ಮಣಿ ಗುಡ್ಡೆಯ ಮುಂದೆ ಧ್ಯಾನಸ್ಥರು
ವಿಲ್ಸನ್ ಗಾರ್ಡನ್ನ 10ನೇ ಮುಖ್ಯರಸ್ತೆಯ 14ನೇ ಅಡ್ಡರಸ್ತೆಯ ಆ ಮನೆಯ ಹಾಲ್ನಲ್ಲಿ ಹದಿನೈದು ಮಂದಿ ಮಹಿಳೆಯರು ವೃತ್ತಾಕಾರದಲ್ಲಿ ಕುಳಿತು ಜಪ ನಿರತರಾಗಿದ್ದರು. ಮಧ್ಯೆ ಕೆಂಪುಮಣಿಯ ಗುಡ್ಡೆ. ಪ್ರತಿಯೊಬ್ಬರ ಮುಂದೆ, ಅದೇ ಗುಡ್ಡೆಯಿಂದ ಎತ್ತಿ ಪಿಂಗಾಣಿ ಬಟ್ಟಲಿನಲ್ಲಿ ತುಂಬಿಕೊಂಡ ಬೊಗಸೆಯಷ್ಟು ಮಣಿಗಳು... ಬಂದ ಅತಿಥಿಗಳತ್ತಲೂ ನೋಟ ಹರಿಸಲಿಲ್ಲ. ಧ್ಯಾನದಲ್ಲಿ ತನ್ಮಯರಾಗಿದ್ದರು.
ಕಣ್ಮುಚ್ಚಿ ಧ್ಯಾನಸ್ಥರಾಗಿದ್ದ ಮನೆಯೊಡತಿ ನವೀನ್ತಾಜ್ ಅವರನ್ನು ಮಗ ಸಬ್ರೇಶ್ ತಟ್ಟಿ ಎಚ್ಚರಿಸಿದಾಗಲೇ ಇಹಕ್ಕೆ ಬಂದದ್ದು. ಜಪದ ಗುಂಗಿನಲ್ಲೇ ಅತಿಥಿ ಸತ್ಕಾರಕ್ಕೆ ಲಗುಬಗೆ... ಜೊತೆಗೇ ಮಾತಿನ ಮೆರವಣಿಗೆ... 58ರ ಹರೆಯದಲ್ಲೂ ನಳನಳಿಸುತ್ತಿರುವ ಸುಂದರಿಯ ಮುಖದಲ್ಲಿ ದೈವಿಕ ಕಳೆ...
ಈಗಿನ ತಲೆಮಾರು ಮಾಡುತ್ತಿರುವ ರಂಜಾನ್ ಆಚರಣೆ ಸಂಪ್ರದಾಯಬದ್ಧವಾಗಿಲ್ಲ, ಕುರ್ಆನ್ಗೆ ನಿಷ್ಠವಾಗಿಲ್ಲ ಎಂಬ ಬಲವಾದ ಆಕ್ಷೇಪ ಅವರದು.
`ಹೊಟ್ಟೆ ತುಂಬಾ- ಬಗೆಬಗೆ ಮಾಂಸಾಹಾರ, ಸಮೋಸ, ಸಿಹಿ, ಅದು ಇದು- ತಿನ್ನಿ ಅಂತ ಪ್ರವಾದಿಗಳು ಹೇಳಿಲ್ಲ. ಅರೆಹೊಟ್ಟೆ ತಿನ್ನಬೇಕು, ಉಪವಾಸವಿದ್ದು ದೇವರ ಧ್ಯಾನ ಮಾಡಬೇಕು, ಇಡೀ ವರ್ಷ ಸಂಪಾದಿಸಿದ್ದೇನಿದೆಯೋ ಅದರ ಒಂದು ಪಾಲನ್ನಾದರೂ ದಾನಧರ್ಮಕ್ಕೆ ಮೀಸಲಿಡು ಅಂದಿರೋದು ಅವರು. ಈ ಮಕ್ಕಳು ಇಷ್ಟಿಷ್ಟು ದೊಡ್ಡ ಪಾರ್ಸೆಲ್ ತರುತ್ತಾರೆ. ನನಗೆ ಸರಿಕಾಣಲ್ಲ~ ಅಂತ ಎಲ್ಲರ ಮುಂದೆ ಮತ್ತೊಮ್ಮೆ ತಕರಾರು ತೆಗೆದರು.
ಆದರೆ ಶಬ್ರೇಶ್ ಮತ್ತು ಅಂಕಲ್ ಸಮೀರ್ ಕೊಡುವ ಸಮಜಾಯಿಷಿ ಬೇರೆ. `ನಮ್ಮ ಈ ಪ್ರದೇಶದಲ್ಲಿ ಇರುವ ವಿಧವೆಯರನ್ನು ಹುಡುಕಿ ನಾವು ದಾನಧರ್ಮ ಮಾಡುತ್ತೇವೆ.
ಮನೆಯಲ್ಲಿ ಪುರುಷರಿದ್ದರೆ ಹೇಗೋ ಸಂಪಾದನೆ ಮಾಡಿ ತಂದು ಹೆಂಡತಿ ಮಕ್ಕಳಿಗೆ ಊಟ ಕೊಟ್ಟಾನು. ಆದರೆ ದುಡಿಯುವ ಗಂಡಸು ಇಲ್ಲದ ಮನೆಯಲ್ಲಿ ಕಷ್ಟ ಹೆಚ್ಚು. ಈಗ ನಾವು ರಂಜಾನ್ ಮಾಸದ ಮೂರನೇ ಪಾದದಲ್ಲಿದ್ದೇವೆ. ಹೀಗಾಗಿ ಹಬ್ಬಕ್ಕೆ ಮುಂಚಿತವಾಗಿ ಒಂದು ಮನೆಯಲ್ಲಿ ಭರ್ಜರಿಯಾಗಿ ಹಬ್ಬ ಮಾಡಲು ಬೇಕುಬೇಕಾದ ಅಕ್ಕಿ, ಕಾಳು, ಹಿಟ್ಟು, ಎಣ್ಣೆ, ಹಾಲು, ಸಕ್ಕರೆ ಮುಂತಾದ ದಿನಬಳಕೆಯ ಸಾಮಗ್ರಿಗಳ ಕಟ್ಟು ಮಾಡಿ ಹಂಚುತ್ತೇವೆ.
ರಂಜಾನ್ ಉದ್ದಕ್ಕೂ ನಮ್ಮ ಮಸೀದಿಯಲ್ಲಿ ಪ್ರತಿನಿತ್ಯ ನಮ್ಮ ಗೆಳೆಯರೊಂದಿಗೆ ಸೇರಿ ಹತ್ತಾರು ಬಗೆಯ ತಿನಿಸುಗಳನ್ನು ಉಚಿತವಾಗಿ ಹಂಚುತ್ತೇವೆ~. ನವೀನ್ತಾಜ್ ಅವರೂ ಈ ಮಾತನ್ನು ಸಮರ್ಥಿಸುತ್ತಾರೆ.
ಇಷ್ಟಾಗುವಾಗ ಉಪವಾಸ ಬಿಡುವ ಹೊತ್ತು ಸಮೀಪಿಸಿತ್ತು. ಅಡುಗೆಮನೆಯಲ್ಲಿ ಚಿಕನ್ ಕಬಾಬ್, ಉದ್ದಿನವಡೆ, ಗಂಧಸಾಲೆ ಅಕ್ಕಿಯ ಸಿಹಿಯನ್ನ ಮಾಡುತ್ತಿದ್ದ ಹೆಣ್ಣುಮಕ್ಕಳೂ, ಅಲ್ಲಲ್ಲಿ ಚದುರಿಹೋಗಿದ್ದ ಪುರುಷರೂ ಹಾಲ್ನಲ್ಲಿ ಸಮಾವೇಶಗೊಂಡರು.
ಉದ್ದುದ್ದಕ್ಕೆ ಜಮಖಾನ ಹಾಸಿ ಅದರ ನಡುವೆ 25-30 ಮಂದಿಗೆ ಎಟಕುವಷ್ಟು ಉದ್ದಕ್ಕೆ ಬಿಳಿ ಬಟ್ಟೆ ಹಾಸಿದರು.
ಉಬ್ಬಿದ ಕರಿಬೀಜ, ಬಾದಾಮಿ, ಪಿಸ್ತಾ ಹಾಕಿದ ಹಾಲಿನ ಶರಬತ್ತು, ಕೆಂಪು ಶರಬತ್ತು, ನಾಲ್ಕೈದು ಬಗೆಯ ಹಣ್ಣು, ಈರುಳ್ಳಿ ಮತ್ತು ಮಟನ್ ಸಮೋಸ, ಉದ್ದಿನವಡೆ, ಮೊಸರುವಡೆ, ಬೋಂಡ, ಸಿಹಿಯನ್ನ, ಹೀಗೆ ಹತ್ತಾರು ತಿನಿಸುಗಳು `ಸ್ಟಾರ್ಟರ್~ನಂತೆ ಬಿಳಿಬಟ್ಟೆಯ ಮೇಲಿದ್ದ ಪಿಂಗಾಣಿ ತಟ್ಟೆಗಳನ್ನು ತುಂಬಿಕೊಂಡವು.
ಖರ್ಜೂರವನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದಂತೆ ನವೀನ್ತಾಜ್ ಮತ್ತೆ ಅಲ್ಲಾಹುವಿನ ಮೊರೆಹೋದರು. ಪ್ರಾರ್ಥನೆ ಸಲ್ಲಿಸುತ್ತಾ ಭಾವುಕರಾದರು. ಕಣ್ಣೀರು ಧಾರೆಯಾಗಿ ಹರಿಯಿತು.
ಸ್ಟಾರ್ಟರ್ನೊಂದಿಗೆ ಉಪವಾಸ `ಬ್ರೇಕ್~ ಮಾಡಿದ ಪುರುಷರು ಮಸೀದಿಯಲ್ಲಿ ಸಮೂಹ ಪ್ರಾರ್ಥನೆಗೆ ಹೊರಟುನಿಂತರೆ ಹೆಣ್ಣು ಮಕ್ಕಳೆಲ್ಲ ನಮಾಜ್ ನಂತರದ ಊಟಕ್ಕೆ ಕಬಾಬ್, ಮಟನ್ ಖೀಮಾ, ತುಪ್ಪದನ್ನ, ಕುರಿ-ಕೋಳಿ ಮಾಂಸದ ಗ್ರೇವಿ, ಫ್ರೈ ಖಾದ್ಯಗಳು, ಕರಿದ ಮೀನು ಉಣಬಡಿಸಲು ಜೋಡಿಸತೊಡಗಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.