ಶನಿವಾರ, ಮೇ 8, 2021
18 °C

ಮಣ್ಣಿನಲ್ಲಿ ಅರಳಿದ ಬಸವಣ್ಣ

ಶಿವರಂಜನ್ ಸತ್ಯಂಪೇಟೆ /ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಜಗಜ್ಯೋತಿ, ಸಮಾಜ ಸುಧಾರಕ ಬಸವಣ್ಣನವರ ಜಯಂತ್ಯುತ್ಸವ ಏ. 24ರಂದು ಎಲ್ಲೆಡೆ ಆಚರಿಸಲಾಗುತ್ತಿದೆ. ಜಯಂತಿ ನಿಮಿತ್ತವಾಗಿ ಉಪನ್ಯಾಸ, ವಿಚಾರ ಸಂಕಿರಣದಂತಹ ವೈವಿಧ್ಯಮಯ ಕಾರ್ಯಕ್ರಮಗಳ ಆಯೋಜನೆ ಜೊತೆಗೆ ಅದ್ದೂರಿ ಮೆರವಣಿಗೆಗೆ ಸಿದ್ಧತೆ ನಡೆಯುತ್ತಿದೆ.ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ಬಸವಣ್ಣನವರ ಕುರಿತು ವಿಶೇಷ ಏನಿರಬಹುದು? ಎಂದು ಹುಡುಕುತ್ತಿರುವಾಗ ಗುಲ್ಬರ್ಗದ ನ್ಯೂ ರಾಘವೇಂದ್ರ ಕಾಲೊನಿಯ ನಾಡೋಜ ನಾಗಣ್ಣ ಬಡಿಗೇರ ಶಿಲ್ಪ ಕಲಾ ಕೇಂದ್ರದಲ್ಲಿ ಬಸವಣ್ಣನವರ ಪಂಚಲೋಹದ ಮೂರ್ತಿಗೆ ಸ್ಪರ್ಶ ನೀಡುತ್ತಿರುವ ಯುವ ಕಲಾವಿದ ವರದರಾಜ್ ಮಾನಯ್ಯ ಬಡಿಗೇರ ಕಣ್ಣಿಗೆ ಬಿದ್ದರು. ಬಸವಣ್ಣನವರ ಮೂರ್ತಿ ನಿರ್ಮಾಣದ ಬಗ್ಗೆ ಹಾಗೂ ತಮ್ಮ ಕಲಾ ಬದುಕಿನ ಬಗ್ಗೆ `ಪ್ರಜಾವಾಣಿ~ಯೊಂದಿಗೆ ಹಂಚಿಕೊಂಡರು.ಗುಲ್ಬರ್ಗದ ಮೃತ್ಯುಂಜಯ ಟ್ರೇಡರ್ಸ್‌ನ ಮಾಲೀಕರಾದ ಸೋಮಣ್ಣ ನಡಕಟ್ಟಿ ಅವರು ಮೂರ್ತಿ ನಿರ್ಮಾಣ ಮಾಡಲು ಆರ್ಡರ್ ಕೊಟ್ಟಿದ್ದಾರೆ. ಸುಮಾರು 2.50 ಅಡಿ ಎತ್ತರದ ಈ ಮೂರ್ತಿಯನ್ನು ಪಂಚಲೋಹದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಮೂರ್ತಿ ಕೆತ್ತನೆಗೆ ರೂ. 1,50,000 ನಿಗದಿ ಪಡಿಸಿದ್ದೇವೆ.ಇದಕ್ಕೆ ಅಗತ್ಯವಾದ ಸಾಮಗ್ರಿಗಳನ್ನು ಅವರೇ ಭರಿಸಬೇಕು ಎಂದು ಹೇಳುತ್ತಾರೆ. ಬಸವಣ್ಣನವರ ತದ್ರೂಪದಂತೆ ಮಣ್ಣಿನಲ್ಲಿ ವಿಗ್ರಹ ನಿರ್ಮಾಣ ಕಾರ್ಯ ನಡೆದಿದ್ದು, ಎಡಗೈಯಲ್ಲಿ ಇಷ್ಟಲಿಂಗ, ಬಲಗೈಯನ್ನು ಎಡಗೈಗೆ ಆಧಾರವಾಗಿ ಹಿಡಿದ, ಕೊರಳಲ್ಲಿ, ಕೈಯಲ್ಲಿ ರುದ್ರಾಕ್ಷಿ ಧರಿಸಿದ ಇಷ್ಟಲಿಂಗ ಪೂಜಾ ನಿರತ ಬಸವಣ್ಣನವರ ವಿಗ್ರಹ ನಿಜಕ್ಕೂ ಮೋಹಕವಾಗಿದೆ.ತಯಾರಿಸುವ ವಿಧಾನ: ಮೊದಲು ಜೇಡಿಮಣ್ಣಿನಿಂದ ಮೂರ್ತಿ ತಯಾರಿಸಿ ದಪ್ಪನೆಯ ಮೇಣ ಹಚ್ಚಲಾಗುತ್ತದೆ. ಅದರ ಮೇಲೆ ಮತ್ತೊಮ್ಮೆ ಎರಡು ಮೂರು ಇಂಚು ಮಣ್ಣು ಮೆತ್ತಲಾಗುತ್ತದೆ. ಆಮೇಲೆ ಇಟ್ಟಿಗೆ ಪೌಡರ್, ಪ್ಲಾಸ್ಟರ್ ಆಫ್ ಪ್ಯಾರಿಸ್ ಸೇರಿಸಿ ಮೂರು ಪದರದಲ್ಲಿ ಮೂರ್ತಿಗೆ ಮೆತ್ತಲಾಗುವುದು.ಮೂರ್ತಿಯನ್ನು 8ರಿಂದ 9 ತಾಸು ಒಣಗಿಸಿ ಸುಡಲಾಗುವುದು. ಆಗ ಮೇಣ ಕರಗುವುದು. ಖಾಲಿಯಾದ ಮೋಲ್ಡ್‌ಗೆ ಕಂಚಿನ ಲೋಹ ತುಂಬಲಾಗುವುದು. ಮೇಣದ ತೂಕದಷ್ಟು 11 ಸಲ ಪಂಚಲೋಹ ಕರಗಿಸಿ ಸಿದ್ಧಪಡಿಸಲಾಗುತ್ತದೆ. ಮೂರ್ತಿಯ ಭಾರ 60ರಿಂದ 70 ಕೆ.ಜಿ. ಇರುತ್ತದೆ.ನಾಡೋಜ ದಿ. ನಾಗಣ್ಣ ಬಡಿಗೇರ ಅವರ ಮೊಮ್ಮಗನಾಗಿರುವ ವರದರಾಜ, ಮೈಸೂರು ಮುಕ್ತ ವಿಶ್ವವಿದ್ಯಾಲಯದ ಶಿಲ್ಪಕಲಾ ವಿಭಾಗದ ಎರಡನೆ ವರ್ಷದ ಬಿಎಫ್‌ಎ ಅಭ್ಯಾಸ ಮಾಡುತ್ತಿದ್ದಾರೆ.ಸಾಂಪ್ರದಾಯಿಕ ಕಲೆಯ ಜೊತೆಗೆ ವಾಸ್ತವಿಕ ಕಲೆ ಕುರಿತು ಆಸಕ್ತಿ ಹೊಂದಿದ್ದರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜೋಗೂರು ದೊಡ್ಡಿಯಲ್ಲಿರುವ `ಪ್ರಭು ಕರಕುಶಲ ತರಬೇತಿ ಕೇಂದ್ರ~ದ ಸಿದ್ದಪ್ಪ ಗುರುಗಳ ಬಳಿ ತರಬೇತಿ ಪಡೆದು ಬಂದಿದ್ದಾರೆ.ಆನಂತರ ಕಾರ್ಕಳದ ಗುಣವಂತೇಶ್ವರ ಭಟ್ ಅವರ ಹತ್ತಿರ ಶಿಲ್ಪ, ಕಟ್ಟಿಗೆ ಕೆಲಸ ಕಲಿತುಕೊಂಡಿದ್ದಾರೆ. ಇದೆಲ್ಲದಕ್ಕೂ ಮಿಗಿಲಾಗಿ ಮನೆಯೇ ಮೊದಲ ಪಾಠಶಾಲೆ ಎನ್ನುವಂತೆ ತಂದೆ ಮಾನಯ್ಯ, ತಾಯಿ ಶಕುಂತಲಾ ಅವರ ಬಳಿಯೇ ಹೆಚ್ಚು ಕಲಿತದ್ದು ಎಂದು ವಿನಮ್ರವಾಗಿ ಹೇಳುತ್ತಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.