮಿಸಬಾರದು~ ಎಂದು ಅವರು ಮನವಿ ಮಾಡಿದರು.ಬೇರೆಡೆಯೂ ಮಡೆಸ್ನಾನ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾತ್ರವಷ್ಟೇ ಮಡೆಮಡೆ ಸ್ನಾನ ನಡೆಯುವುದಲ್ಲ. ಇಚ್ಲಂಪಾಡಿ ಚರ್ಚ್‌ನಲ್ಲೂ ಉರುಳು ಸೇವೆ ನಡೆಯುತ್ತದೆ. ಉಡುಪಿ ಸಹಿತ ರಾಜ್ಯದ ಇನ್ನೂ ಹಲವು ಕಡೆಗಳಲ್ಲಿ ಇಂತಹದೇ ಸೇವೆ ನಡೆಯುತ್ತದೆ. ತುಮಕೂರಿನ ದೇವಸ್ಥಾನವೊಂದರಲ್ಲಿ ದಲಿತರ ಎಂಜಲೆಲೆಯ ಮೇಲೆ ಬ್ರಾಹ್ಮಣರು ಉರುಳುವ ಪದ್ಧತಿ ನಡೆದುಕೊಂಡು ಬಂದಿದೆ. ಸುಬ್ರಹ್ಮಣದಲ್ಲಿ ಬೀದಿ ಮಡೆ ಸ್ನಾನವೂ ನಡೆಯುತ್ತದೆ.ಇದ್ಯಾವುದನ್ನೂ ಪ್ರಶ್ನಿಸದ ವಿಚಾರವಾದಿಗಳು, ಮಠಾಧೀಶರು ಬ್ರಾಹ್ಮಣರ ಎಂಜಲೆಲೆಯನ್ನೇ ಗುರಿಯಾಗಿ ಇಟ್ಟುಕೊಂಡು ಸುಧಾರಣೆಯ ಮಾತನ್ನಾಡಿರುವುದು ಏಕೆ ಎಂದು ಲಕ್ಷ್ಮೀಶ ಗಬ್ಲಡ್ಕ ಪ್ರಶ್ನಿಸಿದರು.

`ಅಷ್ಟಮಂಗಲ ಪ್ರಶ್ನೆಯ ಬಗ್ಗೆ ಬಹುತೇಕ ಎಲ್ಲರಿಗೂ ನಂಬಿಕೆ ಇದೆ. ಮಡೆಸ್ನಾನದ ರೂಪಾಂತರದ ಬಗ್ಗೆ ಸಲಹೆ ನೀಡುವುದರ ಬದಲಿಗೆ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬರುವ ಪರಿಹಾರಕ್ಕೆ ನಾವೆಲ್ಲ ಬದ್ಧರಾಗಿರೋಣ.

 

ಬ್ರಾಹ್ಮಣರು ಉಂಡ ಎಲೆಯ ಬದಲಿಗೆ ಇತರ ಮಾರ್ಗೋಪಾಯ ಏನಾದರೂ ಇದೆಯೇ ಎಂದೂ ಕೇಳೋಣ. ಅಲ್ಲಿ ಸಿಗುವ ಪರಿಹಾರಕ್ಕೆ ನಮ್ಮ ಸಮ್ಮತಿ ಇದೆ. ಇದೀಗ ಮುಂದಿಟ್ಟಿರುವ ರೂಪಾಂತರಕ್ಕೆ ಅರ್ಥವೇ ಇಲ್ಲ. ದನ ತಿಂದು ಉಳಿಸಿದ ಎಲೆ ಎಂಜಲೆಲೆಯೇ ಅಲ್ಲ, ಬ್ರಾಹ್ಮಣರಿಗೆ ಊಟ ಬಡಿಸದೆ ಷಷ್ಠಿ ಸಮಯದಲ್ಲಿ ಜಾತ್ರೆ ಹೇಗೆ ನಡೆದೀತು ಎಂಬುದನ್ನೂ ನೋಡೋಣ. ಬ್ರಾಹ್ಮಣರು ಯಾವುದಕ್ಕೂ ಸಿದ್ಧ. ಭಕ್ತರ ಭಾವನೆಯನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಿ ಮುಂದಿನ ಕ್ರಮ ಕೈಗೊಳ್ಳಬೇಕು~ ಎಂದು ಕೃಷ್ಣ ಪ್ರಸಾದ್ ಮುನಿಯಂಗಳ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮೋಂಟ ಮಲೆಕುಡಿಯ, ಎ.ವಿ.ನಾಗೇಶ್, ಹರೀಶ್ ಇಂಜಾಡಿ, ಅಶೋಕ್ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry