ಮಡೆ ಸ್ನಾನಕ್ಕೆ ತಡೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

7

ಮಡೆ ಸ್ನಾನಕ್ಕೆ ತಡೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

Published:
Updated:

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಚರಣೆಯಲ್ಲಿರುವ ಮಡೆ ಸ್ನಾನವನ್ನು `ಎಡೆ ಸ್ನಾನ'ವನ್ನಾಗಿ ರೂಪಾಂತರಿಸಲು ಸಮ್ಮತಿ ಸೂಚಿಸಿ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ನೀಡಿರುವ ತಡೆಯಾಜ್ಞೆಯನ್ನು ಪ್ರಶ್ನಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.`ಮಡೆಸ್ನಾನದ ಬದಲು ಎಡೆಸ್ನಾನ ಮುಂದುವರಿಸಲು ಅವಕಾಶ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗುವುದು' ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಬ್ರಾಹ್ಮಣರು ಉಂಡು ಬಿಟ್ಟ ಎಂಜಲು ಎಲೆಯ ಮೇಲೆ, ಭಕ್ತರು ಉರುಳುಸೇವೆ ನಡೆಸುವ ಪದ್ಧತಿಯನ್ನು ಬದಲಾಯಿಸಲಾಗುವುದು. ದೇವರಿಗೆ ನೈವೇದ್ಯದ ರೂಪದಲ್ಲಿ ನೀಡಿದ ಪ್ರಸಾದವನ್ನು ದೇವಸ್ಥಾನದ ಗರ್ಭಗುಡಿಯ ಹೊರಭಾಗದಲ್ಲಿ ಇಟ್ಟು, ಅದರ ಮೇಲೆ ಉರುಳುಸೇವೆ ನಡೆಸಲು ಅವಕಾಶ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿತ್ತು. ಇದನ್ನು ಮಾನ್ಯ ಮಾಡಿದ ಕೋರ್ಟ್, ದೇವಸ್ಥಾನದಲ್ಲಿ ಪಂಕ್ತಿಭೇದ ನಿಷೇಧಿಸಿ ಆದೇಶಿಸಿತ್ತು.ಹೈಕೋರ್ಟ್ ಆದೇಶ ಪ್ರಶ್ನಿಸಿ ಸ್ಥಳೀಯರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ಎಡೆ ಸ್ನಾನಕ್ಕೆ ತಡೆ ನೀಡಿದ ಸುಪ್ರೀಂ ನ್ಯಾಯಪೀಠ, ಹಳೆಯ ಪದ್ಧತಿಯನ್ನೇ ಮುಂದುವರಿಸಲು ಅವಕಾಶ ನೀಡಿದೆ.ನೇಮಕ ಶೀಘ್ರ: ಮುಜರಾಯಿ ಇಲಾಖೆಯಲ್ಲಿ 618 ಪ್ರಥಮ ದರ್ಜೆ ಸಹಾಯಕರು ಮತ್ತು 678 ದ್ವಿತೀಯ ದರ್ಜೆ ಸಹಾಯಕರ ನೇಮಕ ಪ್ರಕ್ರಿಯೆಗೆ ಒಂದು ತಿಂಗಳಲ್ಲಿ ಚಾಲನೆ ನೀಡಲಾಗುವುದು. ಬೇಸಿಗೆ ರಜೆಯಲ್ಲಿ ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟುಕೊಂಡು, ರಾಜ್ಯದ ಆಯ್ದ ದೇವಸ್ಥಾನಗಳಲ್ಲಿ ಭಜನಾ ಸಪ್ತಾಹ ಹಮ್ಮಿಕೊಳ್ಳಲಾಗುವುದು. `ಎ' ವರ್ಗದ 125 ಮತ್ತು `ಬಿ' ವರ್ಗದ 189 ದೇವಸ್ಥಾನಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಅಗತ್ಯ ಕಂಡುಬಂದರೆ, ಕಾರ್ಯಕ್ರಮದ ಖರ್ಚನ್ನು ಸರ್ಕಾರ ಭರಿಸಲಿದೆ ಎಂದರು.ನಕಲಿ ದೇವಮಾನವರು, ಹಿಂದೂ ದೇವತೆಗಳನ್ನು ಕೆಟ್ಟದಾಗಿ ಚಿತ್ರಿಸುವವರ ಬಗ್ಗೆ ದೂರುಗಳು ಬಂದಿವೆ. ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದರು.  ಶಬರಿಮಲೆ ಬಳಿಯ ನೀಲಕಲ್‌ನಲ್ಲಿ `ಕರ್ನಾಟಕ ಭವನ' ನಿರ್ಮಾಣಕ್ಕೆ 10 ಕೋಟಿ ಮೀಸಲಿಡಲಾಗಿದ್ದು ಜ. 6ರಂದು ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry