ಮಣ್ಣರಳಿ ಮಣಿಯಾಗಿ...

7

ಮಣ್ಣರಳಿ ಮಣಿಯಾಗಿ...

Published:
Updated:
ಮಣ್ಣರಳಿ ಮಣಿಯಾಗಿ...

ಪುಟ್ಟ ಮಗ ಪ್ರದ್ಯುಮ್ನ ಮಣ್ಣಲ್ಲಿ ಆಡುವುದಕ್ಕೆ ಹೋಗಿ  ಮಾಡಿಕೊಂಡು ಬಂದ ಚಿಕ್ಕದೊಂದು ಮಣ್ಣುಂಡೆಯನ್ನು ಒಲೆಗೆ ಹಾಕಿ ಬೇಯಿಸಿದಾಗ ಅದಕ್ಕೆ ದಕ್ಕಿದ ಬಣ್ಣ, ಗಟ್ಟಿತನ ಕಂಡು ಬೆರಗಾದ ರಾಜೇಶ್ವರಿ ಅವರೀಗ ಮಣ್ಣಿನಿಂದ ಒಡವೆಗಳನ್ನು ಮಾಡುವುದರಲ್ಲಿ ಸಿದ್ಧಹಸ್ತರು.ಜಾನಪದ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದು ಕೆಲವು ಕಾಲ ಉಪನ್ಯಾಸಕರಾಗಿ ಕೆಲಸ ಮಾಡಿ, ಸ್ವಯಂ ಸೇವಾ ಸಂಘಗಳಲ್ಲಿ ದುಡಿದು ನಂತರ, ರಂಗಕರ್ಮಿ ಹಾಗೂ ನೀನಾಸಂ ರಂಗ ಶಿಕ್ಷಣ ಕೇಂದ್ರದ ಅಧ್ಯಾಪಕ ಮಂಜು ಕೊಡಗು ಅವರನ್ನು ವಿವಾಹವಾಗಿ ಹೆಗ್ಗೋಡಿಗೆ ಬಂದು ನೆಲೆಸಿದರು. ಮಗುವನ್ನು ನೋಡಿಕೊಳ್ಳುತ್ತಾ ಮನೆಯಲ್ಲೇ ಉಳಿದಾಗ ಏನಾದರೂ ಹೊಸದನ್ನು ಮಾಡಬೇಕೆಂದು ತುಡಿಯುತ್ತಿದ್ದ ಮನಸ್ಸಿಗೆ, ಪುಟ್ಟ ಮಗ ತಂದುಕೊಟ್ಟ ಮಣ್ಣುಂಡೆ ಹೊಸ ದಾರಿಯನ್ನೇ ತೋರಿಸಿತ್ತು. ಕಳೆದ ಎಂಟು ವರ್ಷಗಳಿಂದ ಒಂದೂವರೆ ಸಾವಿರಕ್ಕೂ ಮಿಕ್ಕಿದ ವಿನ್ಯಾಸಗಳ ಟೆರ್ರಾಕೊಟಾ ಜ್ಯುವೆಲ್ಲರಿಗಳನ್ನು ರೂಪಿಸಿದ ರಾಜೇಶ್ವರಿಯವರು ತಯಾರಿಸುವ ಒಡವೆಗಳಿಗೆ ಬೇಡಿಕೆಗಳ ಮಹಾಪೂರವೇ ಹರಿದುಬರುತ್ತಿದೆ.ಐದ್ಹತ್ತು ರೂಪಾಯಿಗೂ ಆಕರ್ಷಕ ವಿನ್ಯಾಸದ ಬಂಗಾರವನ್ನೇ ಬೆರಗಾಗಿಸುವ ಸರಗಳು ಸಿಗುವ ಇಂದಿನ ಕಾಲದಲ್ಲಿ ನೂರಿನ್ನೂರು ರೂಪಾಯಿಗಳ ದುಬಾರಿ ಮಣ್ಣಿನ ಸರಗಳನ್ನು ಕೊಂಡುಕೊಳ್ಳುವವರು ಇರಬಹುದೇ? ಈ ಆಂತಕದಲ್ಲೇ ಒಂದಷ್ಟು ಒಡವೆಗಳನ್ನು ನೀನಾಸಂ ಸಂಸ್ಕೃತಿ ಶಿಬಿರವೊಂದರಲ್ಲಿ ಪ್ರದರ್ಶನ ಇಟ್ಟ ರಾಜೇಶ್ವರಿಯವರೇ ಆಶ್ಚರ್ಯ ಪಡುವಂತೆ ಎಲ್ಲವೂ ವ್ಯಾಪಾರವಾದವು. ಇದು ಅವರ ಒಡವೆಗಳ ರೂಪಿಸುವ ಕನಸಿಗೆ ಮತ್ತಷ್ಟು ಇಂಬನ್ನು ನೀಡಿತು. ಜಾನಪದ ಪದವಿ, ಪತಿ ಮಂಜು ಕೊಡಗು ಅವರೊಳಗಿನ ಸೃಜನಶೀಲ ಕಲಾವಿದ, ಮಲೆನಾಡಿನ ಹಸೆ ಚಿತ್ತಾರ ಮತ್ತು ಪ್ರತಿ ಮಣ್ಣಿನುಂಡೆ ಕೈಗೆ ಬಂದಾಗಲೂ ಹೊಸದನ್ನು ನಿರ್ಮಿಸಬೇಕೆನ್ನುವ ಅದಮ್ಯ ಚೈತನ್ಯ, ಆಸಕ್ತಿ– ಹೀಗೆ ಎಲ್ಲವೂ ಮೇಳೈಸಿ ರಾಜೇಶ್ವರಿಯವರ ಕೈಯಲ್ಲಿ ಇಂದು ಬರಿ ಮಣ್ಣಿನ ಒಡವೆಗಳು ತಯಾರಾಗುತ್ತಿಲ್ಲ, ಬದಲು ಒಂದೊಂದು ಒಡವೆಯೂ ಒಂದೊಂದು ಟೆರ್ರಾಕೊಟಾ ಕಲಾಕೃತಿಯಾಗಿ ಅರಳುತ್ತಿದೆ.ಇಂಥ ಒಡವೆಗಳನ್ನ ತಯಾರಿಸುವುದೇ ನಿಮ್ಮ ಆಯ್ಕೆ ಆಗಲು ಕಾರಣವೇನು ಅಂದರೆ ಅದಕ್ಕೆ ರಾಜೇಶ್ವರಿ ಹೀಗೆನ್ನುತ್ತಾರೆ. ‘ದೊಡ್ಡ ದೊಡ್ಡ ಮಣ್ಣಿನ ಗೊಂಬೆಗಳನ್ನು ತಯಾರಿಸಲು ಹೆಚ್ಚು ಕಚ್ಚಾವಸ್ತುಗಳು ಬೇಕು ಮತ್ತು ಹೆಚ್ಚು ಶ್ರಮವಹಿಸಬೇಕು. ಆದರೆ ಅಂತವುಗಳು ಕಡಿಮೆ ಬೆಲೆಗೆ ಮಾರಾಟವಾಗುತ್ತವೆ. ಒಡವೆಗಳನ್ನು ತಯಾರಿಸಲು ಒಂದು ಅಥವಾ ಎರಡು ಹಿಡಿ ಮಣ್ಣು ಸಾಕು. ತಾಳ್ಮೆ, ಶ್ರದ್ಧೆಯಿಂದ ಕೆಲಸ ಮಾಡಬೇಕು ಅಷ್ಟೇ. ಟೀವಿ ಮುಂದೆ ಕುಳಿತು ಕಾಲಹರಣ ಮಾಡುವ ಬದಲು ಇಂಥ ಕುಶಲ ಕಲೆಗಾರಿಕೆಯನ್ನು ಕಲಿತು ಸಮಯವನ್ನೂ ಕಳೆಯಬಹುದು, ಬದುಕನ್ನೂ ಸಾಗಿಸಬಹುದು ಎನ್ನುತ್ತಾರೆ.ರಾಜೇಶ್ವರಿಯವರು ತಯಾರಿಸಿರುವ ಟೆರ್ರಾಕೊಟಾ ಜ್ಯುವೆಲ್ಲರಿಗಳು ಅಮೆರಿಕ, ಅರಬ್ ರಾಷ್ಟ್ರಗಳಿಗೂ ಮಾರಾಟವಾಗುತ್ತಿವೆ. ಗ್ರಾಹಕರು ತಮ್ಮಿಷ್ಟದ ವಿನ್ಯಾಸವನ್ನು ಕಳುಹಿಸಿದರೆ ಅವುಗಳನ್ನು ಮಣ್ಣಿನಲ್ಲಿ ರೂಪಿಸಿಕೊಡುತ್ತಾರೆ. ಸಾಮಾಜಿಕ ಜಾಲತಾಣಗಳನ್ನು ರಾಜೇಶ್ವರಿಯವರು ತಮ್ಮ ಒಡವೆಗಳ ಜಾಹೀರಾತಿಗೆ ಬಳಸಿಕೊಳ್ಳುತ್ತಿದ್ದಾರೆ. ಅಂತರ್ಜಾಲದ ಜೊತೆಗೆ, ನೀನಾಸಂ ಸಂಸ್ಕೃತಿ ಶಿಬಿರಗಳಂತಹ ಕಲಾಸಕ್ತರು ಕೂಡುವಂತಹ ಸಮ್ಮೇಳನಗಳು ಇಂತಹ ಒಡವೆಗಳು ಮಾರಾಟವಾಗುವ ಬಹುದೊಡ್ಡ ಮಾರುಕಟ್ಟೆ.ರಾಜ್ಯಾದಾದ್ಯಂತ ನಡೆಯುವ ವಿವಿಧ ಸಮ್ಮೇಳನ, ಸಮಾವೇಶಗಳಲ್ಲಿ ಪ್ರದರ್ಶನ ಮಾಡಬೇಕು ಎನ್ನುತ್ತಾರೆ. ಬಿಡುವಿಲ್ಲದ ಒಡವೆಗಳ ತಯಾರಿಕೆಯಲ್ಲಿಯೂ ಕಲಿಯುವವರಿಗೆ ಉಚಿತವಾಗಿ ಈ ವಿದ್ಯೆಯನ್ನು ಧಾರೆಯೆರೆಲು ರಾಜೇಶ್ವರಿ ಸಿದ್ಧರಾಗಿದ್ದಾರೆ.ಈ ಕಲೆಗೆ ಚಿತ್ರಕಲೆಯನ್ನು ಕಲಿತವರೇ ಆಗಬೇಕೆಂದಿಲ್ಲ, ಮಣ್ಣಿನ ಬಗ್ಗೆ ಪ್ರೀತಿ ಇರುವವರು, ತಾಳ್ಮೆ ಶ್ರದ್ಧೆಯಿಂದ ಕಲಿಯುವವರಿಗೆ ಕಲಿಸಲು ಸದಾ ಸಿದ್ಧ. ನಿಮ್ಮೂರುಗಳಲ್ಲೇ ಒಂದು ತಂಡವಾಗಿ ಕಲಿಯಲು ಬಯಸಿದರೆ ಅಲ್ಲಿಗೇ ಬಂದು ಕಲಿಸಲು ಸಿದ್ಧ ಎನ್ನುತ್ತಾರೆ ರಾಜೇಶ್ವರಿ.ಯಾವುದೇ ತರಬೇತಿಯನ್ನು ಪಡೆಯದ ರಾಜೇಶ್ವರಿಯವರು ಇಂದು ಈ ಕಲೆಯಲ್ಲಿ ಅಪಾರ ಜ್ಞಾನವನ್ನು ಸಂಪಾದಿಸಿದ್ದಾರೆ. ಆ ತಿಳಿವಳಿಕೆಯನ್ನು ತಾವು ತಯಾರಿಸಿರುವ ಒಡವೆಗಳಲ್ಲಿ ಕಾಣಿಸಿದ್ದಾರೆ. ‘ತಾನು ಈಗಲೂ ಈ ಕಲೆಯ ವಿದ್ಯಾರ್ಥಿ ಎನ್ನುವ ಮನೋಭಾವದಿಂದಲೇ ಕೆಲಸಕ್ಕೆ ತೊಡಗುತ್ತೇನೆ. ಇದಕ್ಕೆ ಸ್ಫೂರ್ತಿ ಬಾಳಸಂಗಾತಿ ಮಂಜುಕೊಡಗು ಮತ್ತು ತನ್ನ ತಂದೆಯವರು’ ಎಂದು ಮನದುಂಬಿ ಹೇಳುತ್ತಾರೆ ರಾಜೇಶ್ವರಿ.ಪರಿಸರ ಸ್ನೇಹಿಯಾದ ಈ ಒಡವೆಗಳು ಕೊಂಚ ದುಬಾರಿಯೆನಿಸಿದರೂ ಅವುಗಳ ಆಕರ್ಷಕ ವಿನ್ಯಾಸ, ಸೂಕ್ಷ್ಮ ಕಲೆಗಾರಿಕೆ ಸಹೃದಯರನ್ನು ಸೆಳೆಯುತ್ತವೆ. ಮಣ್ಣಿಂದ ಪಾತ್ರೆ ಪಗಡಿಗಳನ್ನು ಮಾಡಿ ಜೀವನ ನಡೆಸುತ್ತಿದ್ದ ಅದೆಷ್ಟೋ ಕುಟುಂಬಗಳು ಇಂದು ಕುಂಬಾರಿಕೆಯನ್ನು ಬಿಟ್ಟು ಬೇರೆ ವೃತ್ತಿ ಆಶ್ರಯಿಸಿವೆ. ಆಧುನಿಕ ಜೀವನ ಶೈಲಿಗೆ ಬದಲಾದ ನಮ್ಮ ಅಡುಗೆ ಮನೆಗಳು ಮಣ್ಣಿನ ಪಾತ್ರೆಗಳನ್ನು ಆಚೆ ತಳ್ಳಿವೆ ಹಾಗೆಯೇ ಕುಂಬಾರಿಕೆಯನ್ನೂ! ಮಣ್ಣಿನ ಬಗ್ಗೆ ಪ್ರೀತಿ ಗೌರವವಿರುವ ಇಂತಹ ಕುಟುಂಬಗಳು ಟೆರ್ರಾಕೊಟಾ ಜ್ಯುವೆಲ್ಲರಿಗಳಿಗೆ ತಮ್ಮನ್ನು ರೂಪಾಂತರಿಸಿಕೊಂಡರೆ ಕಳೆದುಹೋದ ಬದುಕಿನ ವೈಭವ ಮರುಕಳಿಸಬಹುದು. ರಾಜ್ಯದಲ್ಲಿ ಹೊಸದಾಗಿ ಆರಂಭಗೊಂಡ ಜಾನಪದ ವಿಶ್ವವಿದ್ಯಾಲಯ ರಾಜೇಶ್ವರಿಯವರಂತಹ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಂಡು ಕನ್ನಡನಾಡಿನ ಮಣ್ಣಿನ ಕಲೆಗಾರಿಕೆಗೆ ಹೊಸ ರೂಪ ಕೊಡುವ ಪ್ರಯತ್ನವನ್ನೂ ಮಾಡಬಹುದು.ಹೆಗ್ಗೋಡಿಗೆ ಹೋದಾಗ ರಾಜೇಶ್ವರಿಯವರು ತಯಾರಿಸಿದ ಮಣ್ಣಿನೊಡವೆಗಳ ಸಂಗ್ರಹವನ್ನು ನೋಡಲು ಮತ್ತು ಕೊಂಡುಕೊಳ್ಳಲು ಮರೆಯದಿರಿ.ಅವರ ಸಂಪರ್ಕ ಸಂಖ್ಯೆ : ೯೯೦೧೨ ೭೨೭೯೧.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry