ಮಡೆ ಮಡೆ ಸ್ನಾನಕ್ಕೆ ಸಮರ್ಥನೆ ನಾಚಿಕೆಗೇಡು

7

ಮಡೆ ಮಡೆ ಸ್ನಾನಕ್ಕೆ ಸಮರ್ಥನೆ ನಾಚಿಕೆಗೇಡು

Published:
Updated:

ಬೀದರ್: ಮಡೆ ಮಡೆ ಸ್ನಾನ ಪದ್ಧತಿಯನ್ನು ರಾಜ್ಯದ ಉನ್ನತ ಶಿಕ್ಷಣ ಸಚಿವರು ಸಮರ್ಥಿಸಿರುವುದು ನಾಚಿಕೆಗೇಡು ಎಂದು ಗದುಗಿನ ಜಗದ್ಗುರು ಡಾ. ಸಿದ್ಧಲಿಂಗ ಸ್ವಾಮೀಜಿ ಹೇಳಿದರು.ನಗರದ ಬಸವಗಿರಿಯಲ್ಲಿ ಭಾನುವಾರ ವಚನ ವಿಜಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಹೆಚ್ಚಿನ ಪ್ರಮಾಣದಲ್ಲಿ ಸಾಕ್ಷರರಿರುವ ಕರಾವಳಿ ಜಿಲ್ಲೆಯಲ್ಲಿ ಕಳೆದ 500 ವರ್ಷಗಳಿಂದ ಎಂಜಲೆಲೆ ಮೇಲೆ ಉರುಳು ಸೇವೆ ನಡೆಸಿಕೊಂಡು ಬರುತ್ತಿರುವುದು ಅಸಹ್ಯ ಹುಟ್ಟಿಸುವಂಥದ್ದು. ಸರ್ಕಾರದಲ್ಲಿರುವ ಸಚಿವರೊಬ್ಬರು ಇದನ್ನು ಸಮರ್ಥಿಸಿ ಹೇಳಿಕೆ ನೀಡಿರುವುದು ಸರಿಯಲ್ಲ ಎಂದರು.ಈ ರೀತಿಯ ಕಂದಾಚಾರ ಹೋಗಲಾಡಿಸಲು ರಾಜ್ಯ ಸರ್ಕಾರ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದರು.ರಾಜ್ಯದಲ್ಲಿ ಅಗತ್ಯ ಇರುವುದು ವಚನ ವಿಶ್ವವಿದ್ಯಾಲಯದ್ದು. ಆದರೆ, ಸಂಸ್ಕೃತ ವಿಶ್ವವಿದ್ಯಾಲಯ ಆರಂಭಿಸಲಾಗಿದೆ. ಜನಸಾಮಾನ್ಯರನ್ನು ಮರೆತವರು ಮಾತ್ರ ವಚನ ವಿಶ್ವವಿದ್ಯಾಲಯ ಮಾಡದೇ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪಿಸುತ್ತಾರೆ ಎಂದು ಖಾರವಾಗಿ ನುಡಿದರು.ವಚನ ಸಾಹಿತ್ಯವನ್ನು ಪ್ರಚುರಪಡಿಸಲು ಸರ್ಕಾರ ಮುಂದಾಗಬೇಕು ಎಂದು ಹೇಳಿದರು.

ವಚನ ಸಾಹಿತ್ಯ ಮಾನವ ಕುಲದ ಭವಿಷ್ಯ. ಮಾನವನ ಬದುಕಿನ ಬಗ್ಗೆ ಭರವಸೆ ಕೊಡುವ ಸಾಹಿತ್ಯವಾಗಿದೆ. ದುರ್ದೈವದಿಂದ ಲಿಂಗಾಯತರೆ ಅವುಗಳನ್ನು ಅರ್ಥ ಮಾಡಿಕೊಂಡಿಲ್ಲ ಎಂದು ವಿಷಾದಿಸಿದರು.ವಚನ ಸಾಹಿತ್ಯವನ್ನು ಹಿಂದಿಯಲ್ಲಿ ಭಾಷಾಂತರಿಸಿ ಸಂಸತ್ತಿನಲ್ಲಿ ಎಲ್ಲ ಸಂಸದರಿಗೆ ಮುಟ್ಟಿಸಿರುವ ಸಂಸದ ಎನ್. ಧರ್ಮಸಿಂಗ್ ಅವರ ಕಾರ್ಯ ಶ್ಲಾಘನೀಯ. ಧರ್ಮಸಿಂಗ್ ಹರಣಗಳಿಲ್ಲದ ಮುಖ್ಯಮಂತ್ರಿ ಮತ್ತು ರಾಜಕಾರಣಿ ಎಂದು ಬಣ್ಣಿಸಿದರು.ಅಕ್ಕ ಅನ್ನಪೂರ್ಣ ಅವರು ಗುರುವಚನ ಪರುಷ ಕಟ್ಟೆ ಪ್ರಾರಂಭಿಸಿ ಐತಿಹಾಸಿಕ ಕಾರ್ಯ ಮಾಡಿದ್ದಾರೆ. ಜಗತ್ತಿನ ಜನ ಬಸವಗಿರಿಗೆ ಬಂದು ನೋಡುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ನೇತೃತ್ವ ವಹಿಸಿದ್ದರು. ಡಾ. ಗಂಗಾಂಬಿಕೆ ಅಕ್ಕ ಅಧ್ಯಕ್ಷತೆ ವಹಿಸಿದ್ದರು. ಸಂಸದ ಎನ್. ಧರ್ಮಸಿಂಗ್, ಶಾಸಕರಾದ ಬಂಡೆಪ್ಪ ಕಾಶೆಂಪೂರ್, ಈಶ್ವರ ಖಂಡ್ರೆ, ರಹೀಮ್‌ಖಾನ್, ಧಾರವಾಡದ ಬಸವಶಾಂತಿ ಮಿಷನ್ ಅಧ್ಯಕ್ಷ ಮಹಾದೇವ ಹೊರಟ್ಟಿ, ಸ್ವಾಗತ ಸಮಿತಿಯ ಗೌರವಾಧ್ಯಕ್ಷ ದಿಲೀಪಕುಮಾರ ತಾಳಂಪಳ್ಳಿ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಸವರಾಜ ಬುಳ್ಳಾ, ಪ್ರಮುಖರಾದ ಶಿವರಾಜ ನರಶೆಟ್ಟಿ, ಸುಶೀಲಮ್ಮ, ಬಸವರಾಜ ಜಾಬಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.ಕಲಾವಿದ ಈಶ್ವರಪ್ಪ ಪಾಂಚಾಳ್ ವಚನ ಸಂಗೀತ ನಡೆಸಿಕೊಟ್ಟರು. ನಾಟ್ಯಶ್ರೀ ನೃತ್ಯಾಲಯದ ಮಕ್ಕಳು ವಚನ ನೃತ್ಯ ಪ್ರಸ್ತುತಪಡಿಸಿದರು. ಜಯರಾಜ ಖಂಡ್ರೆ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry