ಗುರುವಾರ , ಅಕ್ಟೋಬರ್ 17, 2019
27 °C

ಮಡೆಸ್ನಾನ: 8ರಂದು ಬಹಿರಂಗ ಚರ್ಚೆ

Published:
Updated:

ಬೆಂಗಳೂರು: `ಸ್ವಾಭಿಮಾನ ಮತ್ತು ದುರಭಿಮಾನಗಳ ನಡುವಿನ ಗೆರೆ ಬಹಳ ಸೂಕ್ಷ್ಮವಾಗಿದೆ. ಇವುಗಳ ನಡುವಿನ ವ್ಯತ್ಯಾಸ ಗುರುತಿಸುವುದೇ ಕಷ್ಟಕರವಾದ ಗೊಂದಲದ ಸ್ಥಿತಿ ಇಂದು ನಿರ್ಮಾಣವಾಗಿದೆ~ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಕಳವಳ ವ್ಯಕ್ತ ಪಡಿಸಿದರು.ನಗರದಲ್ಲಿ ಗುರುವಾರ ರಾಜ್ಯ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಸ್ವಾಭಿಮಾನ ಜಾಗೃತಿ ದಿನದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.`ದಲಿತರಿಂದ ದಲಿತರ ಉದ್ಧಾರ ಸಾಧ್ಯ ಎಂಬ ಮನೋಭಾವ ದೂರಾಗಬೇಕು. ಸಮಾಜದ ಎಲ್ಲಾ ಪ್ರಗತಿಪರರೂ ಒಟ್ಟಾಗಿ ಪ್ರಯತ್ನಿಸಿದರೆ ಮಾತ್ರ ಸಮಾನತೆ ಸಾಧಿಸಲು ಸಾಧ್ಯ. ದಲಿತರು, ತಳ ವರ್ಗದ ಜನರು ಹಾಗೂ ಶೋಷಿತರಿಗೆ ಅನ್ಯಾಯ, ಶೋಷಣೆಗಳಾದ ಸಂದರ್ಭದಲ್ಲಿ ಎಲ್ಲರೂ ಅದನ್ನು ವಿರೋಧಿಸಬೇಕು. ಮಡೆಸ್ನಾನದ ಆಚರಣೆಗೆ ಎಲ್ಲೆಡೆಯಿಂದಲೂ ಪ್ರತಿರೋಧ ವ್ಯಕ್ತವಾದರೂ ಸರ್ಕಾರ ಅಂತಹ ಅನಿಷ್ಟ ಆಚರಣೆಯನ್ನು ನಿಷೇಧಿಸುವ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ. ಮಡೆಸ್ನಾನ ನಿಷೇಧ ವಿಚಾರವಾಗಿ ಇದೇ 8 ರಂದು ಪೇಜಾವರ ಸ್ವಾಮೀಜಿ ಅವರನ್ನು ಬಹಿರಂಗ ಚರ್ಚೆಗೆ ಕರೆಯಲಾಗಿದೆ~ ಎಂದು ಅವರು ತಿಳಿಸಿದರು.ಚಿಂತಕ ಪ್ರೊ.ಜಿ.ಕೆ.ಗೋವಿಂದರಾವ್ ಮಾತನಾಡಿ, `ಮಡೆಸ್ನಾನದ ವಿಚಾರದಲ್ಲಿ ವೈದ್ಯರೂ ಆಗಿರುವ ಸಚಿವ ವಿ.ಎಸ್.ಆಚಾರ್ಯ ಮಾನಸಿಕ ರೋಗಿಯಂತೆ ವರ್ತಿಸುತ್ತಿದ್ದಾರೆ. ಎಂಜಲೆಲೆಯ ಮೇಲೆ ಉರುಳಾಡುವ ಮೂಲ ಚರ್ಮ ವ್ಯಾಧಿಗಳು ದೂರಾಗುತ್ತವೆ ಎಂಬ ಮೂಢನಂಬಿಕೆಯನ್ನು ಬಿತ್ತುವ ಮೂಲಕ ದಲಿತರನ್ನು, ತಳಮಟ್ಟದ ಜನರನ್ನು ತುಳಿಯುವ ಪ್ರಯತ್ನ ನಡೆಸಲಾಗುತ್ತಿದೆ~ ಎಂದು ಕಿಡಿಕಾರಿದರು.`ಅಣ್ಣಾ ಹಜಾರೆ ಗಾಂಧಿ ಟೋಪಿ ಹಾಕಿಕೊಂಡು ಇಡೀ ಭಾರತಕ್ಕೇ ಟೋಪಿ ಹಾಕಲು ಹೊರಟಿದ್ದಾರೆ. ಸ್ವಂತ ಬುದ್ಧಿ ಇಲ್ಲದ ಹಜಾರೆಯಿಂದ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಿಲ್ಲ. ಹಜಾರೆ ಹಾಗೂ ಪೇಜಾವರ ಸ್ವಾಮೀಜಿ ಇಬ್ಬರೂ ಬೌದ್ಧಿಕ ಭ್ರಷ್ಟಾಚಾರಿಗಳು.  ಈ ಬೌದ್ಧಿಕ ಭ್ರಷ್ಟಾಚಾರಿಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ~ ಎಂದು ಅವರು ವಿಷಾದಿಸಿದರು.

 

Post Comments (+)