ಮಣಿದ ಮೊಯಿಲಿ: ರಾತ್ರಿ ಬಂಕ್ ಬಂದ್ ಇಲ್ಲ

7
ಪ್ರಜಾವಾಣಿ ವಾರ್ತೆ

ಮಣಿದ ಮೊಯಿಲಿ: ರಾತ್ರಿ ಬಂಕ್ ಬಂದ್ ಇಲ್ಲ

Published:
Updated:

ನವದೆಹಲಿ: ರಾತ್ರಿ ವೇಳೆ ಪೆಟ್ರೋಲ್ ಬಂಕ್‌ಗಳನ್ನು ಬಂದ್ ಮಾಡುವ ಮೂಲಕ ಪೆಟ್ರೋಲ್ ಬಳಕೆ ಮೇಲೆ ಮಿತಿ ಹೇರಲು ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದ ಪೆಟ್ರೋಲಿಯಂ ಸಚಿವ ಎಂ. ವೀರಪ್ಪ ಮೊಯಿಲಿ ಅವರು ವಿವಿಧ ರಾಜಕೀಯ ಪಕ್ಷಗಳು ಸೇರಿದಂತೆ ಸ್ವತಃ ಪ್ರಧಾನಿ ಕಚೇರಿಯಿಂದಲೇ ಟೀಕೆಗೆ ಗುರಿಯಾಗಿದ್ದಾರೆ.ಈ ಹೇಳಿಕೆ ನೀಡಿದ ಮಾರನೇ ದಿನವೇ ನಿಲುವು ದಿಢೀರ್ ಬದಲಿಸಿ, ಅಂತಹ ಪ್ರಸ್ತಾವ ತಮ್ಮ ಮುಂದಿಲ್ಲ ಎಂದು ಹೇಳಿದ್ದಾರೆ.ಉದ್ದೇಶಿತ ಪ್ರಸ್ತಾವವನ್ನು ಪ್ರಧಾನಿ ಕಚೇರಿ ತಿರಸ್ಕರಿಸಿರುವುದರಿಂದ ತೀವ್ರ ಮುಜುಗರಕ್ಕೆ ಒಳಗಾದ ಬಳಿಕ ಪೆಟ್ರೋಲಿಯಂ ಸಚಿವಾಲಯ ಪ್ರಕಟಣೆ ಹೊರಡಿಸಿ, ರಾತ್ರಿ ವೇಳೆ ಪೆಟ್ರೋಲ್ ಬಂಕ್ ಬಂದ್ ಮಾಡುವ ಯಾವುದೇ ಪ್ರಸ್ತಾವವೂ ಇಲ್ಲ ಎಂದು ಸ್ಪಷ್ಟನೆ ನೀಡಿದೆ.ಸರ್ಕಾರದ ಕ್ರಮ ಜನರ ಮೇಲೆ ಆರ್ಥಿಕ ತುರ್ತು ಪರಿಸ್ಥಿತಿ ಹೇರುವಂತಹದ್ದಾಗಿದೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ.`ರಾತ್ರಿ ವೇಳೆ ಪೆಟ್ರೋಲ್ ಬಂಕ್‌ಗಳನ್ನು ಬಂದ್ ಮಾಡಬೇಕೆಂಬ ಪ್ರಸ್ತಾವ ನಮ್ಮದಲ್ಲ. ಇಂತಹದ್ದೊಂದು ಪ್ರಸ್ತಾವ ಬಂದಿದ್ದು ಸಾರ್ವಜನಿಕರಿಂದ. ದಿನದ ಯಾವುದೇ ಸಂದರ್ಭದಲ್ಲಿ ಪೆಟ್ರೋಲ್ ಬಂಕ್‌ಗಳನ್ನು ಮುಚ್ಚಿಡುವ ಪ್ರಸ್ತಾವ ನಮ್ಮ ಮುಂದಿಲ್ಲ' ಎಂದು ಸೋಮವಾರ ಸಂಸತ್ತಿನ ಹೊರಗಡೆ  ಮೊಯಿಲಿ ಅವರು ಸುದ್ದಿಗಾರರಿಗೆ ತಿಳಿಸಿದರು.`ಪೆಟ್ರೋಲ್, ಡೀಸೆಲ್ ಉಳಿತಾಯ ಮಾಡುವ ಸಂಬಂಧ ನನಗೆ ಹಲವರು ಪ್ರಸ್ತಾವಗಳನ್ನು ಕಳುಹಿಸಿದ್ದಾರೆ. ಆದರೆ, ಆ ಎಲ್ಲ ಪ್ರಸ್ತಾವಗಳನ್ನು ಒಪ್ಪಿಕೊಳ್ಳಲೇಬೇಕು ಅಥವಾ ಪೆಟ್ರೋಲ್ ಪಂಪ್‌ಗಳನ್ನು ಒತ್ತಾಯಪೂರ್ವಕವಾಗಿ ಮುಚ್ಚಬೇಕು ಎಂಬ ಅರ್ಥವಲ್ಲ' ಎಂದರು.`ಪೆಟ್ರೋಲ್ ಬಂಕ್‌ಗಳನ್ನು ಮುಚ್ಚುವ ಸಂಬಂಧ ಈಗಾಗಲೇ ತೀರ್ಮಾನ ಕೈಗೊಳ್ಳಲಾಗಿದೆ  ಎಂದು ಹೇಳುತ್ತಿರುವುದು ಶುದ್ಧ ತಪ್ಪು' ಎಂದು ಅವರು ಸ್ಪಷ್ಟಪಡಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry